ದೇಶದ್ರೋಹ ಪ್ರಕರಣಕ್ಕಿಂತಲೂ ಯುಎಪಿಎ ಕಾಯಿದೆಯಡಿ ಜಾಮೀನು ದೊರೆಯುವುದು ದುಸ್ತರ: ಅರವಿಂದ್ ನಾರಾಯಣ್

“ದೇಶದ್ರೋಹ ಕಾಯಿದೆಯಿಂದಾಗಿ ಮಾತನಾಡಿದ್ದಕ್ಕೆ ಶಿಕ್ಷೆ ಆಗುತ್ತದೆ. ಇಂತಹ ಕಾಯಿದೆಗೆ ಪ್ರಜಾಪ್ರಭುತ್ವದಲ್ಲಿ ಜಾಗ ಇಲ್ಲ ಎಂಬುದಾಗಿ ಮಹಾತ್ಮ ಗಾಂಧಿ ತಿಳಿಸಿದ್ದರು" ಎಂದರು.
Arvind Narrain, Founder member, Alternative Law Forum
Arvind Narrain, Founder member, Alternative Law Forum
Published on

ವಸಾಹತುಶಾಹಿ ಭಾರತದಲ್ಲಿ ಜಾರಿಗೆ ಬಂದ ದೇಶದ್ರೋಹ ಪ್ರಕರಣಕ್ಕಿಂತಲೂ ಸ್ವತಂತ್ರ ಭಾರತದಲ್ಲಿ ಜಾರಿಯಲ್ಲಿರುವ ಯುಎಪಿಎ ಕಾಯಿದೆಯಡಿ ಪ್ರಕರಣ ದಾಖಲಿಸುವುದು ದುಸ್ತರ ಎಂದು ʼಆಲ್ಟರ್ನೇಟಿವ್‌ ಲಾ ಫೋರಂʼ ಸಂಸ್ಥಾಪಕ ಸದಸ್ಯ ಅರವಿಂದ್‌ ನಾರಾಯಣ್‌ ಅಭಿಪ್ರಾಯಪಟ್ಟರು.

ʼನ್ಯಾಯಪಥʼ ಮತ್ತು ʼನಾನು ಗೌರಿʼ ಆನ್‌ಲೈನ್‌ ಪತ್ರಿಕೆ ಶನಿವಾರ ಏರ್ಪಡಿಸಿದ್ದ ʼಸೆಡಿಷನ್‌/ದೇಶದ್ರೋಹ ಕಾನೂನಿನ ದುರ್ಬಳಕೆ ಮತ್ತು ಈ ಕಾನೂನಿನ ಅಪ್ರಸ್ತುತತೆʼ ಕುರಿತ ವೆಬಿನಾರ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಇದೊಂದು ಕರಾಳ ಕಾನೂನು. ಯುಎಪಿಎ ಕಾನೂನಿಂದಾಗಿ ಭೀಮಾ ಕೋರೆಗಾಂವ್‌ ಮತ್ತು ಸಿಎಎ ಘಟನೆಗಳಲ್ಲಿ ಅನೇಕರು ವರ್ಷಾನುಗಟ್ಟಲೆ ಶಿಕ್ಷೆ ಅನುಭವಿಸುತ್ತಿದ್ದಾರೆ” ಎಂದು ಅವರು ತಿಳಿಸಿದರು.

Also Read
ದೇಶದ್ರೋಹ ಪ್ರಕರಣ: ಲಕ್ಷದ್ವೀಪದ ನಟಿ ಆಯಿಷಾಗೆ ಬಂಧನದಿಂದ ಒಂದು ವಾರ ಕಾಲ ಮಧ್ಯಂತರ ರಕ್ಷಣೆ ನೀಡಿದ ಕೇರಳ ಹೈಕೋರ್ಟ್

“ಇಂದಿರಾಗಾಂಧಿ ಅವರ ಹತ್ಯೆಯಾದಾಗ ಪಂಜಾಬಿನ ರಸ್ತೆಯಲ್ಲಿ ಇಬ್ಬರು ಖಲೀಸ್ತಾನ್‌ ಜಿಂದಾಬಾದ್‌ ಎಂದು ಕೂಗಿದರು. ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಯಿತು. ಆದರೆ ಹಾಗೆ ಕೂಗಿದ್ದರಿಂದ ಯಾರಿಗೂ ಹಾನಿ ಆಗಲಿಲ್ಲ ಎಂದು ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್‌ ಪ್ರಕರಣವನ್ನು ವಜಾಗೊಳಿಸಿತು” ಎಂದರು.

“ಪತ್ರಕರ್ತ ವಿನೋದ್‌ ದುವಾ ವಿರುದ್ಧದ ದೇಶದ್ರೋಹ ಪ್ರಕರಣ ವಜಾ ಮಾಡಿದ ಸುಪ್ರೀಂಕೋರ್ಟ್‌, ದುವಾ ಅವರು ಆಡಿದ ಮಾತು ಕಾನೂನಿನಿಂದ ಸ್ಥಾಪಿತವಾದ ಸರ್ಕಾರದ ವಿರುದ್ಧ ಇರಲಿಲ್ಲ. ಅವರ ಮಾತು ವಲಸೆ ಕಾರ್ಮಿಕರನ್ನು ಪ್ರಚೋದಿಸಲಿಲ್ಲ. ಸರ್ಕಾರವನ್ನು ಟೀಕಿಸುವುದು ಪತ್ರಕರ್ತರ ಹಕ್ಕು ಎಂದು ಅಭಿಪ್ರಾಯಪಟ್ಟಿತು" ಎಂಬುದಾಗಿ ಹೇಳಿದರು.

ತಿಲಕ್‌ ಪರ ವಾದ ಮಂಡಿಸಿದ್ದ ಜಿನ್ನಾ

ಕಾರ್ಯಕ್ರಮದ ಆರಂಭದಲ್ಲಿ ದೇಶದ್ರೋಹ ಕಾನೂನಿನ ಇತಿಹಾಸವನ್ನು ವಿವರಿಸಿದ ಅವರು ಸ್ವಾತಂತ್ರ್ಯ ಹೋರಾಟಗಾರ “ಬಾಲಗಂಗಾಧರ್‌ ತಿಲಕ್‌ ವಿರುದ್ಧ ಮೂರು ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದವು. ಎರಡು ಪ್ರಕರಣಗಳಲ್ಲಿ ಅವರು ದೋಷಿ ಎನಿಸಿಕೊಂಡರು. ಮತ್ತೊಂದು ಪ್ರಕರಣದಲ್ಲಿ ಅವರನ್ನು ಬರ್ಮಾಗೆ ಗಡಿಪಾರು ಮಾಡಲಾಯಿತು. ಆಸಕ್ತಿಕರ ಸಂಗತಿ ಎಂದರೆ ಆಗ ತಿಲಕ್‌ ಅವರ ಪರ ವಕೀಲರಾಗಿ ವಾದ ಮಂಡಿಸಿದ್ದು (ಪಾಕಿಸ್ತಾನದ ರಾಷ್ಟ್ರಪಿತ) ಮುಹಮ್ಮದ್‌ ಅಲಿ ಜಿನ್ನಾ” ಎಂದರು.

“ಮಹಾತ್ಮ ಗಾಂಧಿ ಅವರು ದೇಶದ್ರೋಹ ಕಾಯಿದೆಯಿಂದಾಗಿ ಮಾತನಾಡಿದ್ದಕ್ಕೆ ಶಿಕ್ಷೆ ಆಗುತ್ತದೆ. ಇಂತಹ ಕಾಯಿದೆಗೆ ಪ್ರಜಾಪ್ರಭುತ್ವದಲ್ಲಿ ಜಾಗ ಇಲ್ಲ ಎಂದಿದ್ದರು. ರಾಜಕೀಯ ಸ್ವಾತಂತ್ರ್ಯ ವಿರೋಧಿಸುವ ಕಾಯಿದೆಗಳ ರಾಜ ಇದು ಎಂದು ಅವರು ಬಣ್ಣಿಸಿದ್ದರು” ಎಂಬುದಾಗಿ ತಿಳಿಸಿದರು.

ಉಪನ್ಯಾಸದ ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು. ಬರಹಗಾರ ಆಕೃತಿ ಗುರುಪ್ರಸಾದ್‌, ಸಾಮಾಜಿಕ ಕಾರ್ಯಕರ್ತ ಡಾ. ವಾಸು ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Kannada Bar & Bench
kannada.barandbench.com