[ಗಾಜಿಯಾಬಾದ್‌ ದಾಳಿ ವಿಡಿಯೊ] ಟ್ವಿಟರ್‌ನ ಮನೀಶ್‌ ಮಹೇಶ್ವರಿ ಮನವಿ ತೀರ್ಪು ಮುಂದೂಡಿದ ಕರ್ನಾಟಕ ಹೈಕೋರ್ಟ್‌

ಉಲ್ಲೇಖಿಸಲಾಗಿರುವ ಪೂರ್ವ ನಿದರ್ಶನವನ್ನು ಮತ್ತೊಮ್ಮೆ ಪರಿಶೀಲಿಸಬೇಕಿದೆ. ಈ ಮೂಲಕ ತೀರ್ಪಿನಲ್ಲಿ ದೋಷ ಕಾಣಸಿಗಬಾರದು ಎಂಬ ಕಾರಣಕ್ಕೆ ಜುಲೈ 20ಕ್ಕೆ ತೀರ್ಪು ಪ್ರಕಟಣೆ ಮುಂದೂಡಲಾಗಿದೆ ಎಂದು ನ್ಯಾಯಮೂರ್ತಿ ಜಿ ನರೇಂದರ್‌ ನೇತೃತ್ವದ ಪೀಠ ಹೇಳಿದೆ.
Manish Maheshwari and twitter with karnataka HC
Manish Maheshwari and twitter with karnataka HC

ಗಾಜಿಯಾಬಾದ್‌ ದಾಳಿ ವಿಡಿಯೊಗೆ ಸಂಬಂಧಿಸಿದಂತೆ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 41ಎ ಅಡಿ ಉತ್ತರ ಪ್ರದೇಶ ಪೊಲೀಸರು ನೀಡಿರುವ ನೋಟಿಸ್‌ ಅನ್ನು ಪ್ರಶ್ನಿಸಿ ಟ್ವಿಟರ್‌ನ ಮನೀಶ್‌ ಮಹೇಶ್ವರಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದ ತೀರ್ಪನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್‌ ಮುಂದೂಡಿದೆ.

ಉಲ್ಲೇಖಿಸಲಾಗಿರುವ ಪೂರ್ವ ನಿದರ್ಶನವನ್ನು ಮತ್ತೊಮ್ಮೆ ಪರಿಶೀಲಿಸಬೇಕಿದೆ. ಈ ಮೂಲಕ ತೀರ್ಪಿನಲ್ಲಿ ಯಾವುದೇ ತೆರನಾದ ದೋಷ ಕಾಣಸಿಗಬಾರದು ಎಂಬ ಕಾರಣಕ್ಕಾಗಿ ಜುಲೈ 20ಕ್ಕೆ ತೀರ್ಪು ಪ್ರಕಟಣೆಯನ್ನು ಮುಂದೂಡಲಾಗಿದೆ ಎಂದು ನ್ಯಾಯಮೂರ್ತಿ ಜಿ ನರೇಂದರ್‌ ನೇತೃತ್ವದ ಏಕಸದಸ್ಯ ಪೀಠವು ಹೇಳಿದೆ.

“ಉಲ್ಲೇಖಗಳನ್ನು ಪರಿಶೀಲಿಸಲು ನನಗೆ ಹೆಚ್ಚಿನ ಕಾಲಾವಕಾಶಬೇಕಿದೆ. ವ್ಯಾಪ್ತಿಗೆ ಸಂಬಂಧಿಸಿದ ಪ್ರಶ್ನೆ ಕುರಿತಾಗಿ ತೀರ್ಪುಗಳನ್ನು ಕೂಲಂಕಷವಾಗಿ ಪರಿಶೀಲಿಸಲು ನಾನು ಬಯಸಿದ್ದೇನೆ. ಇದರಲ್ಲಿ ತಪ್ಪು ಮಾಡಲು ನಾನು ಬಯಸುವುದಿಲ್ಲ. ಮುಂದಿನ ಮಂಗಳವಾರ ಆದೇಶ ಹೊರಡಿಸಲಾಗುವುದು” ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಸೆಕ್ಷನ್ 41ಎ ಸಿಆರ್‌ಪಿಸಿ ಅಡಿಯಲ್ಲಿ ನೀಡಿರುವ ನೋಟಿಸ್ ಅನ್ನು ಪ್ರಶ್ನಿಸಿ ಮಹೇಶ್ವರಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ವಯಸ್ಸಾದ ಮುಸ್ಲಿಂ ವ್ಯಕ್ತಿಯೊಬ್ಬರನ್ನು ತನ್ನ ಗಡ್ಡದ ಕ್ಷೌರ ಮಾಡುವಂತೆ ಮತ್ತು ಅದೇ ಸಂದರ್ಭದಲ್ಲಿ "ವಂದೇ ಮಾತರಂ" ಹಾಗೂ "ಜೈ ಶ್ರೀ ರಾಮ್" ಎಂದು ಜಪಿಸಲು ವ್ಯಕ್ತಿಯೊಬ್ಬ ಒತ್ತಾಯಿಸುವ ವಿಡಿಯೊ ಒಳಗೊಂಡ ಟ್ವೀಟ್‌ ಆಧರಿಸಿ ಟ್ವಿಟರ್‌ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಮು ಆಯಾಮವನ್ನು ಅಲ್ಲಗಳೆದಿದ್ದ ಉತ್ತರ ಪ್ರದೇಶ ಪೊಲೀಸರು ಹಿರಿಯರಾದ ಸೂಫಿ ಅಬ್ದುಲ್‌ ಸಮಾದ್‌ ಅವರು ನೀಡಿದ್ದ ತಾಯತಗಳಿಗೆ ಅಸಮಾಧಾನ ವ್ಯಕ್ತಪಡಿಸಿದ್ದ ಆರು ಮಂದಿ ಅವರ ಮೇಲೆ ದಾಳಿ ನಡೆಸಿದ್ದರು ಎಂದು ಹೇಳಿದ್ದರು.

Also Read
[ಟ್ವಿಟರ್‌ನ ಮನೀಶ್‌ ಮಹೇಶ್ವರಿ ಪ್ರಕರಣ] ಮಾಧ್ಯಮ ವರದಿಗಳ ಬಗ್ಗೆ ಅಸಂತೋಷ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್‌

ವಾಸ್ತವ ಸಂಗತಿಯನ್ನು ಪರಿಶೀಲಿಸದೆ ವಿಡಿಯೊ ಟ್ವೀಟ್‌ ಮಾಡಿ ಅದಕ್ಕೆ ಕೋಮು ಬಣ್ಣ ನೀಡಿ ವಿಭಿನ್ನ ಸಮುದಾಯಗಳ ನಡುವೆ ದ್ವೇಷ ಹರಡುವ ಕೆಲಸ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು. ಮನೀಶ್‌ ಮಹೇಶ್ವರಿಗೆ ಸೆಕ್ಷನ್‌ 41ಎ ಅಡಿ ನೋಟಿಸ್‌ ನೀಡಿದ್ದ ಉತ್ತರ ಪ್ರದೇಶ ಪೊಲೀಸರು, ಲೋನಿ ಬಾರ್ಡರ್‌ ಪೊಲೀಸ್‌ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಇದನ್ನು ಪ್ರಶ್ನಿಸಿ ಮಹೇಶ್ವರಿ ಅವರು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು ಅವರಿಗೆ ಮಧ್ಯಂತರ ರಕ್ಷಣೆ ನೀಡಿತ್ತು. ಉತ್ತರ ಪ್ರದೇಶ ಪೊಲೀಸರು ನಡೆಸುತ್ತಿರುವ ತನಿಖೆಗೆ ಅಡ್ಡಿ ಮಾಡುವ ಉದ್ದೇಶವನ್ನು ತಮ್ಮ ಕಕ್ಷಿದಾರ ಹೊಂದಿಲ್ಲ ಎಂದು ಟ್ವಿಟರ್‌ ಇಂಡಿಯಾದ ಉದ್ಯೋಗಿ ಮನೀಶ್‌ ಮಹೇಶ್ವರಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಹೇಳಿದ್ದರು. ಈ ಸಂಬಂಧ ನ್ಯಾಯಾಲಯವು ಕಳೆದ ವಾರ ಆದೇಶ ಕಾಯ್ದಿರಿಸಿತ್ತು.

Kannada Bar & Bench
kannada.barandbench.com