ಗಿಗ್‌ ಕಾರ್ಮಿಕರ ಕಲ್ಯಾಣ ಶುಲ್ಕವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲು ಹೈಕೋರ್ಟ್‌ ನಿರ್ದೇಶನ; ಕಾಯಿದೆ ತಡೆ ಸ್ಪಷ್ಟ ನಕಾರ

'ಪ್ಲಾಟ್‌ಫಾರ್ಮ್‌ ಆಧಾರಿತ ಗಿಗ್‌ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕಾಯ್ದೆ 2025' ಮತ್ತು ಅದರಡಿ ರೂಪಿಸಿರುವ ನಿಯಮಗಳಿಗೆ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್‌.
ಗಿಗ್‌ ಕಾರ್ಮಿಕರ ಕಲ್ಯಾಣ ಶುಲ್ಕವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲು ಹೈಕೋರ್ಟ್‌ ನಿರ್ದೇಶನ; ಕಾಯಿದೆ ತಡೆ ಸ್ಪಷ್ಟ ನಕಾರ
Published on

ಗಿಗ್‌ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದ ಎರಡನೇ ಕಂತಿನ ಕಲ್ಯಾಣ ಶುಲ್ಕವನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಠೇವಣಿ ಇಡಬೇಕು ಎಂದು ಸ್ವಿಗ್ಗಿ, ಜೊಮ್ಯಾಟೊ, ಇಂಟರ್‌ನೆಟ್‌ ಅಂಡ್‌ ಮೊಬೈಲ್‌ ಮೊಬೈಲ್‌ ಅಸೋಸಿಯೇಶನ್‌ಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದ್ದು, ಈ ಸಂಸ್ಥೆಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

'ಪ್ಲಾಟ್‌ಫಾರ್ಮ್‌ ಆಧಾರಿತ ಗಿಗ್‌ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕಾಯ್ದೆ 2025' ಮತ್ತು ಅದರಡಿ ರೂಪಿಸಿರುವ ನಿಯಮಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಇ-ಕಾಮರ್ಸ್‌ ಮತ್ತು ಗ್ರಾಹಕ ತಂತ್ರಜ್ಞಾನ ಸಂಸ್ಥೆಯಾದ ಸ್ವಿಗ್ಗಿ, ಝೊಮ್ಯಾಟೊ, ಝೆಪ್ಟೊ, ಅರ್ಬನ್‌ ಕಂಪನಿಗಳು ಜಂಟಿಯಾಗಿ ಅರ್ಜಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice M Nagaprasanna
Justice M Nagaprasanna

“ಗಿಗ್‌ ಕಾರ್ಮಿಕರು ಹಗಲು ರಾತ್ರಿಯೆನ್ನದೆ, ಬಿಸಿಲು, ಮಳೆ, ಚಳಿ ಲೆಕ್ಕಿಸದೇ ಸವಾಲಿನ ವೇಗದಲ್ಲಿ ಡೆಲಿವರಿ ಮಾಡಿ ಸೇವೆ ಸಲ್ಲಿಸುತ್ತಾರೆ. ಇಂತಹ ಇವರ ಸೇವೆಗೆ ಪ್ರತಿಯಾಗಿ ಕಂಪನಿಗಳು ಊಟ, ತಿಂಡಿ ಡೆಲಿವರಿಗೆ ಶೇ 40ಕ್ಕೂ ಅಧಿಕ ಶುಲ್ಕ ಪಡೆಯುತ್ತಾರೆ. ಆದರೆ, ಗಿಗ್‌ ಕಾರ್ಮಿಕರಿಗೆ ಅದರಲ್ಲಿ 50 ಪೈಸೆ ನೀಡಲು ಹಿಂದೇಟು ಏಕೆ’ ಎಂದು ನ್ಯಾಯಾಲಯ ಪ್ರಶ್ನಿಸಿತು.

ಅರ್ಜಿದಾರರ ಪರ ಹಿರಿಯ ವಕೀಲರಾದ ಧ್ಯಾನ್‌ ಚಿನ್ನಪ್ಪ ಮತ್ತು ಸಿ ಕೆ ನಂದಕುಮಾರ್‌ ಅವರು “ಕೇಂದ್ರ ಸರ್ಕಾರವು ಇಡೀ ದೇಶಕ್ಕೇ ಅನ್ವಯವಾಗುವಂತೆ; ಗಿಗ್‌ ಮತ್ತು ‍‍ಪ್ಲ್ಯಾಟ್‌ಫಾರ್ಮ್‌ ಕಾರ್ಮಿಕರನ್ನು ಒಳಗೊಂಡಂತೆ ಇಡೀ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಸಾಮಾಜಿಕ ಭದ್ರತಾ ಸಂಹಿತೆ-2020 ಎಂಬ ಸಮಗ್ರ ಹಾಗೂ ಏಕರೂಪದ ಕಾನೂನು ಜಾರಿಗೊಳಿಸಿದೆ. ಈ ಕಾನೂನು ಜಾರಿಯಲ್ಲಿರುವಾಗ ರಾಜ್ಯ ಸರ್ಕಾರ ಅದೇ ವಿಷಯದ ಮೇಲೆ ಪ್ರತ್ಯೇಕ ಮತ್ತು ಸಮಾನಾಂತರ ಕಾನೂನನ್ನು ರೂಪಿಸಿರುವುದು ಅಸಾಂವಿಧಾನಿಕ‌’ ಎಂದರು.

‘ಕೇಂದ್ರ ಕಾಯಿದೆ ಅನುಸಾರ ಕಂಪನಿಗಳು ಈಗಾಗಲೇ ವಾರ್ಷಿಕ ವಹಿವಾಟಿನ ಆಧಾರದ ಮೇಲೆ ಸಾಮಾಜಿಕ ಭದ್ರತಾ ನಿಧಿಗೆ ದೇಣಿಗೆ ಪಾವತಿಸಬೇಕಿದೆ. ಆದರೆ, ರಾಜ್ಯ ಸರ್ಕಾರದ ಆದೇಶದಂತೆ ಅಗ್ರಿಗೇಟರ್‌ಗಳಿಗೆ ಪ್ರತಿ ಡೆಲಿವರಿ ಬೈಕ್‌ಗೆ 50 ಪೈಸೆ ಮತ್ತು ತ್ರಿಚಕ್ರ ವಾಹನಕ್ಕೆ 75 ಪೈಸೆ ಹಾಗೂ ನಾಲ್ಕು ಚಕ್ರಗಳ ವಾಹನಕ್ಕೆ ಒಂದು ರೂಪಾಯಿ ಶುಲ್ಕ ವಿಧಿಸಿದೆ. ಆದರೆ, ಈ ಹಣವನ್ನು ಬಳಸಲು ಯೋಜನೆಯನ್ನೇ ರೂಪಿಸಿಲ್ಲ” ಎಂದು ಆಕ್ಷೇಪಿಸಿದರು. 

ಈ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ, “ಗಿಗ್‌ ಕಾರ್ಮಿಕರಿಗಾಗಿ ಹಣ ಬಳಕೆ ಮಾಡುವ ನಿಟ್ಟಿನಲ್ಲಿ ಮಂಡಳಿಯೊಂದನ್ನು ರಚಿಸಲಾಗಿದೆ. ಆ ಶುಲ್ಕವನ್ನು ಗಿಗ್‌ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಬಳಸಲಾಗುವುದು” ಎಂದು ಪೀಠದ ಗಮನಕ್ಕೆ ತಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು “ರಾಜ್ಯ ಸರ್ಕಾರ ಪ್ರತಿ ವಹಿವಾಟಿನ ಆಧಾರದ ಮೇಲೆ ಪ್ರತ್ಯೇಕ ಕಲ್ಯಾಣ ಶುಲ್ಕ ವಿಧಿಸುತ್ತಿರುವುದು ಉದ್ಯಮಗಳ ಮೇಲೆ ಭಾರಿ ಆರ್ಥಿಕ ಹೊರೆ ಬೀಳಲಿದೆ” ಎಂದು ಪ್ರತಿಪಾದಿಸಿದರು.

ವಾದ–ಪ್ರತಿವಾದ ಆಲಿಸಿದ ಪೀಠವು “ಅಗ್ರಿಗೇಟರ್‌ ಕಂಪನಿಗಳು ಹೈಕೋರ್ಟ್‌ ಖಾತೆಯಲ್ಲಿ ಗಿಗ್‌ ಶುಲ್ಕವನ್ನು ಮೂರು ವಾರಗಳಲ್ಲಿ ಠೇವಣಿ ಇರಿಸಬೇಕು” ಎಂದು ಸೂಚಿಸಿ ವಿಚಾರಣೆಯನ್ನು ಆಗಸ್ಟ್ 14ಕ್ಕೆ ಮುಂದೂಡಿತು. ಅಂತೆಯೇ, ಅಲ್ಲಿಯವರೆಗೂ ಕಂಪನಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸರ್ಕಾರಕ್ಕೆ ನಿರ್ದೇಶಿಸಿತು.

Kannada Bar & Bench
kannada.barandbench.com