ʼಶುಚಿʼ ಯೋಜನೆಯಡಿ ಕಾಲಮಿತಿಯೊಳಗೆ ಹದಿಹರೆಯದ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್/ಪ್ಯಾಡ್ ವಿತರಣೆ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ನೈರ್ಮಲ್ಯ ಉತ್ಪನ್ನಗಳ ಕೊರತೆಯಿಂದಾಗಿ ಹೆಣ್ಣು ಮಕ್ಕಳು ಋತುಸ್ರಾವದ ದಿನಗಳಲ್ಲಿ ಶಾಲೆಗೆ ಹಾಜರಾಗದಂತಾಗಬಾರದು ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಕೆ ಎಂ ಖಾಜಿ ಅವರಿದ್ದ ಪೀಠ ಆದೇಶಿಸಿದೆ. ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ 2018 ರಲ್ಲಿ ಭಾರತೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
"... ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ಒದಗಿಸಿದರೆ, ಅದು ಅವರ ಆರೋಗ್ಯ, ನೈರ್ಮಲ್ಯ ಕಾಪಾಡುವ ಜೊತೆಗೆ ಗೌಪ್ಯತೆಯನ್ನು ಹೆಚ್ಚಿಸುತ್ತದೆ. ಪರಿಣಾಮ ಶಾಲೆಗಳಲ್ಲಿ ಹದಿಹರೆಯದ ಹುಡುಗಿಯರ ಸಂಪೂರ್ಣ ಹಾಜರಾತಿ ಸಾಧ್ಯವಾಗಿ ಶಿಕ್ಷಣದ ಹಕ್ಕು ಸಾಕಾರಗೊಂಡಂತಾಗುತ್ತದೆ" ಎಂದು ಕೂಡ ನ್ಯಾಯಾಲಯ ಹೇಳಿದೆ.
ಶುಚಿ ಯೋಜನೆಯಡಿ , ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ಮತ್ತು ಹಾಸ್ಟೆಲ್‌ಗಳಲ್ಲಿರುವ 10 ರಿಂದ 19 ವರ್ಷ ವಯೋಮಾನದ ಬಾಲಕಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್/ಪ್ಯಾಡ್ ಒದಗಿಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 17,06,933 ಹದಿಹರೆಯದ ಬಾಲಕಿಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ.
ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಿ “ಏಪ್ರಿಲ್ ತಿಂಗಳ ಕೊನೆಯಲ್ಲಿ ತಾಂತ್ರಿಕ ಸಮಿತಿ ಸಭೆ ನಡೆಸಿ ಸ್ಯಾನಿಟರಿ ನ್ಯಾಪ್‌ಕಿನ್/ಪ್ಯಾಡ್‌ಗಳ ಖರೀದಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ. ಮೇ ತಿಂಗಳಲ್ಲಿ ಈ ತೀರ್ಮಾನಕ್ಕೆ ಆಡಳಿತಾತ್ಮಕ ಅನುಮೋದನೆ ಪಡೆಯಲಾಗುವುದು, ಬಳಿಕ , 90 ದಿನಗಳಲ್ಲಿ ನೈರ್ಮಲ್ಯ ಉತ್ಪನ್ನಗಳನ್ನು ಸಂಗ್ರಹಿಸಲಾಗುವುದು. ಶಾಲೆಗಳು ಮುಚ್ಚಿದ್ದಲ್ಲಿ , ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ನ್ಯಾಪ್‌ಕಿನ್/ ಪ್ಯಾಡ್ ವಿತರಿಸಲಿದ್ದಾರೆ. ಶಾಲೆ ಮತ್ತೆ ಆರಂಭವಾದರೆ ಅಲ್ಲಿಯೇ ಅವುಗಳನ್ನು ವಿತರಿಸಲಾಗುವುದು” ಎಂದು ತಿಳಿಸಿದರು.
17,06,933ರಷ್ಟು ಸಂಖ್ಯೆಯಲ್ಲಿ ಹದಿಹರೆಯದ ಶಾಲಾಬಾಲಕಿಯರು ಇರುವುದರಿಂದ ನ್ಯಾಯಾಲಯದ ಆದೇಶವನ್ನು ನಿಗದಿತ ಸಮಯದೊಳಗೆ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಂತೆ ಅರ್ಜಿದಾರರು ಒತ್ತಾಯಿಸಿದರು. ಆಗ ನ್ಯಾಯಾಲಯ ಶುಚಿ ಯೋಜನೆಯಡಿ ಕ್ರಿಯಾ ಯೋಜನೆಯನ್ನು ಸರ್ಕಾರ ಜಾರಿಗೆ ತರಬೇಕೆಂದು ಮತ್ತೆ ಹೇಳುತ್ತಿದ್ದೇವೆ. ಏಕೆಂದರೆ ಇದು ವಿಶೇಷವಾಗಿ ಗ್ರಾಮೀಣ ಹಾಗೂ ದೂರದ ಸ್ಥಳಗಳಲ್ಲಿ ವಾಸಿಸುತ್ತ ವ್ಯಾಸಂಗಕ್ಕಾಗಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಸಂಚರಿಸುವ ಹದಿಹರೆಯದ ಹುಡುಗಿಯರ ಸಬಲೀಕರಣಕ್ಕೆ ಸಹಾಯಕವಾಗುತ್ತದೆ ಎಂದಿತು. ಜೊತೆಗೆ ನಿಗದಿತ ಸಮಯದೊಳಗೆ ನ್ಯಾಪ್‌ಕಿನ್‌ಗಳನ್ನು ಸರ್ಕಾರ ಒದಗಿಸಿ ಅದರ ಸ್ಥಿತಿಗತಿ ವರದಿಗಳನ್ನು ಮುಂದಿನ ವಿಚಾರಣೆ ವೇಳೆಗೆ ಸಲ್ಲಿಸುವಂತೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಮೇ 31ಕ್ಕೆ ನಿಗದಿಯಾಗಿದೆ.