ಪ್ರೇಮ ವೈಫಲ್ಯದಿಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ ಗೆಳತಿಯನ್ನು ಬಂಧಿಸುವಂತಿಲ್ಲ: ಛತ್ತೀಸ್‌ಗಢ ಹೈಕೋರ್ಟ್

ಪ್ರೇಮ ವೈಫಲ್ಯದಿಂದ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡರೆ, ಉತ್ತಮ ಅಂಕ ಗಳಿಸದಿದ್ದಕ್ಕಾಗಿ ವಿದ್ಯಾರ್ಥಿ ಪ್ರಾಣ ನೀಗಿಕೊಂಡರೆ, ಕೃತ್ಯಕ್ಕೆ ಪ್ರಚೋದನೆ ನೀಡಿದ್ದಾರೆಂದು ಮಹಿಳೆ ಅಥವಾ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಲಾಗದು ಎಂದ ಪೀಠ.
ಛತ್ತೀಸ್‌ಗಢ ಹೈಕೋರ್ಟ್
ಛತ್ತೀಸ್‌ಗಢ ಹೈಕೋರ್ಟ್

ಪ್ರೇಮ ವೈಫಲ್ಯದಿಂದಾಗಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ, ಆತನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆಂದು ಆರೋಪಿಸಿ ಆತನ ಗೆಳತಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತಿಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್‌ ಈಚೆಗೆ ಹೇಳಿದೆ.

ಉತ್ತಮ ಅಂಕ ಗಳಿಸದಿದ್ದಕ್ಕಾಗಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ, ತನ್ನ ಪ್ರಕರಣ ವಜಾಗೊಂಡಿದೆ ಎಂದು ಕಕ್ಷಿದಾರ ಪ್ರಾಣ ಕಳೆದುಕೊಂಡರೆ ಅದಕ್ಕೆ ಸಂಬಂಧಪಟ್ಟ ಶಿಕ್ಷಕ ಇಲ್ಲವೇ ವಕೀಲರನ್ನು ಹೊಣೆಗಾರರರನ್ನಾಗಿ ಮಾಡಲಾಗದು ಎಂದು ನ್ಯಾಯಮೂರ್ತಿ ಪಾರ್ಥ್ ಪ್ರತೀಮ್ ಸಾಹು ಹೇಳಿದರು.

"...ದುರ್ಬಲ ಅಥವಾ ದುರ್ಬಲ ಮನಸ್ಥಿತಿಯ ವ್ಯಕ್ತಿತೆಗೆದುಕೊಂಡ ತಪ್ಪು ನಿರ್ಧಾರಕ್ಕಾಗಿ, ಇನ್ನೊಬ್ಬ ವ್ಯಕ್ತಿಯು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆ ಎಂದು ದೂಷಿಸಲಾಗದು " ಎಂದು ನ್ಯಾ. ಸಾಹು ಡಿಸೆಂಬರ್ 7ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ತನ್ನ ಮಾಜಿ ಪ್ರಿಯಕರನ ಆತ್ಮಹತ್ಯೆಗೆ ಸಂಬಂಧಿಸಿದಂತೆ 24 ವರ್ಷದ ಮಹಿಳೆ ಮತ್ತು ಆಕೆಯ ಇಬ್ಬರು ಸಹೋದರರ ವಿರುದ್ಧ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ನ್ಯಾಯಾಲಯ ರದ್ದುಗೊಳಿಸಿತು.

ಪ್ರಾಸಿಕ್ಯೂಷನ್ ವಾದದ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ತನ್ನ ಸಾವಿಗೆ ಅರ್ಜಿದಾರೆ ಹಾಗೂ ಆಕೆಯ ಸಹೋದರರು ಕಾರಣ ಎಂದು ಪತ್ರ ಬರೆದಿಟ್ಟಿದ್ದ. ಎಂಟು ವರ್ಷಗಳಿಂದ ತಾವು ಪ್ರೀತಿಸುತ್ತಿದ್ದೆವು. ಆಕೆ ತನ್ನ ಸಂಬಂಧ ಮುರಿದು ಬೇರೊಬ್ಬ ವ್ಯಕ್ತಿಯನ್ನು ಮದುವೆಯಾದಳು. ತನ್ನ ಸಹೋದರಿಯೊಂದಿಗೆ ಸಂಬಂಧ ಇರಿಸಿಕೊಳ್ಳದಂತೆ ಆಕೆಯ ಸಹೋದರರು ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದಾಗಿ ಆತ ಎರಡು ಪುಟಗಳ ಪತ್ರದಲ್ಲಿ ವಿವರಿಸಿದ್ದ.

ಮೃತನ ಚಿಕ್ಕಪ್ಪ ನೀಡಿದ ದೂರಿನ ಮೇರೆಗೆ ರಾಜನಂದಗಾಂವ್ ಪೊಲೀಸರು ಮೂವರನ್ನು ಬಂಧಿಸಿದ್ದು, ಜಿಲ್ಲಾ ನ್ಯಾಯಾಲಯವು ಅಕ್ಟೋಬರ್ 13, 2023 ರಂದು ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿತ್ತು. ವಿಚಾರಣಾ ನ್ಯಾಯಾಲಯ ತಮ್ಮ ವಿರುದ್ಧ ಆರೋಪ ನಿಗದಿಪಡಿಸಿದ್ದನ್ನು ಪ್ರಶ್ನಿಸಿ ಮಹಿಳೆ ಹಾಗೂ ಇಬ್ಬರು ಸಹೋದರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಮಹಿಳೆ ಮತ್ತು ಇತರರನ್ನು ವಿಚಾರಣೆಗೆ ಒಳಪಡಿಸಲು ಯಾವುದೇ ಮೇಲ್ನೋಟದ ಪುರಾವೆಗಳು ದಾಖಲೆಯಲ್ಲಿ ಲಭ್ಯವಿಲ್ಲ ಎಂದಿರುವ ಹೈಕೋರ್ಟ್‌ ಅರ್ಜಿದಾರರ ಅಪರಾಧ ನಿರ್ಣಯಿಸಲು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಹೇಳಿಕೆಗಳು ಸಾಕಾಗುವುದಿಲ್ಲ. ಈ ಎಲ್ಲಾ ಸಾಕ್ಷಿಗಳ ಹೇಳಿಕೆ ಮೃತರು ಹೇಳಿದ್ದನ್ನು ಆಧರಿಸಿದೆ. ಮೃತರನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ, ಪಿತೂರಿ ಮಾಡಿದ್ದಾರೆ ಅಥವಾ ಪ್ರಚೋದಿಸಿದ್ದಾರೆ ಎಂದು ಸಾಕ್ಷಿಗಳು ಹೇಳಿಲ್ಲ. ಹೀಗಾಗಿ, ಸಾಕ್ಷಿಗಳ ಮೌಖಿಕ ಸಾಕ್ಷ್ಯ ಅರ್ಜಿದಾರರ ವಿರುದ್ಧ ಆರೋಪ ಸಾಬೀತಿಗೆ ಸಾಕಾಗುವುದಿಲ್ಲ ಎಂದು ನುಡಿಯಿತು.

ಅರ್ಜಿದಾರರು ಒಡ್ಡಿದ್ದಾರೆನ್ನಲಾದ ಬೆದರಿಕೆ ಆತ್ಮಹತ್ಯೆಗೆ ಪ್ರಚೋದಿಸುವಷ್ಟು ಆತಂಕಕಾರಿ ಪ್ರಮಾಣದಲ್ಲಿಲ್ಲ. ಬೆದರಿಕೆ ಕಿರಿಕಿರಿ ಅನುಭವಿಸಿದ್ದರೆ ಮೃತ ವ್ಯಕ್ತಿ ಪೊಲೀಸರಿಗೆ ದೂರು ನೀಡಬಹುದಿತ್ತು. ಆದರೆ ಹಾಗೆ ಮಾಡಿಲ್ಲ ಎಂದು ಪೀಠ ಹೇಳಿತು.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಬರೆದಿರುವ ಪತ್ರ ಮಹಿಳೆ ಎಸಗಿದ ದ್ರೋಹದಿಂದಾಗಿ ತನಗೆ ಒದಗಿದ ದುಃಖವನ್ನು ವಿವರಿಸುತ್ತದೆಯೇ ವಿನಾ ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವುದು ಅರ್ಜಿದಾರರ ಉದ್ದೇಶವಾಗಿತ್ತು ಎಂಬುದನ್ನು ಹೇಳುವುದಿಲ್ಲ. ಸರಳವಾಗಿ ಹೇಳುವುದಾದರೆ, ಅರ್ಜಿದಾರರು ಮೃತನ ಸುತ್ತಲೂ ಅಂತಹ ವಾತಾವರಣ ಸೃಷ್ಟಿಸಿದ್ದಾರೆ ಎಂದು ಸೂಚಿಸುವಂಥದ್ದು ಆತ್ಮಹತ್ಯೆ ಪತ್ರದಲ್ಲಿ ಏನೂ ಇಲ್ಲ ಎಂದ ನ್ಯಾಯಾಲಯ ಮೂವರು ಆರೋಪಿಗಳ ವಿರುದ್ಧದ ಆರೋಪಗಳನ್ನು ರದ್ದುಗೊಳಿಸಿ ಪ್ರಕರಣದಿಂದ ಖುಲಾಸೆಗೊಳಿಸಿತು.

Kannada Bar & Bench
kannada.barandbench.com