ಅಲ್ಪಸಂಖ್ಯಾತರನ್ನು ಗುರುತಿಸದೇ ಇರುವ ಉದಾಹರಣೆ ಕೊಡಿ; ಜಿಲ್ಲಾವಾರು ಗುರುತಿಸುವಿಕೆ ಅಸಮರ್ಥನೀಯ: ಸುಪ್ರೀಂ ಕೋರ್ಟ್

ಅಲ್ಪಸಂಖ್ಯಾತರ ಗುರುತಿಸುವಿಕೆ ರಾಜ್ಯಮಟ್ಟದಲ್ಲಿ ನಡೆಯಬೇಕೆಂದು ಈಗಾಗಲೇ ತೀರ್ಪು ನೀಡಲಾಗಿದ್ದು ಇದರಲ್ಲಿ ಮಧ್ಯಪ್ರವೇಶಿಸಬಹುದೇ ಎಂದು ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಎಸ್ ರವೀಂದ್ರ ಭಟ್ ಅವರಿದ್ದ ಪೀಠ ಅನುಮಾನ ವ್ಯಕ್ತಪಡಿಸಿತು.
Justice UU Lalit, Justice S Ravindra Bhat and Supreme Court
Justice UU Lalit, Justice S Ravindra Bhat and Supreme Court

ಧರ್ಮದ ಆಧಾರದ ಮೇಲೆ ಮಾಡಲಾಗಿರುವ ಅಲ್ಪಸಂಖ್ಯಾತರ ವರ್ಗೀಕರಣ ಪ್ರಶ್ನಿಸಿರುವ ಅರ್ಜಿದಾರರಿಗೆ ಅಲ್ಪಸಂಖ್ಯಾತರನ್ನು ಗುರುತಿಸದೆ ಇರುವ ರಾಜ್ಯಗಳ ನಿರ್ದಿಷ್ಟ ದಾಖಲೆ ನೀಡಿ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ [ದೇವಕಿನಂದನ್ ಠಾಕೂರ್ ಜಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಅಲ್ಪಸಂಖ್ಯಾತರ ಗುರುತಿಸುವಿಕೆ ರಾಜ್ಯಮಟ್ಟದಲ್ಲಿ ನಡೆಯಬೇಕೆಂದು ಈಗಾಗಲೇ ತೀರ್ಪು ನೀಡಲಾಗಿದ್ದು ಇದರಲ್ಲಿ ಮಧ್ಯಪ್ರವೇಶಿಸಬಹುದೇ ಎಂದು ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಎಸ್ ರವೀಂದ್ರ ಭಟ್ ಅವರಿದ್ದ ಪೀಠ ಅನುಮಾನ ವ್ಯಕ್ತಪಡಿಸಿತು.

ಸಂಬಂಧ ಪಟ್ಟ ಪ್ರಕರಣದಲ್ಲಿ ಹಾಜರಿದ್ದ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ ಅವರು ಹೇಳುತ್ತಿರುವುದು ಸೈದ್ಧಾಂತಿಕವಾಗಿ ಸರಿ ಇರಬಹುದು ಎಂದು ನ್ಯಾ. ಲಲಿತ್‌ ಅವರು ಹೇಳಿದಾಗ ನ್ಯಾ. ಭಟ್‌ ಉಪಾಧ್ಯಾಯ ಅವರನ್ನುದ್ದೇಶಿಸಿ “ನೀವು ಏನೂ ಇಲ್ಲದಿರುವೆಡೆ ಸಮರ್ಥನೆಗೆ ಇಳಿದಿದ್ದೀರಿ … ಹಾಗೆ ಸಾಮಾನ್ಯ ಆಧಾರದಲ್ಲಿ ಅವರನ್ನು ಗುರುತಿಸಲಾಗದು. ಯಹೂದಿಗಳು, ಕೊಂಕಣಿಗಳ ರೀತಿಯಲ್ಲಿ ಕೆಲ ಅಖಿಲ ಭಾರತ ಅಲ್ಪಸಂಖ್ಯಾತರೂ ಇದ್ದಾರೆ” ಎಂದರು.

Also Read
ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ರಾಜ್ಯಗಳಿಗೆ ಅಧಿಕಾರವಿದೆ: ಸುಪ್ರೀಂಗೆ ಕೇಂದ್ರ

ಅಲ್ಲದೆ, ಅಲ್ಪಸಂಖ್ಯಾತರಿಗೆ ಜಿಲ್ಲಾವಾರು ಮಾನ್ಯತೆ ನೀಡುವಂತೆ ಉಪಾಧ್ಯಾಯ ಅವರು ಮಾಡಿರುವ ಮನವಿ ಕಾನೂನಿನ ಪ್ರಕಾರ ಸಮರ್ಥನೀಯವಲ್ಲ ಎಂದು ತಿಳಿಸಿದರು. ಈ ಹಂತದಲ್ಲಿ ರಾಜ್ಯಮಟ್ಟದಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾತರು ಎಂದು ಗುರುತಿಸಬಹುದು ಎಂದು ಉಪಾಧ್ಯಾಯ ಹೇಳಿದರು.

ವಕೀಲ ಅಶುತೋಷ್‌ ದುಬೆ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಪಾರ್ಸಿ ಮತ್ತು ಜೈನರನ್ನು ರಾಷ್ಟ್ರೀಯ ಮಟ್ಟದಲ್ಲಿ ಅಲ್ಪಸಂಖ್ಯಾತರೆಂದು ಘೋಷಿಸುವ ಕೇಂದ್ರ ಸರ್ಕಾರದ 1993ರ ಅಧಿಸೂಚನೆಯನ್ನು ಪ್ರಶ್ನಿಸಲಾಗಿತ್ತು. ಜಿಲ್ಲಾವಾರು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರುತಿಸುವಂತೆ ಅರ್ಜಿದಾರರು ತಮ್ಮ ಮನವಿಯಲ್ಲಿ ಕೋರಿದ್ದಾರೆ.

ಅನೇಕ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳನ್ನು ಅಲ್ಪಸಂಖ್ಯಾತರು ಎಂದು ಗುರುತಿಸಲು ತಿರಸ್ಕರಿಸುವುದು ಸ್ವೇಚ್ಛಾಚಾರದಿಂದ ಕೂಡಿದ ಅಸಮಂಜಸ ನಡೆಯಾಗಿದೆ. ಇದು ಸಮಾನತೆಯ ಹಕ್ಕು ಹಾಗೂ ತಾರತಮ್ಯ ನಿಷೇಧದ ಉಲ್ಲಂಘನೆಯಾಗಿದ್ದು, ಅಸಮಾನತೆಯನ್ನು ತೊಡೆಯುವ ಪ್ರಭುತ್ವದ ಪ್ರಯತ್ನಗಳಿಗೆ ಹಿನ್ನೆಡೆಯುಂಟು ಮಾಡುತ್ತದೆ ಎಂದು ವಾದಿಸಿದ್ದಾರೆ.

ಹಿಂದಿನ ವಿಚಾರಣೆಯಲ್ಲಿ ನ್ಯಾಯಾಲಯ ಅಲ್ಪಸಂಖ್ಯಾತರೆಂದು ಗುರುತಿಸಿಕೊಳ್ಳುವ ಹಕ್ಕು ಸ್ವಾಭಾವಿಕವಾದದ್ದು, ಅದನ್ನು ಚಲಾಯಿಸಲು ಶಾಸನದ ಅಗತ್ಯವಿಲ್ಲ ಎಂದು ಹೇಳಿತ್ತು. ಅರ್ಹ ಗುಂಪಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನಿರಾಕರಿಸಲಾಗಿದೆ ಎಂಬ ನಿರ್ದಿಷ್ಟ ಉದಾಹರಣೆ ಇಲ್ಲದಿದ್ದರೆ ಇದಕ್ಕೆ ಸಂಬಂಧಿಸಿದಂತೆ ದಾವೆ ಹೂಡಲಾಗದು ಎಂದು ಸ್ಪಷ್ಟಪಡಿಸಿತ್ತು.

Related Stories

No stories found.
Kannada Bar & Bench
kannada.barandbench.com