ಕಾನೂನು ವೃತ್ತಿಯಲ್ಲಿ ಅಸ್ತಿತ್ವದಲ್ಲಿರುವ ಲಿಂಗಭೇದ ತೊಡೆದುಹಾಕಲು ಮಹಿಳೆಯರು ಹೆಚ್ಚು ಶ್ರಮಿಸಬೇಕು: ನ್ಯಾ. ಕೊಹ್ಲಿ

ಕಾನೂನು ಸಂಸ್ಥೆಗಳಲ್ಲಿ ಪಾಲುದಾರರಾಗಿ, ಮಧ್ಯಸ್ಥಿಕೆದಾರರಾಗಿ, ನ್ಯಾಯಾಧೀಶರಾಗಿ ಜೊತೆಗೆ ನ್ಯಾಯಮಂಡಳಿಗಳು ಮತ್ತು ಆಯೋಗಗಳ ಸದಸ್ಯೆಯಾಗಿ ಎಷ್ಟು ಮಹಿಳೆಯರನ್ನು ನೇಮಕ ಮಾಡಲಾಗಿದೆ ಎಂಬ ಅಂಕಿ ಅಂಶ ಕಲೆಹಾಕುವಂತೆ ಅವರು ಕರೆ ನೀಡಿದರು.
ಕಾನೂನು ವೃತ್ತಿಯಲ್ಲಿ ಅಸ್ತಿತ್ವದಲ್ಲಿರುವ ಲಿಂಗಭೇದ ತೊಡೆದುಹಾಕಲು ಮಹಿಳೆಯರು ಹೆಚ್ಚು ಶ್ರಮಿಸಬೇಕು: ನ್ಯಾ. ಕೊಹ್ಲಿ
A1

ಜಗತ್ತಿನ ಅರ್ಧದಷ್ಟು ಮಹಿಳೆಯರು ಪ್ರತಿಭಾನ್ವಿತರಾಗಿದ್ದರೂ ತಮ್ಮ ಮನೆಯ ಒಳಗಾಗಲೀ ಅಥವಾ ಹೊರಗಾಗಲೀ ನಿರ್ಧಾರ ತಳೆಯುವುದರಿಂದ ಆಕೆಯನ್ನು ಹೊರಗಿಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹಿಮಾ ಕೊಹ್ಲಿ ಶನಿವಾರ ತಿಳಿಸಿದರು.

ಒಳಗೊಳ್ಳುವಿಕೆ ಮತ್ತು ಸಬಲೀಕರಣ ಎಂಬ ವಿಷಯದ ಕುರಿತು ಹೈದರಾಬಾದ್‌ನ ಅಂತಾರಾಷ್ಟ್ರೀಯ ರಾಜಿ ಮತ್ತು ಮಧ್ಯಸ್ಥಿಕೆ ಕೇಂದ್ರ (ಐಎಎಂಸಿ) ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ನ್ಯಾ. ಕೊಹ್ಲಿ ಮಾತನಾಡಿದರು.

ನ್ಯಾ. ಕೊಹ್ಲಿ ಅವರ ಅವಲೋಕನಗಳು

  • ಇಂದಿಗೂ ಲಿಂಗಭೇದ ಅಸ್ತಿತ್ವದಲ್ಲಿದ್ದು ಅದನ್ನು ಒಡೆಯಲು ಮಹಿಳೆಯರು ಶ್ರಮಿಸಬೇಕು.

  • ವಕೀಲಿಕೆಯಲ್ಲೇ ಇರಲಿ ಅಥವಾ ಕಾನೂನು ಸಂಸ್ಥೆಗಳ ಪಾಲುದಾರಿಕೆಯಲ್ಲೇ ಇರಲಿ ಪುರುಷ ಮತ್ತು ಮಹಿಳೆ ನಡುವೆ ಲಿಂಗ ತಾರತಮ್ಯ ಇದೆ.

  • ವೃತ್ತಿ ಬದುಕಿನ ಸಮತೋಲನ ಕಾಪಾಡಿಕೊಳ್ಳಲು ಹೆಣಗುವ ಜೊತೆಗೆ ವೇತನ ಅಸಮಾನತೆ, ಕೆಲಸದ ಸ್ಥಳದಲ್ಲಿ ಕಿರುಕುಳವನ್ನೂ ಅನುಭವಿಸುವುದಾಗಿ ಮಹಿಳೆಯರು ಹೇಳಿಕೊಳ್ಳುತ್ತಾರೆ.

  • ಪುರುಷ ಪ್ರಾಬಲ್ಯ ವಿವಿಧ ಹಂತಗಳಲ್ಲಿ ಕ್ರಿಯಾಶೀಲವಾಗಿರುವುದರಿಂದ ಮಹಿಳೆಯರಿಗೆ ಅಡ್ಡಿ ಉಂಟಾಗುತ್ತಿದೆ.

  • ಕಾನೂನು ಕ್ಷೇತ್ರದಲ್ಲಿ ಮಹಿಳೆಯರು ಎದುರಿಸುತ್ತಿರುವ ತಾರತಮ್ಯವು ಅಸಮಾನ ಪ್ರಕರಣಗಳ ಕಾರ್ಯಭಾರ/ನಿಯೋಜನೆ ಅಥವಾ ಅವರ ಪುರುಷ ಸಹವರ್ತಿಗಳಿಗೆ ಹೋಲಿಸಿದರೆ ಅಸಮಾನ ಸಂಭಾವನೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಕಾನೂನು ಸಂಸ್ಥೆಗಳಲ್ಲಿ ಪಾಲುದಾರರಾಗಿ ನೇಮಿಸುವಲ್ಲಿಯೂ ಈ ಅಸಮಾನತೆ ಇದೆ. ಕಾರ್ಪೊರೇಟ್‌ ವಲಯದಲ್ಲೇ ಇರಲಿ ಅಥವಾ  ಸರ್ಕಾರಿ ವಲಯದಲ್ಲೇ ಇರಲಿ ವಕೀಲರನ್ನು ನೇಮಿಸಿಕೊಳ್ಳುವಲ್ಲಿ ಲಿಂಗ ತಾರತಮ್ಯ ಕಂಡುಬರುತ್ತದೆ.

  • ಕಾನೂನು ಸಂಸ್ಥೆಗಳಲ್ಲಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಉನ್ನತ ನಾಯಕತ್ವ ನೀಡುವುದರಿಂದ ಅಪ್ರಜ್ಞಾಪೂರ್ವಕವಾಗಿ ಪಕ್ಷಪಾತ ಉಂಟಾಗುವುದನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ತೀರ್ಮಾನ ಕೈಗೊಳ್ಳುವವರಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬುತ್ತದೆ.

  • ಕಾನೂನು ಸಂಸ್ಥೆಗಳಲ್ಲಿ ಪಾಲುದಾರರಾಗಿ, ಮಧ್ಯಸ್ಥಿಕೆದಾರರಾಗಿ, ನ್ಯಾಯಾಧೀಶರಾಗಿ ಜೊತೆಗೆ ನ್ಯಾಯಮಂಡಳಿಗಳು ಮತ್ತು ಆಯೋಗಗಳ ಸದಸ್ಯೆಯಾಗಿ ಎಷ್ಟು ಮಹಿಳೆಯರನ್ನು ನೇಮಕ ಮಾಡಲಾಗಿದೆ ಎಂಬ ಅಂಕಿ ಅಂಶ ಕಲೆಹಾಕಬೇಕಿದೆ. 

  • ಈ ಅಂಕಿಅಂಶಗಳನ್ನು ಸಂಗ್ರಹಿಸಿ ಪ್ರಕಟಿಸುವುದರಿಂದ ದೋಷ ಎಲ್ಲಿ ಉಂಟಾಗಿದೆ ಎಂಬುದನ್ನು ವಿಶ್ಲೇಷಿಸಲು ಮತ್ತು ಕಂದರವನ್ನು ಇಲ್ಲವಾಗಿಸಲು ಸಹಾಯ ಮಾಡುತ್ತದೆ.

Related Stories

No stories found.
Kannada Bar & Bench
kannada.barandbench.com