ಜಾಗತಿಕ ಸಂಸ್ಕೃತಿ ಸ್ಥಳೀಯ ಸಾಂಸ್ಕೃತಿಕ ಸಂಕೇತ ಮತ್ತು ಅಸ್ಮಿತೆಗೆ ಬೆದರಿಕೆಯಾಗಿ ರೂಪುಗೊಳ್ಳುತ್ತಿದ್ದು ಜಾಗತೀಕರಣ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಅದು ನಮ್ಮ ಸಮೃದ್ಧ ಅಸ್ಮಿತೆಗಳನ್ನು ಮಸುಕುಗೊಳಿಸಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ತಿಳಿಸಿದರು.
ಜಾಗತಿಕ ಸಂಸ್ಕೃತಿ ಸ್ಥಳೀಯ ಸಾಂಸ್ಕೃತಿಕ ಸಂಕೇತ ಮತ್ತು ಅಸ್ಮಿತೆಗೆ ಬೆದರಿಕೆಯಾಗಿ ರೂಪುಗೊಳ್ಳುತ್ತಿದ್ದು ಜಾಗತೀಕರಣ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಅದು ನಮ್ಮ ಸಮೃದ್ಧ ಅಸ್ಮಿತೆಗಳನ್ನು ಮಸುಕುಗೊಳಿಸಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ತಿಳಿಸಿದರು.
ಶುಕ್ರವಾರ ಹೈದರಾಬಾದ್‌ನಲ್ಲಿ ನಡೆದ ಉಸ್ಮಾನಿಯಾ ವಿಶ್ವವಿದ್ಯಾಲಯದ 82ನೇ ಘಟಿಕೋತ್ಸವದ ಭಾಷಣದಲ್ಲಿ ಸಿಜೆಐ ಈ ವಿಚಾರ ತಿಳಿಸಿದರು.
ಸಾಮಾಜಿಕ ಮಾಧ್ಯಮ, ಟೆಲಿವಿಷನ್ ಹಾಗೂ ಪಾಪ್ ಸಂಸ್ಕೃತಿ ಒಂದು ನಿರ್ದಿಷ್ಟ ಜೀವನ ವಿಧಾನವನ್ನು ವೈಭವೀಕರಿಸುತ್ತಿವೆ. ದುಃಖದ ಸಂಗತಿಯೆಂದರೆ ಅದನ್ನೇ ನಾವು ಕುರುಡಾಗಿ ಅನುಕರಿಸುತ್ತಿದ್ದೇವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
"ಜಾಗತಿಕ ಸಂಸ್ಕೃತಿ, ಸ್ಥಳೀಯ ಸಾಂಸ್ಕೃತಿಕ ಸಂಕೇತಗಳು ಮತ್ತು ಅಸ್ಮಿತೆಗಳಿಗೆ ಬೆದರಿಕೆಯಾಗಿ ರೂಪುಗೊಳ್ಳುತ್ತಿದೆ....ನಮ್ಮ ವಿಶಿಷ್ಟ ಪರಂಪರೆ ಮತ್ತು ಸಂಸ್ಕೃತಿಯನ್ನು ಸಂಭ್ರಮಿಸುವ ಬದಲು, ನಮ್ಮ ಸಮೃದ್ಧ ಅಸ್ಮಿತೆಯನ್ನು ಮಸುಕಾಗಿಸಲು ಅವಕಾಶ ನೀಡುತ್ತಿದ್ದೇವೆ. ಈಗಿನ ಪೀಳಿಗೆ ಪರಿವರ್ತನೆಗೊಳ್ಳುತ್ತಿದೆ. ಅದು ಗತದೊಂದಿಗೆ ಕ್ರಮೇಣ ಸಂಪರ್ಕ ಕಳೆದುಕೊಳ್ಳುತ್ತಿದ್ದು ಆ ಮೂಲಕ ಗುರಿಯೆಡೆಗಿನ ದೃಷ್ಟಿ ಮತ್ತು ಭವಿಷ್ಯದ ಹಾದಿಯಿಂದ ವಂಚಿತವಾಗುತ್ತಿದೆ. ಜಾಗತೀಕರಣ, ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಿಂದ ಉಂಟಾದ ಅಗತ್ಯ ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ನಾನು ಒಪ್ಪಿಕೊಳ್ಳುತ್ತಲೇ, ನಮ್ಮ ದೈನಂದಿನ ಜೀವನದಲ್ಲಿ ಅದು ಬೀರುತ್ತಿರುವ ಸೂಕ್ಷ್ಮ ಪರಿಣಾಮ ಕುರಿತಂತೆ ಚಿಂತಿಸಲು ನಾನು ಒತ್ತಾಯಿಸುತ್ತಿದ್ದೇನೆ " ಎಂದು ಅವರು ಹೇಳಿದರು.
ಈ ನಿಟ್ಟಿನಲ್ಲಿ, ಭಾಷೆಗಳು ಹೇಗೆ ಕಣ್ಮರೆಯಾಗುತ್ತಿವೆ ಎಂಬುದನ್ನು ಅವರು ಎತ್ತಿ ತೋರಿಸಿದರು. "2021ರ ಯುನೆಸ್ಕೋ ವಿಶ್ವ ಭಾಷಾ ವರದಿ ಪ್ರಕಾರ, ಜಗತ್ತಿನಲ್ಲಿ ಮಾತನಾಡಲಾಗುತ್ತಿರುವ ಸರಿಸುಮಾರು 7,000 ಭಾಷೆಗಳಲ್ಲಿ ಅರ್ಧದಷ್ಟು ಭಾಷೆಗಳು ಶತಮಾನದ ಅಂತ್ಯದ ವೇಳೆಗೆ ಕಣ್ಮರೆಯಾಗಬಹುದು. ಪ್ರತಿಯೊಂದು ಭಾಷೆಯ ನಷ್ಟದಿಂದ, ನಾವು ಸಾಕಷ್ಟು ಸಾಹಿತ್ಯ ಮತ್ತು ಜಾನಪದವನ್ನು ಮಾತ್ರ ಕಳೆದುಕೊಳ್ಳುತ್ತಿಲ್ಲ ಬದಲಿಗೆ ತಲೆಮಾರುಗಳಿಂದ ಆನುವಂಶಿಕವಾಗಿ ಪಡೆದ ಜ್ಞಾನದಿಂದಲೂ ವಂಚಿತರಾಗುತ್ತಿದ್ದೇವೆ" ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಸಿಜೆಐ ರಮಣ ಅವರಿಗೆ ತೆಲಂಗಾಣ ರಾಜ್ಯಪಾಲ ಡಾ ತಮಿಳಿಸಾಯಿ ಸೌಂದರಾಜನ್ ಅವರ ಸಮ್ಮುಖದಲ್ಲಿ ವಿಶ್ವವಿದ್ಯಾನಿಲಯ, ಡಾಕ್ಟರ್ ಆಫ್ ಲಾಸ್ (ಆನರಿಸ್ ಕಾಸಾ) ಪದವಿ ಪ್ರದಾನ ಮಾಡಿತು.
ತಮ್ಮ ಭಾಷಣದಲ್ಲಿ ನ್ಯಾ. ರಮಣ “ಆನುವಂಶಿಕ ವೈವಿಧ್ಯತೆ ಮತ್ತು ಬೆಳೆ ಪ್ರಭೇದಗಳ ಮೇಲೆ ಹೇಗೆ ಜಾಗತೀಕರಣ ಪ್ರಭಾವ ಬೀರುತ್ತಿದೆ” ಎಂಬುದನ್ನು ವಿವರಿಸಿದರು.
“ನಾವು ಬೆಳೆ ಪ್ರಭೇದ, ಅರಣ್ಯ ತಳಿಗಳು ಹಾಗೂ ಸ್ಥಳೀಯ ಜಾನುವಾರುಗಳು ಬೇಗನೆ ನಶಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಅಲ್ಲದೆ ಜಾಗತಿಕ ಆರ್ಥಿಕತೆಯ ಬೇಡಿಕೆಗಳನ್ನು ಆಧರಿಸಿ ಮಾರುಕಟ್ಟೆ ನಡೆಯುತಿದೆ. ಪರಿಣಾಮ ಹೆಚ್ಚು ಹೆಚ್ಚು ರೈತರು ಅಲ್ಪಾವಧಿ ಲಾಭಕ್ಕಾಗಿ ಸ್ಥಳೀಯ ಬೆಳೆಗಳಾಚೆಗೆ ಚಾಚಿಕೊಳ್ಳುತ್ತಿದ್ದಾರೆ. ಈ ಬದಲಾವಣೆ ಮಣ್ಣಿನ ಸ್ವರೂಪವನ್ನು ಬದಲಿಸುತ್ತಿದ್ದು ಜೈವಿಕ ವೈವಿಧ್ಯತೆಗೆ ಬೆಂಬಲ ನೀಡುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತಿದೆ” ಎಂದು ಅವರು ಹೇಳಿದರು.
"ಹವಾಮಾನ ಬದಲಾವಣೆ ಮತ್ತು ಪರಿಸರ ಮಾಲಿನ್ಯ ಕೂಡ ಅರಣ್ಯ ಪ್ರಭೇದಗಳ ಮೇಲೂ ಪರಿಣಾಮ ಬೀರುತ್ತಿವೆ. ಒಟ್ಟಾರೆ ಹೇಳುವುದಾದರೆ, ಭಾರೀ ಪ್ರಮಾಣದ ಪರಿಸರ ಅಸಮತೋಲನ ನಮ್ಮನ್ನು ದುರುಗುಟ್ಟಿ ನೋಡುತ್ತಿದೆ.. ಆದ್ದರಿಂದ ಪ್ರಸ್ತುತ ಪೀಳಿಗೆ ಈ ಪ್ರಮುಖ ಕಾಳಜಿಗಳಿಗೆ ಪರಿಹಾರ ಕಂಡುಕೊಳ್ಳುವ ವಿಶಿಷ್ಟ ಸವಾಲೊಂದನ್ನು ಎದುರಿಸುತ್ತಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಭಾಷಣದ ಪೂರ್ಣ ಪಠ್ಯವನ್ನು ಇಲ್ಲಿ ಓದಿ: