
ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ವಕ್ಫ್ (ತಿದ್ದುಪಡಿ) ಕಾಯಿದೆ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಇತ್ತೀಚೆಗೆ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೆ ಸಿಂಗ್ ಅವರಿದ್ದ ಪೀಠ ಅರ್ಜಿದಾರರು ನೇರವಾಗಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದನ್ನು ಗಂಭೀರವಾಗಿ ಪರಿಗಣಿಸಿತು. ಕಲ್ಕತ್ತಾ ಹೈಕೋರ್ಟ್ ಮುಂದೆ ಅವರು ಅಷ್ಟೇ ಪರಿಣಾಮಕಾರಿ ಪರ್ಯಾಯ ಪರಿಹಾರ ಪಡೆಯಬಹುದಿತ್ತು ಎಂದು ಪೀಠ ನುಡಿಯಿತು.
ನೀವು ಹೈಕೋರ್ಟ್‌ಗೆ ಏಕೆ ಹೋಗಬಾರದು – 32ನೇ ವಿಧಿಯಡಿ ಸುಪ್ರೀಂ ಕೋರ್ಟ್‌ಗಿಂತ ಉತ್ತಮ ಅಧಿಕಾರ ಹೊಂದಿರುವ ಸಾಂವಿಧಾನಿಕ ನ್ಯಾಯಾಲಯ ಅದಲ್ಲವೇ?... ಸುಪ್ರೀಂ ಕೋರ್ಟ್‌ಗೆ ನೇರ ರಿಟ್ ಅರ್ಜಿಗಳನ್ನು ಸಲ್ಲಿಸುವುದು ಹೈಕೋರ್ಟ್‌ಗೆ ಅವಮಾನಿಸಿದಂತೆ. ಇದು 7-8 ರಾಜ್ಯಗಳನ್ನು ಒಳಗೊಂಡ ಪ್ರಕರಣವಾಗಿದ್ದರೆ ಅದು ಬೇರೆಯ ವಿಚಾರ ಆದರೆ ಇದು ಅಂತಹ ಪ್ರಕರಣವಲ್ಲ ಎಂದು ನ್ಯಾಯಾಲಯ ಹೇಳಿತು.
ಇತರ ಪರ್ಯಾಯ ಪರಿಹಾರಗಳನ್ನು ನಿರ್ಲಕ್ಷಿಸಿ, ದಾವೆದಾರರು ನೇರವಾಗಿ ಸುಪ್ರೀಂ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸುವ ಪ್ರವೃತ್ತಿಗೆ ನ್ಯಾಯಾಲಯ ಅಸಮ್ಮತಿ ವ್ಯಕ್ತಪಡಿಸಿತು.
"ಸುಪ್ರೀಂ ಕೋರ್ಟ್‌ನಲ್ಲಿ ನೇರ ರಿಟ್ ಅರ್ಜಿಗಳನ್ನು ಸಲ್ಲಿಸುವ ಈ ಪದ್ಧತಿಯನ್ನು ನಾವು ಬಹಳ ಗಂಭೀರವಾಗಿ ಪರಿಗಣಿಸುತ್ತೇವೆ" ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು. ಅಂತೆಯೇ ಪರಿಹಾರಕ್ಕಾಗಿ ಹೈಕೋರ್ಟ್‌ಗೆ ತೆರಳಲು ಅರ್ಜಿದಾರರಿಗೆ ಪೀಠ ಸ್ವಾತಂತ್ರ್ಯ ಕಲ್ಪಿಸಿತು.
ಈ ಹಿಂದೆಯೂ ಸಹ, ಮುರ್ಷಿದಾಬಾದ್ ಹಿಂಸಾಚಾರದ ತನಿಖೆ ಕೋರಿ ಅರ್ಜಿ ಸಲ್ಲಿಸಿದ್ದಕ್ಕಾಗಿ ಅರ್ಜಿದಾರರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು . ಆ ಸಮಯದಲ್ಲಿ, ನ್ಯಾಯಾಲಯವು ವಕೀಲ ಶಶಾಂಕ್ ಶೇಖರ್ ಝಾ ಅವರಿಗೆ ತಮ್ಮ ಅರ್ಜಿಗಳಲ್ಲಿ ಬಳಸಿದ ಭಾಷೆ ಬಗ್ಗೆ ಎಚ್ಚರಿಕೆ ನೀಡಿತ್ತು. ನಂತರ ಅವರು ಅರ್ಜಿ ಹಿಂಪಡೆದಿದ್ದರು.