ತಮ್ಮ ನೂತನ ಸಾಕ್ಷ್ಯಚಿತ್ರ ʼಕಾಳಿʼಯಲ್ಲಿ ಹಿಂದೂ ದೇವತೆ ಕಾಳಿ ಸಿಗರೇಟ್ ಸೇದುತ್ತಿರುವಂತೆ ಬಿಂಬಿಸಿರುವುದನ್ನು ನಿರ್ಬಂಧಿಸಲು ಕೋರಿ ಸಲ್ಲಿಸಲಾದ ಮೊಕದ್ದಮೆಗೆ ಸಂಬಂಧಿಸಿದಂತೆ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಖಲೈ ಅವರಿಗೆ ದೆಹಲಿ ನ್ಯಾಯಾಲಯ ಸಮನ್ಸ್ ಮತ್ತು ನಿರ್ಬಂಧಕಾಜ್ಞೆ ನೋಟಿಸ್ ನೀಡಿದೆ.
ಪ್ರತಿವಾದಿಗಳ ವಿರುದ್ಧ ಯಾವುದೇ ಆದೇಶ ಹೊರಡಿಸುವ ಮೊದಲು ಅವರ ವಾದವನ್ನು ಆಲಿಸಬೇಕು ಎಂದ ತೀಸ್ ಹಜಾರಿ ನ್ಯಾಯಾಲಯದ ನ್ಯಾಯಾಧೀಶ ಅಭಿಷೇಕ್ ಕುಮಾರ್ ಅವರು ಪ್ರಕರಣವನ್ನು ಆಗಸ್ಟ್ 6ಕ್ಕೆ ಮುಂದೂಡಿದರು.
“ಮಧ್ಯಂತರ ನಿರ್ಬಂಧಕಾಜ್ಞೆ ಎಂಬುದು ವಿವೇಚನೆಯ ಪರಿಹಾರವಾಗಿದೆ. ಸರ್ವೋಚ್ಚ ನ್ಯಾಯಾಲಯ ಹಲವು ಪ್ರಕರಣಗಳಲ್ಲಿ ನೀಡಿದ ತೀರ್ಪಿನಂತೆ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಏಕಪಕ್ಷೀಯ ಮಧ್ಯಂತರ ನಿರ್ಬಂಧಕಾಜ್ಞೆ ನೀಡಬೇಕಾಗುತ್ತದೆ. ಪ್ರತಿವಾದಿಯ ವಿರುದ್ಧ ಯಾವುದೇ ಆದೇಶ ನೀಡುವ ಮೊದಲು ಅವರ ವಿಚಾರಣೆ ಅಗತ್ಯವಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಣಿಮೇಖಲೈ ಅವರ ಟೂರಿಂಗ್ ಟಾಕೀಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಸಮನ್ಸ್ ಮತ್ತು ನೋಟಿಸ್ ನೀಡಲಾಗಿದೆ.
ಮಣಿಮೇಖಲೈ ವಿರುದ್ಧ ವಕೀಲ ರಾಜ್ ಗೌರವ್ ಅವರು ಮೊಕದ್ದಮೆ ಹೂಡಿದ್ದು, ಮಣಿಮೇಖಲೈ ಅವರು ಹಿಂದೂ ದೇವತೆಯನ್ನು ತುಂಬಾ ‘ಅಸಭ್ಯವಾಗಿʼ ಚಿತ್ರಿಸಿದ್ದು ಪೋಸ್ಟರ್ ಮತ್ತು ಪ್ರಚಾರ ವೀಡಿಯೊದಲ್ಲಿ ದೇವತೆ ಸಿಗರೇಟ್ ಸೇದುತ್ತಿರುವುದನ್ನು ತೋರಿಸಿದ್ದಾರೆ. ಇದು ಸಾಮಾನ್ಯ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಲ್ಲದೆ, ನೈತಿಕತೆ ಮತ್ತು ಸಭ್ಯತೆಯ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ವಾದಿಸಿದರು.