ಅಡುಗೆ ಕಾರ್ಯಕ್ರಮದಲ್ಲಿ “ಗೋಮಾತಾ” ಪದ ಬಳಕೆ: ಫಾತಿಮಾ ನಡೆಯನ್ನು ಕಟುವಾಗಿ ಆಕ್ಷೇಪಿಸಿದ ಕೇರಳ ಹೈಕೋರ್ಟ್

“ಗೋಮಾತಾ ಉಲರ್ಥು” ಎಂಬ ಹೆಸರಿನಡಿ ಅಡುಗೆ ಕಾರ್ಯಕ್ರಮದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಫಾತಿಮಾ ಅಪ್ಲೋಡ್ ಮಾಡಿದ್ದರು. ಇದರಲ್ಲಿ ತಿನಿಸು ತಯಾರಿಕೆಯ ವಿಧಾನ ವಿವರಿಸುವಾಗ ಅವರು ಪದೇಪದೇ ಮಾಂಸದ ಬದಲಿಗೆ ಗೋಮಾತಾ ಎಂದು ಉಲ್ಲೇಖಿಸಿದ್ದಾರೆ.
ಅಡುಗೆ ಕಾರ್ಯಕ್ರಮದಲ್ಲಿ “ಗೋಮಾತಾ” ಪದ ಬಳಕೆ: ಫಾತಿಮಾ ನಡೆಯನ್ನು ಕಟುವಾಗಿ ಆಕ್ಷೇಪಿಸಿದ ಕೇರಳ ಹೈಕೋರ್ಟ್
Published on

ಅಡುಗೆ ತಯಾರಿಕಾ ಕಾರ್ಯಕ್ರಮದಲ್ಲಿ ಮಾಂಸಕ್ಕೆ ಬದಲಾಗಿ “ಗೋಮಾತಾ” ಎಂಬ ಶಬ್ದದ ಬಳಕೆಯು ಗೋವನ್ನು ದೇವರು ಎಂದು ಪೂಜಿಸುವ ಲಕ್ಷಾಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವ ಸಾಧ್ಯತೆ ಇದೆ ಎಂದಿರುವ ಕೇರಳ ಹೈಕೋರ್ಟ್‌ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ ವಿರುದ್ಧ ಸೋಮವಾರ ಕಟು ಟೀಕೆ ವ್ಯಕ್ತಪಡಿಸಿದೆ.

“ಗೋಮಾತಾ ಉಲರ್ಥು” ಎಂಬ ಹೆಸರಿನಡಿ ಅಡುಗೆ ಕಾರ್ಯಕ್ರಮದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಫಾತಿಮಾ ಅಪ್‌ಲೋಡ್‌ ಮಾಡಿದ್ದರು. ಇದರಲ್ಲಿ ತಿನಿಸು ತಯಾರಿಕೆಯ ವಿಧಾನ ವಿವರಿಸುವಾಗ ಅವರು ಪದೇಪದೇ ಮಾಂಸದ ಬದಲಿಗೆ “ಗೋಮಾತಾ” ಎಂದು ಉಲ್ಲೇಖಿಸಿದ್ದಾರೆ.

“ಗೋಮಾತಾ ಎಂಬ ಶಬ್ದವನ್ನು ಪವಿತ್ರವಾದ ಗೋವಿಗೆ ಬಳಕೆ ಮಾಡಲಾಗುತ್ತದೆ ಎಂಬುದು ನಿರ್ವಿವಾದ. ಭಾರತದಲ್ಲಿ ವೇದಗಳ ಕಾಲದಿಂದಲೂ ಗೋವನ್ನು ದೈವಗಳಿಗೆ ಸರಿಸಮನಾಗಿ ಪವಿತ್ರವಾದ ದೇವತೆ ಎಂದು ಸಂಬೋಧಿಸಲಾಗಿದೆ ಎಂಬುದಕ್ಕೆ ದೂರುದಾರರು ಹಲವು ಧರ್ಮಗ್ರಂಥಗಳನ್ನು ಉಲ್ಲೇಖಿಸಿದ್ದಾರೆ. ಅಡುಗೆ ಕಾರ್ಯಕ್ರಮದಲ್ಲಿನ ಮಾಂಸಕ್ಕೆ ಗೋಮಾತಾ ಎಂದು ಬಳಸಿದರೆ ದೇಶಾದ್ಯಂತ ಲಕ್ಷಾಂತರ ಹಿಂದೂಗಳ ನಂಬಿಕೆಗೆ ವಿರುದ್ಧವಾಗಿ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದಂತಾಗುತ್ತದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ” ಎಂದು ಪೀಠ ಹೇಳಿದೆ.

ಶಬರಿಮಲೈನ ಅಯ್ಯಪ್ಪ ಸ್ವಾಮಿಗೆ ಸಂಬಂಧಿಸಿದಂತೆ ನಿಂದನಾತ್ಮಕ ಪತ್ರಗಳನ್ನು ಮುದ್ರಿಸಿದ ಪ್ರಕರಣದಲ್ಲಿ 2018ರಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆಯುವಾಗ ಫಾತಿಮಾ ಉಲ್ಲೇಖಿಸಿರುವ ಷರತ್ತುಗಳನ್ನು ಸದರಿ ಪ್ರಕರಣದಲ್ಲಿ ಉಲ್ಲಂಘಿಸಿದ್ದಾರೆ ಎಂದು ನ್ಯಾಯಮೂರ್ತಿ ಸುನಿಲ್‌ ಥಾಮಸ್‌ ಅವರಿದ್ದ‌ ಏಕಸದಸ್ಯ ಪೀಠ ಹೇಳಿದೆ.

ಗೋಮಾತಾ ಎಂಬ ಪದವನ್ನು ದುರುದ್ದೇಶಪೂರ್ವಕವಾಗಿ ಮತ್ತು ಬೇಕೆಂದೇ ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ. “ಅತ್ಯಂತ ಆಕ್ಷೇಪಾರ್ಹವಾದಂಥ ವಿಡಿಯೋವನ್ನು ಸಾರ್ವಜನಿಕ ವೀಕ್ಷಣೆಗೆ ಅಪ್‌ಲೋಡ್‌ ಮಾಡುವುದು ಭಕ್ತರ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟು ಮಾಡುತ್ತದೆ” ಎಂದು ನ್ಯಾಯಾಲಯ ಹೇಳಿದೆ.

Also Read
ʼಧರ್ಮಾತೀತವಾಗಿ ಇಷ್ಟದ ವ್ಯಕ್ತಿಯ ಜೊತೆ ಬದುಕುವುದು ಜೀವಿಸುವ ಹಕ್ಕಿನೊಳಗೇ ಅಂತರ್ಗತವಾಗಿದೆʼ: ಅಲಾಹಾಬಾದ್ ಹೈಕೋರ್ಟ್

ಈ ಕಾರಣದ ಆಧಾರದಲ್ಲಿ ಫಾತಿಮಾ ಅವರ ಜಾಮೀನು ವಜಾಗೊಳಿಸಬಹುದಾಗಿದೆ. ಆದರೆ, ಅಂಥ ಕ್ರಮದಿಂದ ಹಿಂದೆ ಸರಿಯುವುದಾಗಿ ಪೀಠ ಹೇಳಿದ್ದು, ಮುಂದೆ ಯಾವುದೇ ತೆರನಾದ ಮಾಹಿತಿ ಅಥವಾ ಪ್ರತಿಕ್ರಿಯೆ ನೀಡಲು ದೃಶ್ಯ ಅಥವಾ ವಿದ್ಯುನ್ಮಾನ ಮಾಧ್ಯಮ ಬಳಸದಂತೆ ಆದೇಶಿಸಿದೆ.

ಫಾತಿಮಾ ಅವರ “ಗೋಮಾತಾ ಉಲರ್ಥು” ಎಂಬ ಹೆಸರಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕುವಂತೆ ನ್ಯಾಯಾಲಯ ಸೂಚಿಸಿದೆ. ಅಲ್ಲದೇ ಮೂರು ತಿಂಗಳವರೆಗೆ ಸೋಮವಾರ ಮತ್ತು ಶನಿವಾರ ಬೆಳಿಗ್ಗೆ 9 ರಿಂದ 10 ಗಂಟೆ ಅವಧಿಗೆ ಸಮೀಪದ ಪೊಲೀಸ್‌ ಠಾಣೆಗೆ ತೆರಳಿ ಹಾಜರಿ ಸಲ್ಲಿಸುವಂತೆ ಫಾತಿಮಾ ಅವರಿಗೆ ಸೂಚಿಸಿದೆ.

Kannada Bar & Bench
kannada.barandbench.com