ಹುಡುಕಾಟದ ಫಲಿತಾಂಶಗಳಲ್ಲಿ ಕಂಡುಬರುವ ವಿಷಯದ ಮೇಲೆ ತನಗೆ ಯಾವುದೇ ನಿಯಂತ್ರಣ ಇಲ್ಲ. ತಾನು ಕೇವಲ ಮಧ್ಯಸ್ಥ ವೇದಿಕೆ ಎಂಬುದಾಗಿ ಗೂಗಲ್ ರೀತಿಯ ಸರ್ಚ್ ಎಂಜಿನ್‌ಗಳು ಹೇಳಿಕೊಳ್ಳುವಂತಿಲ್ಲ ಎಂದು ಕೇರಳ ಹೈಕೋರ್ಟ್ ಗುರುವಾರ ತಿಳಿಸಿದೆ [ವರ್ಜೀನಿಯಾ ಶೈಲು ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಯಾವುದೇ ವ್ಯಕ್ತಿಯ ಖಾಸಗಿ ಮಾಹಿತಿಗಳನ್ನು ತೆಗೆದುಹಾಕುವ (ಇದನ್ನು ರೈಟ್ ಟು ಫರ್ಗಾಟನ್ ಅಥವಾ ರೈಟ್ ಟು ಎರೇಷ್ಯುರ್ ಎಂದು ಕರೆಯಲಾಗುತ್ತದೆ) ವೈಯಕ್ತಿಕ ಹಕ್ಕಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಕಾಯಿದೆ ಇಲ್ಲದೇ ಇರುವಾಗ ಅದು ನ್ಯಾಯಾಲಯದ ತೀರ್ಪು ಮತ್ತು ವಿಚಾರಣೆಗಳ ಪ್ರಕಟಣೆಗೆ ಯಾವ ರೀತಿ ಅನ್ವಯವಾಗುತ್ತದೆ ಎಂಬುದನ್ನು ನ್ಯಾಯಮೂರ್ತಿಗಳಾದ ಎ ಮುಹಮ್ಮದ್ ಮುಷ್ತಾಕ್ ಮತ್ತು ಶೋಬಾ ಅನ್ನಮ್ಮ ಈಪೆನ್ ಅವರನ್ನೊಳಗೊಂಡ ವಿಭಾಗೀಯ ಪೀಠ ತೀರ್ಪಿನಲ್ಲಿ ಗಮನಿಸಿದೆ.
ಸರ್ಚ್ ಫಲಿತಾಂಶಗಳಲ್ಲಿ ನ್ಯಾಯಾಲಯದ ತೀರ್ಪುಗಳು ಲಭ್ಯವಾಗುವಂತೆ ಮಾಡುವುದರಲ್ಲಿ ದೋಷ ಇಲ್ಲದಿದ್ದರೂ ಸರ್ಚ್ ಫಲಿತಾಂಶಗಳಲ್ಲಿ ಕಾಣುವ ಮಾಹಿತಿ ಮೇಲೆ ತನಗೆ ಯಾವುದೇ ನಿಯಂತ್ರಣ ಇಲ್ಲ ಎಂದು ಗೂಗಲ್ ಹೇಳುವಂತಿಲ್ಲ ಎಂಬುದಾಗಿ ಅದು ಹೇಳಿದೆ.
'ಆನ್‌ಲೈನ್ ಪ್ರಕಟಣೆಗಳಿಗೆ ತಾನು ಕುರುಡುಗಣ್ಣಾಗಿರುವೆ ಎಂದು ಗೂಗಲ್ ಹೇಳುವಂತಿಲ್ಲ. ಮಕ್ಕಳ ಮೇಲಿನ ಲೈಂಗಿಕ ವಿಕೃತಿಯ ರೀತಿಯ ನಿಷೇಧಿತ ಸಂಗತಿಗಳು ಆನ್‌ಲೈನ್‌ನಲ್ಲಿ ಗೋಚರಿಸುವುದಕ್ಕೆ ಅನುಮತಿ ನೀಡಬಹುದೇ?' ಎಂದು ಅದು ಅಸಮಾಧಾನ ವ್ಯಕ್ತಪಡಿಸಿತು.
ಅಲ್ಲದೆ ಕೃತಕ ಬುದ್ಧಿಮತ್ತೆಯ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಯುಗದಲ್ಲಿ ವಿಷಯದ ಸ್ವರೂಪ ಗುರುತಿಸಲು ಮತ್ತು ಆಕ್ಷೇಪಾರ್ಹ ವಿಷಯಗಳನ್ನು ತೆಗೆದುಹಾಕಲು ಗೂಗಲ್‌ಗೆ ಸಾಧ್ಯವಿದೆ ಎಂದು ಅದು ಅಭಿಪ್ರಾಯಪಟ್ಟಿತು.
ಇದೇ ವೇಳೆ ನ್ಯಾಯಾಲಯ “…ಯಾವುದೇ ಮಾನ್ಯ ದಾಖಲೆಗಳ ಪ್ರಕಟಣೆಗೆ ಸಂವಿಧಾನದಲ್ಲಿ ರಕ್ಷಣೆ ಇದ್ದು ಅದಕ್ಕೆಂದು 19(1)(ಎ), ಅಡಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒದಗಿಸಲಾಗಿದೆ. ಕೃತಕ ಬುದ್ಧಿಮತ್ತೆಯು ಪ್ರಗತಿ ಹೊಂದುತ್ತಿರುವ ಈ ಯುಗದಲ್ಲಿ ನಿರ್ದಿಷ್ಟ ದತ್ತಾಂಶವನ್ನು ಗುರುತಿಸಿ ತೆಗೆದು ಹಾಕಲು ಗೂಗಲ್‌ಗೆ ಕಷ್ಟದಾಯಕವಾಗದು. ಅದನ್ನು ಮಾಡದೇ ಹೋದಲ್ಲಿ ಆಗ ಅದು ವೈಯಕ್ತಿಕ ಮಾಹಿತಿಗಳನ್ನು ಅಳಿಸಿ ಹಾಕುವ ಹಕ್ಕಿನ ಉಲ್ಲಂಘನೆಯಾಗುತ್ತದೆ” ಎಂದು ಅದು ಹೇಳಿತು.
ವಿವಾಹ ಮತ್ತು ಪಾಲನೆಗೆ ಸಂಬಂಧಿಸಿದ ಕೆಲ ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದರೂ ಗೂಗಲ್ ಸರ್ಚ್ ಫಲಿತಾಂಶದಲ್ಲಿ ಹಾಗೂ ಕಾನೂನು ಸಂಪನ್ಮೂಲ ಜಾಲತಾಣ ʼಇಂಡಿಯನ್ ಕಾನೂನ್ʼನಲ್ಲಿ ತಮ್ಮ ಕುರಿತ ವೈಯಕ್ತಿಕ ಮಾಹಿತಿ ಹಾಗೇ ಇದ್ದು ಅದನ್ನು ತೆಗೆದುಹಾಕುವಂತೆ ಕೋರಿ ಕೆಲವು ದಾವೆದಾರರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ತೀರ್ಪು ನೀಡುವ ವೇಳೆ ನ್ಯಾಯಾಲಯ ಈ ಅವಲೋಕನಗಳನ್ನು ಮಾಡಿತು.