ಗೂಗಲ್ ಮ್ಯಾಪ್ ಅಪ್ಲಿಕೇಷನ್‌ನಲ್ಲಿರುವ ಪಿನ್ ಲೊಕೇಷನ್ ಹಂಚಿಕೊಂಡರೆ ಮಾತ್ರ ಜಾಮೀನು ನೀಡುವುದಾಗಿ ಉಚ್ಚ ನ್ಯಾಯಾಲಯವೊಂದು ವಿಧಿಸಿರುವ ಷರತ್ತು ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆಯೇ ಎಂಬುದನ್ನು ಪರಿಶೀಲಿಸುವುದಕ್ಕಾಗಿ ತನ್ನ ಪಿನ್ ಲೊಕೇಷನ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ವಿವರಿಸುವಂತೆ ಸುಪ್ರೀಂ ಕೋರ್ಟ್ ಗೂಗಲ್ ಇಂಡಿಯಾಕ್ಕೆ ನಿರ್ದೇಶನ ನೀಡಿದೆ [ಫ್ರಾಂಕ್ ವಿಟಸ್ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ ಇನ್ನಿತರರ ನಡುವಣ ಪ್ರಕರಣ].
ಏಪ್ರಿಲ್ 8 ರೊಳಗೆ ಪ್ರತಿಕ್ರಿಯಿಸುವಂತೆ ಗೂಗಲ್‌ಗೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಶುಕ್ರವಾರ ಸೂಚಿಸಿದೆ.
ಈ ಪ್ರಕರಣದಲ್ಲಿ ಗೂಗಲ್ ಇಂಡಿಯಾವನ್ನು ಪಕ್ಷಕಾರನನ್ನಾಗಿ ಸೇರಿಸಿಕೊಳ್ಳುತ್ತಿಲ್ಲ ಬದಲಿಗೆ ಗೂಗಲ್ ಪಿನ್ ಕಾರ್ಯನಿರ್ವಹಣೆಯ ಬಗ್ಗೆ ಕಂಪನಿಯಿಂದ ಮಾಹಿತಿಯನ್ನಷ್ಟೇ ಕೋರಲಾಗುತ್ತಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿದ್ದ ನೈಜೀರಿಯಾ ಪ್ರಜೆ ಫ್ರಾಂಕ್ ವಿಟಸ್ ಮತ್ತು ಸಹ ಆರೋಪಿಗೆ ಮಧ್ಯಂತರ ಜಾಮೀನು ನೀಡುವಾಗ ದೆಹಲಿ ಹೈಕೋರ್ಟ್ ವಿಧಿಸಿದ ಕೆಲವು ಷರತ್ತುಗಳಲ್ಲಿ ತಾನಿರುವ ಸ್ಥಳದ ಮಾಹಿತಿಯನ್ನು (ಗೂಗಲ್ ಪಿನ್ ಲೊಕೇಷನ್) ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕೆಂಬುದೂ ಸೇರಿತ್ತು.
ಆರೋಪಿಗಳು ಭಾರತ ತೊರೆಯದಂತೆ ಮತ್ತು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗುವಂತೆ ನೈಜೀರಿಯಾ ಹೈಕಮಿಷನ್‌ನಿಂದ ಆಶ್ವಾಸನೆ ಪಡೆಯುವಂತೆ ದೆಹಲಿ ಹೈಕೋರ್ಟ್ ಆರೋಪಿಗಳಿಗೆ ಸೂಚಿಸಿತ್ತು. ಇದನ್ನು ಫ್ರಾಂಕ್ ವಿಟಸ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ.
ವಾದ ಆಲಿಸಿದ ಸುಪ್ರೀಂ ಕೋರ್ಟ್ ಇಂತಹ ಕಠಿಣ ಜಾಮೀನು ಷರತ್ತು ವಿಧಿಸುವ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿತು.
ಯಾವುದೇ ರಾಯಭಾರ ಕಚೇರಿ ಅಂತಹ ಭರವಸೆ ನೀಡುವ ಸ್ಥಿತಿಯಲ್ಲಿಲ್ಲದ ಕಾರಣ ಅಂತಹ ಕಠಿಣ ಷರತ್ತು ವಿಧಿಸಲು ಸಾಧ್ಯವಿಲ್ಲ. ಆದ್ದರಿಂದ ಗೂಗಲ್ ನಕ್ಷೆಯಲ್ಲಿ ತಾನಿರುವ ಸ್ಥಳದ ಮಾಹಿತಿ ಒದಗಿಸಬೇಕು ಮತ್ತು ನೈಜೀರಿಯಾ ಹೈಕಮಿಷನ್‌ನಿಂದ ಭರವಸೆ ಪಡೆಯಬೇಕೆಂಬ ಷರತ್ತುಗಳನ್ನು ಹೊರತುಪಡಿಸಿ ಉಳಿದ ಷರತ್ತುಗಳ ಆಧಾರದಲ್ಲಿ ಅರ್ಜಿದಾರರನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ನಿರ್ದೇಶಿಸಿತು. ಅಲ್ಲದೆ ಜಾಮೀನು ಷರತ್ತಿನ ಮೊತ್ತವನ್ನು ರೂ 2 ಲಕ್ಷದ ಬದಲಿಗೆ ರೂ 50,000ಕ್ಕೆ ಇಳಿಸಿತು.
ಇಂತಹದ್ದೇ ಮತ್ತೊಂದು ಪ್ರಕರಣದಲ್ಲಿ, ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿ ಗೂಗಲ್ ಪಿನ್‌ಗಳನ್ನು ಹಂಚಿಕೊಳ್ಳುವ ಮೂಲಕ ತನ್ನ ಸ್ಥಳದ ವಿವರಗಳನ್ನು ನಿರಂತರವಾಗಿ ಪೊಲೀಸರಿಗೆ ಕಳುಹಿಸಬೇಕು ಎಂಬ ಜಾಮೀನು ಷರತ್ತಿಗೆ ನ್ಯಾಯಮೂರ್ತಿ ಓಕಾ ನೇತೃತ್ವದ ಮತ್ತೊಂದು ಪೀಠ ಜುಲೈನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದು ಕಣ್ಗಾವಲಿಗೆ ಸಮನಾಗಬಹುದು ಎಂದು ನ್ಯಾಯಪೀಠ ಮೌಖಿಕವಾಗಿ ಟೀಕಿಸಿತ್ತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]