ಸರ್ಕಾರ ಶಕ್ತಿಮೀರಿ ಕೆಲಸ ಮಾಡುತ್ತಿದೆ: ಎಲ್‌ಪಿಜಿ ಪೂರೈಕೆ ವ್ಯತ್ಯಯ ವಿಚಾರದಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್‌ ನಕಾರ

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ದೇಶದಲ್ಲಿ ತಲೆದೋರಿರುವ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆ ವ್ಯತ್ಯಯದಿಂದ ಸಮಸ್ಯೆಯಾಗುತ್ತಿದೆ ಎಂದು ಬೆಂಗಳೂರು ಹೋಟೆಲ್‌ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಇತ್ಯರ್ಥಪಡಿಸಿತು.
LPG
LPG
Published on

ಅಡುಗೆ ಅನಿಲ ಪೂರೈಕೆಯಲ್ಲಿನ ವ್ಯತ್ಯಯ ಸರಿಪಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಕೋರಿ ಬೆಂಗಳೂರು ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರಾಕರಿಸಿತು.

ಹಾಲಿ ವಿಚಾರವನ್ನು ಸರ್ಕಾರಕ್ಕೆ ಬಿಡುವುದು ಒಳಿತು ಎಂಬ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರ ವಾದವನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿತು.

“ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಸರ್ಕಾರವು ಶಕ್ತಿಮೀರಿ ಕೆಲಸ ಮಾಡುತ್ತಿದೆ. ಇದನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಲಾಗದು. ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ನ್ಯಾಯಾಲಯಗಳು ಈ ವಿಚಾರದಲ್ಲಿ ಭಾಗಿಯಾಗಬಾರದು. ಅರ್ಜಿ ಇತ್ಯರ್ಥಪಡಿಸಲಾಗಿದೆ” ಎಂದಿತು.

ಇದಕ್ಕೂ ಮುನ್ನ, ತುಷಾರ್‌ ಮೆಹ್ತಾ ಅವರು “ಪರಿಸ್ಥಿತಿ ಬದಲಾಗುತ್ತಿದ್ದು, ಭಾರತದಲ್ಲಿ ಎಲ್‌ಪಿಜಿ ಪೂರೈಕೆ ವ್ಯತ್ಯಯ ಕಡಿಮೆ ಮಾಡಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ನಿಯಂತ್ರಣದಲ್ಲಿಲ್ಲದ ಕೆಲವು ಬೆಳವಣಿಗಳಿಂದ ಈ ಪರಿಸ್ಥಿತಿ ನಿರ್ಮಾಣವಾಗದ್ದು, ಎಲ್‌ಪಿಜಿ ಪೂರೈಕೆಯಲ್ಲಿ ಕೊರತೆಯಾಗುವುದನ್ನು ತಪ್ಪಿಸಲು ಭಾರತ ಸರ್ಕಾರ ಕೆಲಸ ಮಾಡುತ್ತಿದೆ. ಈ ವಿಚಾರವನ್ನು ಕಾರ್ಯಾಂಗಕ್ಕೆ ಬಿಡಬೇಕು. ಪ್ರತಿದಿನ ಪರಿಸ್ಥಿತಿ ಬದಲಾಗುತ್ತಿದ್ದು, ಆದ್ಯತೆ ಬದಲಾಗಬೇಕಿದೆ. ಹೋಟೆಲ್‌ಗಳಿಗೆ ಎಲ್‌ಪಿಜಿ ಪೂರೈಸಬೇಕೋ ಅಥವಾ ಮನೆಗಳಿಗೋ ಎಂಬುದು ನಮಗೆ ತಿಳಿಯದಾಗಿದೆ. ಹಲವು ವಿಚಾರಗಳು ನಮ್ಮ ನಿಯಂತ್ರಣದಲ್ಲಿಲ್ಲ” ಎಂದರು.

ಆಗ ಪೀಠವು “ಹೋಟೆಲ್‌ಗಳಿಗೆ ಶುಭ ಸುದ್ದಿ ಇದೆಯೇ? ಹೆಚ್ಚುವರಿ ಸೂಚನೆ ಏನಾದರೂ ಇದೆಯೇ” ಎಂದು ಕೇಳಿತು. ಇದಕ್ಕೆ ಮೆಹ್ತಾ ಅವರು “ಸದ್ಯಕ್ಕೆ ಇಲ್ಲ” ಎಂದರು.

ಒಂದು ಹಂತದಲ್ಲಿ ಪೀಠವು ರಾಜ್ಯದಾದ್ಯಂತ ಎಲ್‌ಪಿಜಿ ಸಿಲಿಂಡರ್‌ ಹಂಚಿಕೆಯ ಕುರಿತು ಕಳವಳ ವ್ಯಕ್ತವಾಗಿರುವುದರ ಕುರಿತು ಪ್ರಸ್ತಾಪಿಸಿತು. ಇದಕ್ಕೆ ಮೆಹ್ತಾ ಅವರು “ಇಂಥ ವಿಚಾರಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸುತ್ತದೆ. ಎರಡೂ ಕಡೆಯ ಸರ್ಕಾರಗಳು ಒಂದೇ ನಿಲುವು ತಳೆಯಬೇಕಾಗುತ್ತದೆ. ಹಂಚಿಕೆದಾರರಿಂದ ಎಲ್‌ಪಿಜಿ ಪೂರೈಕೆಯಲ್ಲಿ ವಂಚನೆ ಕಂಡುಬಂದರೆ ರಾಜ್ಯ ಸರ್ಕಾರವು ಕಠಿಣ ಕ್ರಮಕೈಗೊಳ್ಳಬೇಕು” ಎಂದರು.

ಅರ್ಜಿದಾರರ ಪರ ವಕೀಲರು “ಎಲ್‌ಪಿಜಿ ವ್ಯತ್ಯಯ ಕುರಿತು ಇಂದು ಸಭೆ ನಡೆಯಲಿದ್ದು, ಅಲ್ಲಿನ ಬೆಳವಣಿಗೆಯ ಬಗ್ಗೆ ತಿಳಿಯಲು ಅರ್ಜಿಯನ್ನು ಬಾಕಿ ಉಳಿಸಬೇಕು. ಎಲ್‌ಪಿಜಿ ಪೂರೈಕೆಯಲ್ಲಿ ಕೇರಳ ಮತ್ತು ತಮಿಳುನಾಡಿನ ಪರಿಸ್ಥಿತಿ ಚೆನ್ನಾಗಿದೆ. ಕೆಲವು ಮಾರ್ಗಸೂಚಿ ಅನುಸರಿಸಿದರೆ ರಾಜ್ಯದಲ್ಲೂ ಪರಿಸ್ಥಿತಿ ಸುಧಾರಣೆಯಾಗಲಿದೆ” ಎಂದರು.

ಇದಕ್ಕೆ ಮೆಹ್ತಾ ಅವರು “ಇಂಥ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೇ ನಿಲುವು ತಳೆಯಬೇಕು. ಕೇರಳ ಮತ್ತು ತಮಿಳುನಾಡಿನ ವಿಚಾರ ಪ್ರಸ್ತಾಪಿಸಿ, ರಾಜಕೀಯ ಪಕ್ಷಪಾತ ಎಂದು ಅರ್ಜಿದಾರರ ಪರ ವಕೀಲರು ಹೇಳಲಾಗದು. ಇದಕ್ಕೆ ಸೂಕ್ತ ಮತ್ತು ಸರಿಯಾದ ಕಾರಣಗಳನ್ನು ನೀಡಬೇಕು” ಎಂದರು.

Also Read
ಹೋಟೆಲ್‌ಗಳಿಗೆ ವಾಣಿಜ್ಯ ಬಳಕೆ ಸಿಲಿಂಡರ್‌ ಪೂರೈಕೆ: ರಾಜ್ಯ, ಕೇಂದ್ರ ಸರ್ಕಾರಗಳಿಗೆ ಹೈಕೋರ್ಟ್‌ ನೋಟಿಸ್‌

ಅಲ್ಲದೇ, ಎಲ್‌ಪಿಜಿ ವಿಚಾರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ ಸಹ ಯಾವುದೇ ನಿರ್ದೇಶನ ನೀಡಲು ನಿರಾಕರಿಸಿದೆ ಎಂದರು.

ಇದನ್ನು ಆಲಿಸಿದ ಪೀಠವು “ಈ ವಿಚಾರವು ಸರ್ಕಾರದ ನೀತಿಯ ಭಾಗವಾಗಿದ್ದು, ಇಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಪರಿಸ್ಥಿತಿಯ ಕುರಿತು ಅರ್ಜಿದಾರರು ಮನವರಿಕೆ ಮಾಡಿಕೊಡಬಹುದು” ಎಂದು ಹೇಳಿ, ಅರ್ಜಿ ಇತ್ಯರ್ಥಪಡಿಸಿತು.

Kannada Bar & Bench
kannada.barandbench.com