ಘನ ತ್ಯಾಜ್ಯ ವಿಲೇವಾರಿಗಿಂತಲೂ ಟೆಂಡರ್‌ ಕರೆಯುವುದಕ್ಕೆ ಸರ್ಕಾರಕ್ಕೆ ಹೆಚ್ಚು ಆಸಕ್ತಿ: ಹೈಕೋರ್ಟ್‌ ತರಾಟೆ

ಘನ ತ್ಯಾಜ್ಯ ನಿರ್ವಹಣಾ ನಿಗಮ ನಿಯಮಿತ (ಬಿಎಸ್‌ಡಬ್ಲೂಎಂಎಲ್‌) ಹೊರಡಿಸಿರುವ ಹೊಸ ಟೆಂಡರ್‌ ಆದೇಶದಲ್ಲಿ ಸರ್ಕಾರ ತನ್ನ ಮಾತನ್ನು ಮೀರಿ ನಡೆದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದಿರುವ ಪೀಠವು ನಿಲುವು ಸ್ಪಷ್ಟಪಡಿಲು ಸರ್ಕಾರಕ್ಕೆ ಆದೇಶಿಸಿದೆ.
BBMP and Karnataka HC
BBMP and Karnataka HC
Published on

“ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಘನ ತ್ಯಾಜ್ಯ ವಿಲೇವಾರಿ ಮಾಡುವುದಕ್ಕಿಂತಲೂ ಟೆಂಡರ್‌ ಕರೆಯುವ ಬಗ್ಗೆಯೇ ನಿಮಗೆ ಹೆಚ್ಚು ಆಸಕ್ತಿ ಇದ್ದಂತಿದೆ” ಎಂದು ರಾಜ್ಯ ಸರ್ಕಾರದ ಕ್ರಮವನ್ನು ಗುರುವಾರ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್‌, “ಕಸ ವಿಲೇವಾರಿಯ ಪ್ಯಾಕೇಜ್‌ ಸಮಸ್ಯೆಯನ್ನು ಏನಾದರೂ ಎದುರಿಸುತ್ತಿದ್ದೀರಾ” ಎಂದು ಕಟುವಾಗಿ ಪ್ರಶ್ನಿಸಿದೆ.

ಸರ್ಕಾರ ಹೊರಡಿಸಿರುವ ಮರು ಟೆಂಡರ್ ಆದೇಶ ಪ್ರಶ್ನಿಸಿರುವ ಮತ್ತು ಇದೇ ಪೀಠ ನೀಡಿರುವ ಈ ಮೊದಲಿನ ಆದೇಶಕ್ಕೆ ಸಂಬಂಧಿಸಿದ ಮರು ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice M Nagaprasanna
Justice M Nagaprasanna

ವಕೀಲ ಪಿ ಪ್ರಸನ್ನ ಕುಮಾರ್‌ ಅವರು “ಸರ್ಕಾರ ಈ ಮೊದಲು ಇದೇ ಪೀಠಕ್ಕೆ ನೀಡಿದ್ದ ಮುಚ್ಚಳಿಕೆಯನ್ನು ಉಲ್ಲಂಘಿಸಿದೆ ಮತ್ತು ಹೊಸ ಟೆಂಡರ್‌ ಕರೆಯುವ ಮೂಲಕ ನ್ಯಾಯಾಂಗ ನಿಂದನೆಗೆ ಈಡಾಗಿದೆ” ಎಂದು ಆರೋಪಿಸಿದರು.

ಇದನ್ನು ಬಲವಾಗಿ ಅಲ್ಲಗಳೆದ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ ಶೆಟ್ಟಿ ಅವರು “ಅರ್ಜಿದಾರರು ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿದ್ದಾರೆ. ಈ ಹಿಂದಿನ ಹಾಗೂ 2025ರ ಮೇ 28ರಂದು ಕರೆದಿರುವ ಟೆಂಡರ್‌ಗಳು ಒಂದಕ್ಕೊಂದು ಭಿನ್ನವಾಗಿವೆ. ಇವೆರಡನ್ನೂ ಪರಸ್ಪರ ಹೋಲಿಕೆ ಮಾಡುವುದು ಸರಿಯಲ್ಲ” ಎಂದು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಸರ್ಕಾರಕ್ಕೆ ಬೆಂಗಳೂರಿನ ಕಸ ವಿಲೇವಾರಿಗಿಂತಲೂ ಹೆಚ್ಚಾಗಿ ಟೆಂಡರ್‌ ಕರೆಯುವ ಬಗ್ಗೆಯೇ ಉತ್ಸುಕತೆ ಇದ್ದಂತಿದೆ. ಅಷ್ಟೇ ಅಲ್ಲ, ಟೆಂಡರ್‌ ಕರೆದ ನಂತರ ಕಸ ವಿಲೇವಾರಿಗೆ ಜಾಗ ಹುಡುಕುತ್ತಿರುವಂತಿದೆ” ಎಂದು ಕುಟುಕಿತು.

“ಟೆಂಡರ್‌ ಕರೆದಿರುವ ಪ್ರಕ್ರಿಯೆಯು ಹೈಕೋರ್ಟ್ ಈ ಮೊದಲು ನೀಡಿರುವ ಆದೇಶ ಮತ್ತು ಸರ್ಕಾರ ತಾನು ನೀಡಿರುವ ಮುಚ್ಚಳಿಕೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಗಮ ನಿಯಮಿತ (ಬಿಎಸ್‌ಡಬ್ಲೂಎಂಎಲ್‌) ಹೊರಡಿಸಿರುವ ಹೊಸ ಟೆಂಡರ್‌ ಆದೇಶದಲ್ಲಿ ಸರ್ಕಾರ ತನ್ನ ಮಾತನ್ನು ಮೀರಿ ನಡೆದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಪೀಠವು ಈ ಕುರಿತು ಸರ್ಕಾರ ನಿಲುವು ಸ್ಪಷ್ಟಪಡಿಸಬೇಕು ಎಂದು ಅಡ್ವೊಕೇಟ್‌ ಜನರಲ್‌ ಅವರಿಗೆ ಸೂಚಿಸಿತು.

ಪ್ರಕರಣದಲ್ಲಿ ಪ್ರತಿವಾದಿಗಳಾದ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್‌ ಕಂಪನಿಯ ತಾಂತ್ರಿಕ ವಿಭಾಗದ ಮುಖ್ಯ ಮಹಾಪ್ರಬಂಧಕ ಹಾಗೂ ಘನತ್ಯಾಜ್ಯ ನಿರ್ವಹಣಾ ಕಾರ್ಯಕಾರಿ ಎಂಜಿನಿಯರ್‌ಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದ ಪೀಠವು ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿತು.

2025ರ ಏಪ್ರಿಲ್‌ 22ರಂದು ನೀಡಿರುವ ಆದೇಶದ ಮರು ಪರಿಶೀಲನೆಗೆ ಕೋರಿ ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರ ಸಂಘ ಹಾಗೂ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಎಸ್ ಎನ್ ಬಾಲಸುಬ್ರಹ್ಮಣ್ಯಂ ಅರ್ಜಿ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com