ಸರ್ಕಾರವು ನ್ಯಾಯಾಲಯದ ಆದೇಶ ಪಾಲಿಸದಿರುವುದು ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಧಕ್ಕೆ: ನ್ಯಾಯಮೂರ್ತಿ ಮುರಳೀಧರ್‌

ತಕ್ಷಣಕ್ಕೆ ತೀರ್ಪನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದೂ ಸ್ವತಂತ್ರ ಮತ್ತು ನಿಷ್ಪಕ್ಷಪಾತ ನ್ಯಾಯಾಂಗ ಕಾರ್ಯನಿರ್ವಹಣೆಯನ್ನು ಪ್ರಶ್ನಾರ್ಹವಾಗಿಸಿದೆ ಎಂದು ನ್ಯಾ. ಮುರಳೀಧರ್‌ ಹೇಳಿದ್ದಾರೆ.
Justice Muralidhar
Justice Muralidhar

ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸದೆ ಹೋದಾಗ ಅಥವಾ ಅದರ ಬಗ್ಗೆ ಅವಜ್ಞೆ ತೋರಿದಾಗ ನ್ಯಾಯಾಂಗದ ಶಾಸನಬದ್ಧತೆಗೆ ಗಂಭೀರ ಸವಾಲು ಎದುರಾಗಲಿದೆ ಎಂದು ಒಡಿಶಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್‌ ಮುರಳೀಧರ್‌ ಹೇಳಿದ್ದಾರೆ.

ಕೇರಳ ಹೈಕೋರ್ಟ್‌ನಲ್ಲಿ ಗುರುವಾರ ಉನ್ನತ ಕಾನೂನು ಅಧ್ಯಯನ ಮತ್ತು ತರಬೇತಿ ಅಕಾಡೆಮಿಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನ್ಯಾಯಾಲಯದ ಆದೇಶಕ್ಕೆ ವಿಧೇಯವಾಗಿರುವುದು ನ್ಯಾಯಾಂಗದ ಸ್ವಾತಂತ್ರ್ಯದ ಪ್ರಮುಖ ಆಧಾರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈಚೆಗೆ ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್‌ ಕುಮಾರ್‌ ಮಿಶ್ರಾ ಅವರ ಅವಧಿ ವಿಸ್ತರಣೆಯ ಆದೇಶವನ್ನು ಉಲ್ಲೇಖಿಸಿದ ನ್ಯಾ. ಮುರಳೀಧರ್‌ ಅವರು ಮಿಶ್ರಾ ಅವರು ನಿವೃತ್ತರಾಗಿದ್ದು, ಸುಪ್ರೀಂ ಕೋರ್ಟ್‌ ತೀರ್ಪಿಗೆ ಅನುಗುಣವಾಗಿ ನಡೆಯದ ಕೇಂದ್ರ ಸರ್ಕಾರವು ಹೊಸ ನಿರ್ದೇಶಕರನ್ನು ನೇಮಿಸಲು ಹೆಚ್ಚಿನ ಕಾಲಾವಕಾಶಬೇಕು ಎಂದು ಹೇಳಿದ್ದನ್ನು ಉದಾಹರಿಸಿದರು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲು ಯಾವೆಲ್ಲಾ ಕಾರಣಗಳು ಇವೆ ಎಂಬುದನ್ನು ಜಾರಿ ನಿರ್ದೇಶನಾಲಯ ಉಲ್ಲೇಖಿಸಬೇಕು ಎಂಬ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಕೋರಿ ಕೇಂದ್ರ ಸರ್ಕಾರವು ಅರ್ಜಿ ಸಲ್ಲಿಸಿರುವುದರ ಕುರಿತಾಗಿಯೂ ನ್ಯಾ. ಮುರಳೀಧರ್‌ ಮಾತನಾಡಿದರು.

“ನಿರಂತರವಾಗಿ ನ್ಯಾಯಾಲಯದ ಆದೇಶಗಳನ್ನು ಪ್ರಶ್ನಿಸುವುದು ಮತ್ತು ತಕ್ಷಣಕ್ಕೆ ತೀರ್ಪುಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಮೂಲಕ ಅವುಗಳನ್ನು ಅನೂರ್ಜಿತಗೊಳಿಸುವುದು ಸ್ವತಂತ್ರ ಮತ್ತು ನಿಷ್ಪಕ್ಷಪಾತ ನ್ಯಾಯಾಂಗವನ್ನು ಗಂಭೀರವಾಗಿ ಪ್ರಶ್ನೆಗೆ ಒಳಪಡಿಸುತ್ತದೆ” ಎಂದು ನ್ಯಾ. ಮುರಳೀಧರ್‌ ಹೇಳಿದರು.

ನ್ಯಾಯಾಂಗ ನಿಂದನೆ ಪ್ರಕರಣಗಳ ವಿಚಾರಣೆ ನಡೆಸುವ ಪೀಠಗಳು ಅತ್ಯಂತ ಹತಾಶವಾದ ಪೀಠಗಳಾಗಿವೆ. ಇಲ್ಲಿ ವ್ಯಕ್ತಿಗತವಾಗಿ ಹಾಗೂ ಸರ್ಕಾರಗಳು ಹೇಗೆ ನ್ಯಾಯಾಲಯದ ಆದೇಶಗಳನ್ನು ಗೌರವಿಸುತ್ತವೆ ಎಂಬುದು ತಿಳಿಯುತ್ತದೆ ಎಂದು ಅವರು ವಿವರಿಸಿದರು.

ನ್ಯಾಯಾಲಯದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅಡ್ಡಿ ಉಂಟು ಮಾಡುವ ಮೂಲಕ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಅಡ್ಡಿ ಉಂಟು ಮಾಡಲಾಗುತ್ತಿದೆ. ಹಲವು ತಿಂಗಳು ಕಳೆದರೂ ನೇಮಕಾತಿಯಾಗದೆ ಇರುವುದಕ್ಕೆ ಅನೇಕ ಉದಾಹರಣೆಗಳಿವೆ ಎಂದು ಅವರು ಹೇಳಿದರು. .

Kannada Bar & Bench
kannada.barandbench.com