Karnataka High Court
Karnataka High Court

ಗ್ರೂಪ್ ಸಿ ಸಿಬ್ಬಂದಿ ಗ್ರೂಪ್ ಬಿಗೆ ವಿಲೀನ: ಕರಡು ನಿಯಮ ಪ್ರಕಟಿಸದ ಸರ್ಕಾರ, ಅಧಿಕಾರಿಗಳ ಹಾಜರಾತಿಗೆ ಹೈಕೋರ್ಟ್‌ ಆದೇಶ

ಪ್ರಕರಣದ ಕುರಿತು ವಿವರಣೆ ನೀಡಲು ಜೂನ್‌ 6ರಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾದ ಅರ್ಚನಾ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿದ ಪೀಠ.

ನ್ಯಾಯಾಲಯದ ಆದೇಶದ ಹೊರತಾಗಿಯೂ ರಾಜ್ಯದ ವಿವಿಧ ಪೌರ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೂಪ್ ಸಿ ಸಿಬ್ಬಂದಿಯನ್ನು ಗ್ರೂಪ್ ಬಿಗೆ ವಿಲೀನಗೊಳಿಸುವ ವಿಚಾರದಲ್ಲಿ ಕರಡು ನಿಯಮಗಳನ್ನು ಪ್ರಕಟಿಸದ ಬಗ್ಗೆ ವಿವರಣೆ ನೀಡಲು ಜೂನ್‌ 6ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.

ಕರ್ನಾಟಕ ನಗರ ಪಾಲಿಕೆಗಳ ಉದ್ಯೋಗಿಗಳ ಸಂಘ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಮೇಲಿನ ಆದೇಶ ಮಾಡಿದೆ.

ಗ್ರೂಪ್ ಸಿ ಉದ್ಯೋಗಗಳನ್ನು ಗ್ರೂಪ್ ಬಿಗೆ ವಿಲೀನಗೊಳಿಸುವ ನಿಟ್ಟಿನಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಬೇಕು. ಆ ಕುರಿತು ಎರಡು ತಿಂಗಳಲ್ಲಿ ಕರಡು ನಿಯಮಗಳನ್ನು ಪ್ರಕಟಿಸುವಂತೆ 2021ರ ಜುಲೈ 19ರಂದು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ. ಆದರೆ, ಈವರೆಗೂ ಕರಡು ನಿಯಮಗಳನ್ನು ಪ್ರಕಟಿಸಿಲ್ಲ. ಆ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ ಎಂದು ಪೀಠ ಅಭಿಪ್ರಾಪಟ್ಟಿದೆ.

ಅಲ್ಲದೆ, ಪ್ರಕರಣದ ಕುರಿತು ವಿವರಣೆ ನೀಡಲು ಜೂನ್‌ 6ರಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾದ ಎಂ ಎಸ್ ಅರ್ಚನಾ ಅವರು ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿದ ಪೀಠವು ವಿಚಾರಣೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ರಾಜ್ಯದ ವಿವಿಧ ಪೌರಸಂಸ್ಥೆಯಲ್ಲಿ 10,000 ರಿಂದ 21,600 ರೂಪಾಯಿ ವೇತನ ಶ್ರೇಣಿ ಹೊಂದಿರುವ ಕಂದಾಯ ಅಧಿಕಾರಿಗಳು, ಕಚೇರಿ ವ್ಯವಸ್ಥಾಪಕರು ಮತ್ತು ಹಿರಿಯ ಆರೋಗ್ಯಾಧಿಕಾರಿಗಳ ಗ್ರೂಪ್ ಸಿ ಉದ್ಯೋಗಗಳನ್ನು ಗ್ರೂಪ್-ಬಿಗೆ ವಿಲೀನಗೊಳಿಸಿ 2020ರ ಸೆಪ್ಟೆಂಬರ್‌ 29ರಂದು ಸರ್ಕಾರ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿದ್ದ ಅರ್ಜಿದಾರರು, ವೃಂದ ಮತ್ತು ನೇಮಕಾತಿ ಅಧಿನಿಯಮಗಳಿಗೆ ತಿದ್ದುಪಡಿ ತರದೇ ಕೇವಲ ಕಾರ್ಯಕಾರಿ ಆದೇಶದ ಮೂಲಕ ನೇರವಾಗಿ ಗ್ರೂಪ್ ಸಿ ಉದ್ಯೋಗಿಗಳನ್ನು ಗ್ರೂಪ್ ಬಿಗೆ ವಿಲೀನಗೊಳಿಸಲು ಸಾಧ್ಯವಿಲ್ಲ ಎಂದು ಆಕ್ಷೇಪಿಸಿದ್ದರು.

ಈ ವಾದವನ್ನು ಪರಿಗಣಿಸಿದ್ದ ಏಕಸದಸ್ಯ ಪೀಠವು ಗ್ರೂಪ್-ಸಿ ಉದ್ಯೋಗಗಳನ್ನು ಗ್ರೂಪ್-ಬಿಗೆ ವಿಲೀನಗೊಳಿಸಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಬೇಕು. ಹಾಗಾಗಿ, ಎರಡು ತಿಂಗಳಲ್ಲಿ ಕರಡು ತಿದ್ದುಪಡಿ ನಿಯಮಗಳ ರೂಪಿಸಿ ಅಧಿಸೂಚನೆ ಹೊರಡಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ 2021ರ ಜುಲೈ 19ರಂದು ಆದೇಶಿಸಿತ್ತು. ಈ ಆದೇಶ ಪಾಲಿಸಿಲ್ಲ ಎಂದು ಆರೋಪಿಸಿ ಅರ್ಜಿದಾರರು ಮತ್ತೆ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ಸರ್ಕಾರಿ ವಕೀಲರು ಹಾಜರಾಗಿ, ಕರಡು ನಿಯಮಗಳನ್ನು ಸಿದ್ಧಪಡಿಸಲಾಗಿದೆ. ಸಚಿವ ಸಂಪುಟದ ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದರು. ಈ ವಾದಕ್ಕೆ ತೃಪ್ತಿಪಡದ ವಿಭಾಗೀಯ ಪೀಠವು ಹಿರಿಯ ಅಧಿಕಾರಿಗಳ ಹಾಜರಾತಿಗೆ ಆದೇಶಿಸಿದೆ.

Related Stories

No stories found.
Kannada Bar & Bench
kannada.barandbench.com