ಸೆಟ್‌ ಟಾಪ್‌ ಬಾಕ್ಸ್‌ಗಳಿಗೆ ಸರ್ಕಾರ ವಿಧಿಸುವ ಮೌಲ್ಯವರ್ಧಿತ ತೆರಿಗೆ ನ್ಯಾಯಸಮ್ಮತ: ಹೈಕೋರ್ಟ್‌

ಒಂದೇ ವ್ಯವಹಾರಕ್ಕೆ ಹಲವು ಮುಖಗಳಿರುತ್ತವೆ. ಒಂದೊಂದು ಮುಖವೂ ಇನ್ನೊಂದರಿಂದ ಭಿನ್ನವಾಗಿರುತ್ತದೆ. ಹೀಗಾಗಿ, ಭಿನ್ನ–ಭಿನ್ನ ತೆರಿಗೆಗಳನ್ನು ಕೇಂದ್ರ–ರಾಜ್ಯ ಮಾರಾಟದ ಅಡಿಯಲ್ಲಿ ವಿಧಿಸಲಾಗಿರುತ್ತದೆ ಎಂದು ವಿವರಿಸಿದ ನ್ಯಾಯಾಲಯ.
Karnataka High Court
Karnataka High Court
Published on

ಸೆಟ್‌ ಟಾಪ್‌ ಬಾಕ್ಸ್‌ಗಳ (ಎಸ್‌ಟಿಬಿ) ಮೇಲೆ ರಾಜ್ಯ ಸರ್ಕಾರ ಮೌಲ್ಯವರ್ಧಿತ ತೆರಿಗೆ ವಿಧಿಸುವುದು ಸಂವಿಧಾನಕ್ಕೆ ವಿರುದ್ಧವಾದ ನಡೆ ಎಂಬ ಕೇಬಲ್‌ ಆಪರೇಟರ್‌ಗಳ ವಾದವನ್ನು ಈಚೆಗೆ ಸಾರಾಸಗಟಾಗಿ ತಳ್ಳಿ ಹಾಕಿರುವ ಕರ್ನಾಟಕ ಹೈಕೋರ್ಟ್‌, ಎಸ್‌ಟಿಬಿಗಳ ಮೇಲೆ ರಾಜ್ಯ ಸರ್ಕಾರ ವಿಧಿಸುವ ಮೌಲ್ಯವರ್ಧಿತ ತೆರಿಗೆ ನ್ಯಾಯಸಮ್ಮತ ಎಂಬ ಮಹತ್ವದ ತೀರ್ಪು ನೀಡಿದೆ.

ಎಸ್‌ಟಿಬಿಗಳ ಮೇಲೆ ಮೌಲ್ಯವರ್ಧಿತ ತೆರಿಗೆ ವಿಧಿಸಿದ್ದನ್ನು ಪ್ರಶ್ನಿಸಿ ಮೆಸರ್ಸ್ ಏಟ್ರಿಯಾ ಕನ್ವರ್ಜೆನ್ಸ್‌ ಟೆಕ್ನಾಲಜೀಸ್‌ ಲಿಮಿಟೆಡ್ ಕಂಪನಿ ಸೇರಿದಂತೆ ಒಟ್ಟು ಐದು ಖಾಸಗಿ ಕಂ‍ಪನಿಗಳು ಸಲ್ಲಿಸಿದ್ದ ಎಸ್‌ಟಿಆರ್‌ಪಿ (ಮಾರಾಟ ತೆರಿಗೆ ಪುನರಾವಲೋಕನ ಅರ್ಜಿ) ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌.ದೀಕ್ಷಿತ್‌ ಮತ್ತು ಜಿ ಬಸವರಾಜ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.

ಅರ್ಜಿದಾರರ ಪರ ವಕೀಲರು “ಎಸ್‌ಟಿಬಿಯನ್ನು ಒಂದು ವಸ್ತು ಎಂದು ಪರಿಗಣಿಸಲು ಬರುವುದಿಲ್ಲ. ಕೇಬಲ್‌ ಟಿವಿ ಸಂಪರ್ಕ ಹೊಂದಲು ಬಯಸುವವರು ಎಸ್‌ಟಿಬಿಯನ್ನು ತೆಗೆದುಕೊಳ್ಳಬೇಕು. ಅದನ್ನು ಉಪಯೋಗಿಸಿಕೊಂಡು ಅವರು ಟಿ ವಿ ಚಾನೆಲ್‌ಗಳನ್ನು ವೀಕ್ಷಿಸುತ್ತಾರೆ. ನಾವು ಅದನ್ನು ಗ್ರಾಹಕರಿಗೆ ಮಾರಾಟ ಮಾಡುವುದಿಲ್ಲ. ಬರೀ ಸೇವೆ ಒದಗಿಸುತ್ತೇವೆ. ಹೀಗಾಗಿ, ರಾಜ್ಯ ಸರ್ಕಾರ ಇದಕ್ಕೆ ತೆರಿಗೆ ವಿಧಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ” ಎಂದಿದ್ದರು.

ಇದನ್ನು ಒಪ್ಪದ ಪೀಠವು “ನೀವು ಈ ಪ್ರಕ್ರಿಯೆಯನ್ನು ಏನೆಂದಾದರೂ ಕರೆಯಬಹುದು. ಆದರೆ, ಎಸ್‌ಟಿಬಿ ಕೊಡುವಾಗ ದುಡ್ಡು ಪಡೆಯುತ್ತೀರಿ. ಹೀಗಾಗಿ, ಅದು ಮಾರಾಟವೇ ಆಗುತ್ತದೆ. ಅಂದಮೇಲೆ, ರಾಜ್ಯ ಸರ್ಕಾರಕ್ಕೆ ಇದರ ಮೇಲೆ ತೆರಿಗೆ ವಿಧಿಸಲು ಸಂವಿಧಾನದಲ್ಲಿ ಮುಕ್ತ ಅವಕಾಶವಿದೆ” ಎಂದು ಹೇಳಿದೆ.

“ಭಾರ್ತಿ ಟೆಲಿಮೀಡಿಯಾ ವರ್ಸಸ್‌ ತ್ರಿಪುರಾ ಪ್ರಕರಣದಲ್ಲಿ ತ್ರಿಪುರಾ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಗಣನೆಗೆ ತೆಗೆದುಕೊಂಡಿರುವ ಪೀಠವು ನಮ್ಮ ಸಂವಿಧಾನಕ್ಕೆ ತರಲಾದ 46ನೇ ತಿದ್ದುಪಡಿಯ ಹಿನ್ನೆಲೆಯಲ್ಲಿ 363ನೇ (29)(ಎ) ವಿಧಿಯ ಅಡಿ ಮಾರಾಟ ತೆರಿಗೆ ಹಾಕಬೇಕಾದರೆ ಮಾರಾಟ ಮಾಡಿರಲೇಬೇಕೆಂಬುದು ಅಗತ್ಯ ಎನಿಸುವುದಿಲ್ಲ. ಆದರೆ, ವಸ್ತುವನ್ನು ಉಪಯೋಗಿಸುವಂತಹ ಹಕ್ಕನ್ನು ಗ್ರಾಹಕನಿಗೆ ಕೊಟ್ಟಿರಬೇಕು. ಕೊಟ್ಟಿದ್ದಕ್ಕೆ ಬೆಲೆ ನಿಗದಿಪಡಿಸಿರಬೇಕು. ಅಷ್ಟಾದರೆ, ಮಾರಾಟ ತೆರಿಗೆ ವಿಧಿಸಬಹುದು” ಎಂದು ಸ್ಪಷ್ಟಪಡಿಸಿದೆ.

ಒಂದೇ ವ್ಯವಹಾರಕ್ಕೆ ಹಲವು ಮುಖಗಳಿರುತ್ತವೆ ಎಂದು ವಿವರಿಸಿರುವ ಪೀಠವು “ಒಂದೊಂದು ಮುಖವೂ ಇನ್ನೊಂದರಿಂದ ಭಿನ್ನವಾಗಿರುತ್ತದೆ. ಹೀಗಾಗಿ, ಭಿನ್ನ–ಭಿನ್ನ ತೆರಿಗೆಗಳನ್ನು ಕೇಂದ್ರ–ರಾಜ್ಯ ಮಾರಾಟದ ಅಡಿಯಲ್ಲಿ ವಿಧಿಸಲಾಗಿರುತ್ತದೆ. ಒಂದೇ ವ್ಯವಹಾರದಲ್ಲಿ ಇವೆರಡೂ ಒಳಗೊಂಡಿರಲು ಸಾಧ್ಯ” ಎಂದು ಒತ್ತಿ ಹೇಳಿದೆ. ಅರ್ಜಿದಾರರ ಪರ ವಕೀಲ ವೈ ಸಿ ಶಿವಕುಮಾರ್ ಹಾಗೂ ರಾಜ್ಯ ಸರ್ಕಾರದ ಪರ ಆದಿತ್ಯ ವಿಕ್ರಮ ಭಟ್‌ ವಾದಿಸಿದ್ದರು.

2012–2013ನೇ ಸಾಲಿನ ತೆರಿಗೆ ವರ್ಷದ ಅವಧಿಗೆ, ವಾಣಿಜ್ಯ ತೆರಿಗೆ (ಲೆಕ್ಕಪರಿಶೋಧನೆ) 2.2, ಡಿವಿಒ (ಡಿವಿಷನಲ್‌ ವ್ಯಾಟ್‌ ಆಫೀಸ್‌–ವಿಭಾಗೀಯ ಸ್ವಮೌಲ್ಯ ತೆರಿಗೆ)–2 ಉಪ ಆಯುಕ್ತರು 2018ರ ಏಪ್ರಿಲ್‌ 5ರಂದು ಎಸ್‌ಟಿಬಿಗಳ ಮೇಲೆ ಮಾರಾಟ ತೆರಿಗೆ ವಿಧಿಸಿ ಆದೇಶಿಸಿದ್ದರು. ಅರ್ಜಿದಾರ ಕಂಪನಿಗಳು ಈ ಆದೇಶವನ್ನು ಬೆಂಗಳೂರಿನಲ್ಲಿರುವ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿದ್ದವು. ಈ ಅರ್ಜಿಯನ್ನು ನ್ಯಾಯಮಂಡಳಿ, 2024ರ ಮೇ 6ರಂದು ವಜಾಗೊಳಿಸಿತ್ತು. ನ್ಯಾಯಮಂಡಳಿಯ ಈ ಆದೇಶದ ವಿರುದ್ಧ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Kannada Bar & Bench
kannada.barandbench.com