ಪಂಜಾಬ್ ಬಜೆಟ್ ಅಧಿವೇಶನ ಮಾರ್ಚ್ 3ಕ್ಕೆ: ಸುಪ್ರೀಂ ಕೋರ್ಟ್‌ಗೆ ರಾಜ್ಯಪಾಲರ ಮಾಹಿತಿ

ಸಚಿವ ಸಂಪುಟ ನೀಡುವ ನೆರವು ಮತ್ತು ಸಲಹೆಗೆ ರಾಜ್ಯಪಾಲರು ಬದ್ಧರಾಗಿರಬೇಕಿರುವುದರಿಂದ ಬಜೆಟ್ ಅಧಿವೇಶನ ಕರೆಯುವ ಕುರಿತು ಕಾನೂನು ಸಲಹೆ ಪಡೆಯುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
Bhagwant Mann, Banwarilal Purohit and Supreme court
Bhagwant Mann, Banwarilal Purohit and Supreme courtFacebook, Wikipedia

ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಮಾರ್ಚ್ 3ರಂದು ಬೆಳಿಗ್ಗೆ 10 ಗಂಟೆಗೆ ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ಕರೆದಿದ್ದಾರೆ ಎಂದು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಲಾಗಿದೆ.

ಮಾರ್ಚ್ 3ರಂದು ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನ ಕರೆಯಲು ರಾಜ್ಯಪಾಲರು ನಿರಾಕರಿಸಿದ ಹಿನ್ನೆಲೆಯಲ್ಲಿ ಪಂಜಾಬ್‌ ಆಮ್‌ ಆದ್ಮಿ ಪಕ್ಷದ (ಎಎಪಿ) ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ವಿಚಾರಣೆ ನಡೆಸುವ ವೇಳೆ ಈ ವಿಚಾರ ತಿಳಿಸಲಾಯಿತು.

ಬಜೆಟ್ ಅಧಿವೇಶನವನ್ನು ಆರಂಭಿಸಲು ನಿರಾಕರಿಸಿದ್ದನ್ನು ಸಮರ್ಥಿಸಿಕೊಂಡ ರಾಜ್ಯಪಾಲರ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಬರೆದು ಬಳಿಕ ಟ್ವೀಟ್‌ ಮಾಡಿದ ಅವಹೇಳನಕಾರಿ ಪತ್ರದ ಕುರಿತು ಕಾನೂನು ಸಲಹೆ ಪಡೆಯುವ ಅಗತ್ಯವಿತ್ತು ಎಂದು ಉಲ್ಲೇಖಿಸಿದರು.

ವಿಚಾರಣೆ ವೇಳೆ ಸಿಜೆಐ ಅವರು, ಸಾಂವಿಧಾನಿಕ ಹುದ್ದೆಯಲ್ಲಿರುವವರು ಹೆಚ್ಚು ಘನತೆಯಿಂದ ಮಾತುಕತೆಯಲ್ಲಿ ತೊಡಗಬೇಕಾದ ಅಗತ್ಯದ ಬಗ್ಗೆ ಸಲಹೆ ನೀಡಿದರು. “ಸಾಂವಿಧಾನಿಕ ಹುದ್ದೆಯಲ್ಲಿರುವವರ ನಡುವೆ ಸಾಂವಿಧಾನಿಕವಾದ ಸಂವಾದ ಇರಬೇಕು. ನೀವು ಯಾರು ಅಥವಾ ಕೇಂದ್ರವು ನಿಮ್ಮನ್ನು ಹೇಗೆ ಆಯ್ಕೆ ಮಾಡುತ್ತದೆ ಎಂಬಂತಹ ಹೇಳಿಕೆಗಳು ಇರಬಾರದು. ಟ್ವೀಟ್ ಅಸಮರ್ಪಕವಾಗಿದ್ದರೂ, ವಿಧಾನಸಭೆ ಅಧಿವೇಶನವನ್ನು ವಿಳಂಬ ಮಾಡುವಂತಿಲ್ಲ” ಎಂದು ತಿಳಿಸಿದರು.

ಸಚಿವ ಸಂಪುಟ ನೀಡುವ ನೆರವು ಮತ್ತು ಸಲಹೆಗೆ ರಾಜ್ಯಪಾಲರು ಬದ್ಧರಾಗಿರಬೇಕಿರುವುದರಿಂದ ಬಜೆಟ್‌ ಅಧಿವೇಶನ ಕರೆಯುವ ಕುರಿತು ಕಾನೂನು ಸಲಹೆ ಪಡೆಯುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಅಲ್ಲದೆ ಮುಖ್ಯಮಂತ್ರಿ ಅವರು ತಮ್ಮ ಪತ್ರದಲ್ಲಿ ಅನುಚಿತ ಭಾಷೆ ಬಳಸಿರುವುದಕ್ಕೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

“ಮುಖ್ಯಮಂತ್ರಿಯವರು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಅವರಿಂದ ಮಾಹಿತಿ ಪಡೆಯುವ ಹಕ್ಕು ರಾಜ್ಯಪಾಲರಿಗೆ ಇದ್ದು ಹಾಗೆ ಮಾಹಿತಿ ಕೇಳಿದಾಗ ಸಿಎಂ ಅದನ್ನು ನೀಡಲು ಬದ್ಧರಾಗಿರಬೇಕು. ಸಿಎಂ ಪತ್ರದಲ್ಲಿರುವ ಧ್ವನಿ ಮತ್ತು ಧೋರಣೆ ಹಾಗೂ ಅವರ ಟ್ವೀಟ್‌ ಗಮನಿಸಿದರೆ ಅವರಿಂದ ಹೆಚ್ಚಿನದನ್ನು ಇನ್ನೂ ನಿರೀಕ್ಷಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಸಿಎಂ ಅವರ ವರ್ತನೆಯ ಬಗ್ಗೆ ನಯವಾಗಿ ಚಾಟಿ ಬೀಸಿತು.

ಇಂದು ಬೆಳಿಗ್ಗೆ ಪ್ರಕರಣವನ್ನು ಸಿಜೆಐ ಅವರೆದುರು ಪ್ರಸ್ತಾಪಿಸಿದಾಗ ಮಧ್ಯಾಹ್ನ 3.50ಕ್ಕೆ ವಿಚಾರಣೆ ನಡೆಸುವುದಾಗಿ ಅವರು ತಿಳಿಸಿದ್ದರು. ಪಂಜಾಬ್‌ ಸರ್ಕಾರದ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ರಾಜ್ಯಪಾಲರ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದ ಮಂಡಿಸಿದರು.

Related Stories

No stories found.
Kannada Bar & Bench
kannada.barandbench.com