ಬಹುಚರ್ಚಿತ ಮತಾಂತರ ನಿಷೇಧಿಸುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಸುಗ್ರೀವಾಜ್ಞೆ - 2022ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಹಿ ಹಾಕಿದ್ದು, ಇಂದಿನಿಂದಲೇ ಸುಗ್ರೀವಾಜ್ಞೆ ಜಾರಿಗೆ ಬಂದಿದೆ.
ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶ ಇಲ್ಲದಿರುವುದರಿಂದ ಶೀಘ್ರ ಕ್ರಮ ತೆಗೆದುಕೊಳ್ಳುವ ವಿದ್ಯಮಾನಗಳು ಉಂಟಾಗಿವೆ ಎಂಬುದು ರಾಜ್ಯಪಾಲರಿಗೆ ಮನದಟ್ಟಾಗಿದೆ. ಹೀಗಾಗಿ ಸಂವಿಧಾನದ 213ನೇ ವಿಧಿಯ 1ನೇ ಕಲಂನಲ್ಲಿ ದೊರೆತಿರುವ ಅಧಿಕಾರ ಬಳಸಿ ರಾಜ್ಯಪಾಲರು ಸುಗ್ರೀವಾಜ್ಞೆ ಹೊರಡಿಸಿದ್ದಾರೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣೆಗಾಗಿ ಮತ್ತು ತಪ್ಪು ನಿರೂಪಣೆ, ಬಲವಂತ, ಅನುಚಿತ ಪ್ರಭಾವ, ಒತ್ತಾಯ, ಆಮಿಷದ ಮೂಲಕ ಅಥವಾ ಯಾವುದೇ ವಂಚನೆಯ ವಿಧಾನಗಳ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಕಾನೂನುಬಾಹಿರವಾಗಿ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ.
ಯಾವುದೇ ವ್ಯಕ್ತಿ ಮತಾಂತರಗೊಳ್ಳಲು ಬಯಸಿದಲ್ಲಿ ಕನಿಷ್ಠ ಮೂವತ್ತು ದಿನಗಳಿಗೆ ಮುಂಚಿತವಾಗಿ ತನ್ನ ಜಿಲ್ಲೆಯ ಅಥವಾ ಜನ್ಮ ಸ್ಥಳದ ಜಿಲ್ಲಾ ದಂಡಾಧಿಕಾರಿ ಅಥವಾ ಜಿಲ್ಲಾ ಅಪರ ದಂಡಾಧಿಕಾರಿ ಅವರಿಗೆ ಮಾಹಿತಿ ನೀಡಬೇಕು. ಇದನ್ನು ಆಧರಿಸಿ ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.
ಈ ಸುಗ್ರೀವಾಜ್ಞೆಯ ಅಡಿ ಎಸಗಲಾಗುವ ಪ್ರತಿಯೊಂದು ಅಪರಾಧವು ಸಂಜ್ಞೇಯವಾಗಿದ್ದು, ಜಾಮೀನುರಹಿತ ಅಪರಾಧವಾಗಿರುತ್ತದೆ. ಮತಾಂತರಕ್ಕೆ ಪ್ರಚೋದನೆ ನೀಡುವವರಿಗೆ ಗರಿಷ್ಠ ಹತ್ತು ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸುವುದಕ್ಕೆ ಸುಗ್ರೀವಾಜ್ಞೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮತಾಂತರ ನಿಷೇಧಿಸುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ - 2021ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿತ್ತು. ಕಾಂಗ್ರೆಸ್ ಜೆಡಿಎಸ್ ಸೇರಿದಂತೆ ವಿರೋಧಪಕ್ಷಗಳ ಪ್ರತಿರೋಧದದ ನಡುವೆಯೇ ಮಸೂದೆಗೆ ಧ್ವನಿ ಮತದ ಮೂಲಕ ಅಂಗೀಕಾರ ನೀಡಲಾಗಿತ್ತು. ಆದರೆ, ವಿಧಾನ ಪರಿಷತ್‌ನಲ್ಲಿ ಮಸೂದೆ ಮಂಡಿಸುವುದಕ್ಕೆ ಅವಕಾಶವಾಗಿರಲಿಲ್ಲ.
ವಿಧಾನಸಭೆಯಲ್ಲಿ ಅಂಗೀಕರಿಸಿರುವ ಸ್ವರೂಪದಲ್ಲೇ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೊಳಿಸಲು ಮೇ 12ರಂದು ನಡೆದಿದ್ದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಇದರಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯು ರಾಜಭವನಕ್ಕೆ ರವಾನಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ.