
ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಸುಗ್ರೀವಾಜ್ಞೆ 2025ಕ್ಕೆ ರಾಜ್ಯಪಾಲರು ಇಂದು ಅಂಕಿತ ಹಾಕಿದ್ದು, ರಾಜ್ಯ ಸರ್ಕಾರವು ಇದನ್ನು ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಇದರೊಂದಿಗೆ ರಾಜ್ಯ ಸರ್ಕಾರ ಮತ್ತು ಮೈಸೂರು ರಾಜಮನೆತನದ ನಡುವಿನ ಹೋರಾಟ ಮತ್ತೊಂದು ಮಜಲಿಗೆ ಹೊರಳಿದೆ.
ಸಾರ್ವಜನಿಕ ಉದ್ದೇಶಕ್ಕಾಗಿ ಬೆಂಗಳೂರು ಅರಮನೆಯ ಯಾವುದೇ ಭಾಗವನ್ನು ಬಳಕೆ ಮಾಡುವ ಮತ್ತು ಅದನ್ನು ನಿಯಂತ್ರಣಕ್ಕೆ ಪಡೆಯುವ ಅಧಿಕಾರವು ಸುಗ್ರೀವಾಜ್ಞೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಾಪ್ತವಾಗಲಿದೆ.
ಅರಮನೆ ಮೈದಾನದಲ್ಲಿ ರಸ್ತೆ ಅಗಲೀಕರಣ ಉದ್ದೇಶಕ್ಕೆ ಟಿಡಿಆರ್ ನೀಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಾಡಿರುವ ಆದೇಶ ಜಾರಿಗೊಳಿಸಿದಲ್ಲಿ ಸರ್ಕಾರಕ್ಕೆ ಸುಮಾರು 3,011 ಕೋಟಿ ರೂಪಾಯಿ ಹೊರೆ ಬೀಳಲಿದ್ದು, ಅದರಿಂದ ಪಾರಾಗಲು ಸುಗ್ರೀವಾಜ್ಞೆ ಮೊರೆ ಹೋಗಲಾಗಿದೆ.
ಸುಗ್ರೀವಾಜ್ಞೆಯ ಮೂಲಕ ಅರಮನೆ ಮೈದಾನ ಟಿಡಿಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ವರ್ಗದ ವಿರುದ್ಧ ಯಾರೂ ಸಿವಿಲ್, ಕ್ರಿಮಿನಲ್ ದಾವೆ ಹೂಡಲು ಅವಕಾಶ ಇರದಂತೆ ಮಾಡಲಾಗಿದೆ. ಟಿಡಿಆರ್ ವಿಚಾರದಲ್ಲಿ ಯಾವುದೇ ನ್ಯಾಯಾಲಯವು ತೀರ್ಪು ಅಥವಾ ಆದೇಶ ಬಂದರೂ ಅಥವಾ ರಾಜ್ಯ ಸರ್ಕಾರವು ಈ ಹಿಂದೆ ತೆಗೆದುಕೊಂಡ ಯಾವುದೇ ತೀರ್ಮಾನದಲ್ಲಿ ಏನೇ ಇದ್ದರೂ ಸರ್ಕಾರವು 1ನೇ ಉಪ ಪ್ರಕರಣದಲ್ಲಿನ ಯಾವುದೇ ಮೂಲ ಸೌಕರ್ಯ ಯೋಜನೆಗೆ ಸಂಪೂರ್ಣ ಅಥವಾ ಭಾಗಶಃ ಮುಂದುವರಿಯದಿರಯಲು ಅಧಿಕಾರ ಇರಲಿದೆ ಎಂದು ಸುಗ್ರೀವಾಜ್ಞೆಯಲ್ಲಿ ವಿವರಿಸಲಾಗಿದೆ.
ಬೆಂಗಳೂರು ಅರಮನೆಯ ಒಟ್ಟಾರೆ ವ್ಯಾಪ್ತಿಯ 427 ಎಕರೆ ಮತ್ತು 16 ಗುಂಟೆಗಳ ಒಟ್ಟು ಮೌಲ್ಯವನ್ನು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ 1996ರ 8 & 9ನೇ ಪ್ರಕರಣಗಳ ಅನುಸಾರ 11 ಕೋಟಿ ರೂಪಾಯಿ ಎಂದು ನಿರ್ಧರಿಸಲಾಗಿದೆ. ಕಾಯಿದೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಇನ್ನೂ ಸುಪ್ರೀಂ ಕೋರ್ಟ್ ಕಾಯಿದೆಗೆ ಯಾವುದೇ ತಡೆಯಾಜ್ಞೆ ನೀಡಿಲ್ಲ ಎಂದು ಸುಗ್ರೀವಾಜ್ಞೆಯಲ್ಲಿ ವಿವರಿಸಲಾಗಿದೆ.