ಮೈಕ್ರೋಫೈನಾನ್ಸ್‌: ಸುಗ್ರೀವಾಜ್ಞೆಗೆ ಸಹಿ ಹಾಕದಿರಲು ರಾಜ್ಯಪಾಲರು ನೀಡಿದ ಕಾರಣಗಳೇನು?

ಮುಂದಿನ ತಿಂಗಳು ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ಆತುರದಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸುವ ಬದಲು ವಿಸ್ತೃತವಾಗಿ ಚರ್ಚಿಸಿ ಪರಿಣಾಮಕಾರಿಯಾದ ಕಾನೂನು ಜಾರಿಗೊಳಿಸಬೇಕು ಎಂದು ಸಲಹೆ ನೀಡಿರುವ ರಾಜ್ಯಪಾಲರು.
Governor Thawar Chand Gehlot and CM Siddaramaiah
Governor Thawar Chand Gehlot and CM Siddaramaiah
Published on

ಫೈನಾನ್ಸ್‌ ಸಂಸ್ಥೆಗಳ ಕಿರುಕುಳ ತಪ್ಪಿಸಲು ರಾಜ್ಯ ಸರ್ಕಾರವು ರೂಪಿಸಿರುವ ಕರ್ನಾಟಕ ಅತಿಸಣ್ಣ ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ನಿಷೇಧ) ಸುಗ್ರೀವಾಜ್ಞೆ 2025ಕ್ಕೆ ಸಹಿ ಹಾಕಲು ಶುಕ್ರವಾರ ನಿರಾಕರಿಸಿರುವ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಸಂಬಂಧಿತ ಕಡತವನ್ನು ರಾಜ್ಯ ಸರ್ಕಾರಕ್ಕೆ ಮರಳಿಸಿದ್ದಾರೆ.

ನಿರ್ದಿಷ್ಟ ಪ್ರಕರಣಗಳನ್ನು ತಪ್ಪಿಸಲು ಸುಗ್ರೀವಾಜ್ಞೆಯು ಎಷ್ಟು ಸಮರ್ಥವಾಗಿದೆ ಎಂದು ಸಾಬೀತುಪಡಿಸಲು ಅಗತ್ಯವಾದ ಅಂಕಿಸಂಖ್ಯೆಗಳನ್ನು ಒಳಗೊಂಡ ಸಲಹೆ ಅಥವಾ ಕಾನೂನು ಸಲಹೆ ಅಥವಾ ವಿವರಣೆಯನ್ನು ನೀಡಲಾಗಿಲ್ಲ. ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸುಗ್ರೀವಾಜ್ಞೆಯು ಸಾಲ ಪಡೆಯುವವರಿಗೆ ಅನುಕೂಲಕರವಾಗಿದ್ದು, ಸಾಲದಾತರಿಗೆ ಇದು ಸಮಸ್ಯೆ ಮಾಡುತ್ತದೆ. ಇದನ್ನು ಶಾಸನಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಬೇಕಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ಅಲ್ಲದೇ, ಮುಂದಿನ ತಿಂಗಳಲ್ಲಿ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ಆತುರದಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸುವ ಬದಲು ವಿಸ್ತೃತವಾಗಿ ಚರ್ಚಿಸಿ, ಬಾಧಿತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅವರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಕಾನೂನು ಜಾರಿಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರು ಸಲಹೆ ನೀಡಿದ್ದಾರೆ.

ತುಳಿತಕ್ಕೊಳಗಾಗಿರುವವರನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅದೇ ರೀತಿ ಮತ್ತೊಂದು ಕಡೆ ಹಾಲಿ ಚಾಲ್ತಿಯಲ್ಲಿರುವ ಕಾನೂನಿನ ಅಡಿ ಅಗತ್ಯವಿರುವವರಿಗೆ ಸಾಲ ನೀಡಿರುವವರ ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸುವುದೂ ಅಗತ್ಯವಾಗಿದೆ. ಕಾನೂನುಬದ್ಧವಾಗಿ ನೀಡಿರುವ ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡಿದರೆ ನ್ಯಾಯಯುತ ಸಾಲದಾರಿಗೆ ಸಮಸ್ಯೆಯಾಗಲಿದೆ. ತಾವು ನೀಡಿರುವ ಸಾಲದ ಮೊತ್ತವನ್ನು ವಸೂಲಿ ಮಾಡಲು ಅವರಿಗೆ ಕಾನೂನು ಹೋರಾಟ ಬಿಟ್ಟು ಬೇರಾವುದೇ ದಾರಿ ಇರುವುದಿಲ್ಲ. ಎಲ್ಲರಿಗೂ ತಮ್ಮ ಹಕ್ಕು ಮತ್ತು ಕಾನೂನಿನ ನೆರವು ಪಡೆಯುವ ಹಕ್ಕುಗಳಿವೆ. ಇದನ್ನು ನಿಷೇಧಿಸುವುದು ಸಂವಿಧಾನದ 19 ಮತ್ತು 32ನೇ ವಿಧಿಯಡಿ ದೊರೆತಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.

ಸುಗ್ರೀವಾಜ್ಞೆಯ ಸೆಕ್ಷನ್‌ 8ರ ಅನ್ವಯ ಗರಿಷ್ಠ 10 ವರ್ಷ ಶಿಕ್ಷೆ ಮತ್ತು ₹5 ಲಕ್ಷ ದಂಡ ವಿಧಿಸಲು ಅವಕಾಶವಿದ್ದು, ಇದು ಜಾಮೀನುರಹಿತ ಅಪರಾಧವಾಗಲಿದೆ ಎಂದು ಹೇಳಲಾಗಿದೆ. ₹3 ಲಕ್ಷ ಗರಿಷ್ಠ ಸಾಲ ನೀಡಲು ಅವಕಾಶವಿದ್ದು, ಅದಕ್ಕೆ ₹5 ಲಕ್ಷ ದಂಡ ವಿಧಿಸುವ ಪ್ರಸ್ತಾವವೇ ಸ್ವಾಭಾವಿಕ ನ್ಯಾಯತತ್ವಕ್ಕೆ ವಿರುದ್ಧವಾದ ಕ್ರಮವಾಗಿದೆ ಎಂದು ಹೇಳಿದ್ದಾರೆ.

ಸಾಲದಾತ ಸಂಸ್ಥೆಗಳು ಸಾಲ ಪಡೆಯುವವರಿಂದ ಯಾವುದೇ ಭದ್ರತೆ ಕೇಳುವಂತಿಲ್ಲ ಮತ್ತು ಈಗಾಗಲೇ ನೀಡಿರುವ ಎಲ್ಲಾ ಭದ್ರತೆಗಳನ್ನು ಹಿಂದಿರುಗಿಸುವ ಪ್ರಸ್ತಾವವನ್ನು ಸುಗ್ರೀವಾಜ್ಞೆಯಲ್ಲಿ ಮಾಡಲಾಗಿದೆ. ಇದು ಸರ್ಕಾರಿ ಬ್ಯಾಂಕ್‌ಗಳು ಪಾಲಿಸುತ್ತಿರುವ ಸಾಲ ನೀಡುವ ತತ್ವಕ್ಕೆ ವಿರುದ್ಧವಾಗಿದೆ. ಇದು ದೀರ್ಘಾವಧಿಯಲ್ಲಿ ಉದ್ಯಮಕ್ಕೆ ಹೊಡೆತ ನೀಡಲಿದ್ದು, ಪ್ರಸ್ತಾಪಿತ ನಿಬಂಧನೆಯು ನಂಬಿಕೆಯನ್ನು ನಾಶಪಡಿಸುವುದರಿಂದ ಗ್ರಾಮೀಣ ಮತ್ತು ಬ್ಯಾಂಕ್‌ಗಳಿಲ್ಲದ ಪ್ರದೇಶದಲ್ಲಿ ಸಣ್ಣಪುಟ್ಟ ಸಾಲ ಪಡೆಯುವವರಿಗೆ ಹಾನಿ ಮಾಡಲಿದೆ ಎಂದೂ ಹೇಳಿದ್ದಾರೆ.

ಇದಲ್ಲದೇ ಪ್ರಸ್ತಾಪಿತ ಸುಗ್ರೀವಾಜ್ಞೆಯು ರಾಜ್ಯದ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದ್ದು, ಸಮಾಜದ ಕೆಳಸ್ತರದ ಜನರನ್ನು ಮೇಲೆತ್ತಲು ಕೆಲಸ ಮಾಡುತ್ತಿರುವ ಸ್ವಸಹಾಯ ಸಂಘಗಳಿಗೆ ಸಮಸ್ಯೆ ಮಾಡಲಿದೆ. ಇದು ಸಂವಿಧಾನದ 19ನೇ ವಿಧಿಯ ಉಲ್ಲಂಘನೆಗೂ ಕಾರಣವಾಗಬಹುದು.

ಆರ್‌ಬಿಐನಲ್ಲಿ ನೋಂದಣಿ ಮಾಡಿಸಿರುವ ಬ್ಯಾಂಕಿಂಗ್‌ ಅಥವಾ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ. ಹೀಗಾಗಿ, ಬಹುತೇಕ ಸಾಲದಾತ ಸಂಸ್ಥೆಗಳು ಹೊರಗುಳಿಯಲಿದ್ದು, ಇದು ನೋಂದಣಿಯಾಗದ ಮತ್ತು ಪರವಾನಗಿ ಪಡೆಯದ ಸಾಲದಾನ ಏಜೆನ್ಸಿಗಳಿಗೆ ಮಾತ್ರ ಅನ್ವಯಿಸಲಿದೆ ಎಂದು ತಿಳಿಸಿದ್ದಾರೆ.

ಸಾಲ ವಸೂಲಿ ಮಾಡಲು ಬಲವಂತದ ಕ್ರಮಕೈಗೊಳ್ಳುವವರು ಮತ್ತು ಅಕ್ರಮವಾಗಿ ನಡೆದುಕೊಳ್ಳುವವರ ವಿರುದ್ಧ ಕ್ರಮಕೈಗೊಳ್ಳಲು ಕರ್ನಾಟಕ ಸಾಲದಾತರ ಕಾಯಿದೆ, ವರ್ಗಾವಣೀಯ ಲಿಖಿತಗಳ ಕಾಯಿದೆ, ಕರ್ನಾಟಕ ಸಾಲ ಪರಿಹಾರ ಕಾಯಿದೆ, ಭಾರತೀಯ ದಂಡ ಸಂಹಿತೆ ಮತ್ತು ಕರ್ನಾಟಕ ಪೊಲೀಸ್‌ ಕಾಯಿದೆಗಳು ಈಗಾಗಲೇ ಜಾರಿಯಲ್ಲಿದ್ದು, ಅವುಗಳನ್ನು ಸರಿಯಾದ ರೀತಿಯಲ್ಲಿ ಜಾರಿಗೊಳಿಸದಿರುವುದು ಇಂಥ ಸಮಸ್ಯೆಗಳಿಗೆ ನಾಂದಿಯಾಗಿದೆ. ಸಂಬಂಧಿತ ಕಾನೂನುಗಳನ್ನು ಜಾರಿಗೊಳಿಸಬೇಕಾದ ಸಕ್ಷಮ ಇಲಾಖೆಗಳು ಸಮರ್ಥವಾಗಿ ಕಾರ್ಯನಿರ್ವಹಿಸಿದರೆ ಈ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ ಎಂದು ಹೇಳಿದ್ದಾರೆ.

Attachment
PDF
Micro Finanace Ordinance
Preview
Kannada Bar & Bench
kannada.barandbench.com