ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿ; ವಿಶೇಷ ರಾಜ್ಯಪತ್ರ ಪ್ರಕಟಿಸಿದ ಸರ್ಕಾರ

ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕುರಿತಾದ ತಿದ್ದುಪಡಿ ಮಸೂದೆಗೆ ಆರು ತಿಂಗಳ ಒಳಗೆ ವಿಧಾನ ಮಂಡಲದಲ್ಲಿ ಒಪ್ಪಿಗೆ ಪಡೆಯಬೇಕು. ನಂತರ ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಿದೆ.
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿ; ವಿಶೇಷ ರಾಜ್ಯಪತ್ರ ಪ್ರಕಟಿಸಿದ ಸರ್ಕಾರ

ಬಹುಚರ್ಚಿತ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಸುಗ್ರೀವಾಜ್ಞೆ 2022ಕ್ಕೆ ಭಾನುವಾರ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಅಂಕಿತ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯವು ವಿಶೇಷ ರಾಜ್ಯಪತ್ರ ಪ್ರಕಟಿಸಿದೆ. ಪರಿಶಿಷ್ಟ ಜಾತಿಗೆ ಹಾಲಿ ಇರುವ ಮೀಸಲಾತಿಯನ್ನು ಶೇ. 15ರಿಂದ ಶೇ. 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಹಾಲಿ ಇರುವ ಶೇ. 3ರಿಂದ ಶೇ. 7ಕ್ಕೆ ಹೆಚ್ಚಳವನ್ನು ಸುಗ್ರೀವಾಜ್ಞೆ ಒಳಗೊಂಡಿದೆ.

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವು ಸರ್ಕಾರದ ಅಥವಾ ಅನುದಾನಿತ ಶಾಲೆ, ಕಾಲೇಜು ಅಥವಾ ಇತರೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಅವಕಾಶ ಅನ್ವಯಸಲಿದೆ. ಸರ್ಕಾರ, ವಿಧಾನ ಮಂಡಲ, ಯಾವುದೇ ಸ್ಥಳೀಯ ಪ್ರಾಧಿಕಾರ ಅಥವಾ ಸರ್ಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಯಾವುದೇ ನಿಗಮ ಅಥವಾ ಕಂಪೆನಿ, ಕರ್ನಾಟಕ ಸಹಕಾರ ಸಂಘಗಳ ಕಾಯಿದೆ ಅಡಿ ನೋಂದಣಿಯಾದ ಸಹಕಾರ ಸಂಘಗಳು, ಸರ್ಕಾರಿ ಅಥವಾ ಅನುದಾನಿತ ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ ಕಂಪೆನಿ, ಸ್ಥಳೀಯ ಪ್ರಾಧಿಕಾರ, ಸರ್ಕಾರದ ಒಡೆತನ ಅಥವಾ ನಿಯಂತ್ರಣದಲ್ಲಿರುವ ಸ್ವಾಯತ್ತ ಸಂಸ್ಥೆಗಳಲ್ಲಿ ನೇಮಕಾತಿ ಮತ್ತು ಹುದ್ದೆಗಳಿಗೆ ಅನ್ವಯಸಲಿದೆ.

ನೇಮಕಾತಿ ಅಥವಾ ಹುದ್ದೆಗಳಿಗೆ ಸ್ವಂತ ಅರ್ಹತೆಯ ಆಧಾರದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದವರು ಆಯ್ಕೆಯಾಗಿದ್ದರೆ ಅಂಥವರನ್ನು ಮೀಸಲಾತಿ ಅಡಿಯಲ್ಲಿ ಪರಿಗಣಿಸುವಂತಿಲ್ಲ. ಆ ಮೂಲಕ, ಮೀಸಲಿರಿಸಿದ ಸಂಸ್ಥೆಗೆ ಯಾವುದೇ ರೀತಿಯ ಬಾಧಕ ಉಂಟಾಗುವಂತಿಲ್ಲ ಎಂದು ಸುಗ್ರೀವಾಜ್ಞೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌ ಎನ್‌ ನಾಗಮೋಹನ್‌ ದಾಸ್‌ ಅವರ ನೇತೃತ್ವದ ಆಯೋಗ ಮತ್ತು ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಬಿ ಆಡಿ ನೇತೃತ್ವದ ಸಮಿತಿ ಸಲ್ಲಿಸಿರುವ ಶಿಫಾರಸ್ಸು ಆಧರಿಸಿ ಮೀಸಲಾತಿ ಹೆಚ್ಚಿಸಲು ಅಕ್ಟೋಬರ್ 8ರಂದು ನಡೆದಿದ್ದ ಸಂಪುಟ ಸಭೆಯಲ್ಲಿ ಸರ್ಕಾರ ನಿರ್ಧರಿಸಿತ್ತು. ಇದಕ್ಕೂ ಮುನ್ನ, ಸರ್ವಪಕ್ಷಗಳ ಮುಖಂಡರ ಸಭೆಯಲ್ಲಿ ಒಮ್ಮತ ನಿರ್ಧಾರ ಕೈಗೊಳ್ಳಲಾಗಿತ್ತು.

ಕೇವಲ ಸರ್ಕಾರಿ ಆದೇಶದ ಮೂಲಕ ಮೀಸಲಾತಿ ಹೆಚ್ಚಿಸಿದರೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಬಹುದು. ಇದಕ್ಕಾಗಿ ಮಸೂದೆ ರೂಪಿಸಿ, ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಬೇಕು. ಬಳಿಕ ಸುಗ್ರೀವಾಜ್ಞೆ ಮೂಲಕ ಅದನ್ನು ಜಾರಿಗೊಳಿಸಬೇಕು. ಆರು ತಿಂಗಳ ಒಳಗೆ ತಿದ್ದುಪಡಿ ಮಸೂದೆಗೆ ವಿಧಾನ ಮಂಡಲದಲ್ಲಿ ಒಪ್ಪಿಗೆ ಪಡೆಯಬೇಕು. ನಂತರ ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂಬ ಸಲಹೆಯನ್ನು ನಾಗಮೋಹನ್‌ ದಾಸ್‌ ಅವರು ನೀಡಿದ್ದರು. ಅದರ ಅನ್ವಯ ಸುಗ್ರೀವಾಜ್ಞೆ ಹೊರಡಿಸಲಾಗಿದೆ.

Also Read
ಪರಿಶಿಷ್ಟರು, ಹಿಂದುಳಿದ ವರ್ಗದ ಹಕ್ಕುಗಳನ್ನು ಇಡಬ್ಲ್ಯೂಎಸ್ ಮೀಸಲಾತಿ ಕಸಿಯದು: ಸುಪ್ರೀಂನಲ್ಲಿ ಎಜಿ ಪ್ರತಿಪಾದನೆ

ಈಗ ಹಿಂದುಳಿದ ವರ್ಗಗಳಿಗೆ ಶೇ. 32, ಪರಿಶಿಷ್ಟ ಜಾತಿಗೆ ಶೇ. 15 ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. 3ರಷ್ಟು ಮೀಸಲಾತಿ ಇದೆ. ಹಾಲಿ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಒಟ್ಟಾರೆ ಶೇ.6ರಷ್ಟು ಮೀಸಲಾತಿ ಹೆಚ್ಚಿಸಲಾಗಿದೆ. ಸುಪ್ರೀಂ ಕೋರ್ಟ್‌ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣ ಶೇ. 50ರಷ್ಟು ಮೀರುವಂತಿಲ್ಲ ಎಂದು ತೀರ್ಪು ನೀಡಿದೆ. ಈಗ ಮೀಸಲಾತಿ ಪ್ರಮಾಣ ಹೆಚ್ಚಳವಾಗಿರುವುದರಿಂದ ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರ್ಕರಕ್ಕೆ ಮೊರ ಇಡಬೇಕಿದೆ. ತಮಿಳುನಾಡಿನಲ್ಲಿ ಶೇ. 69ರಷ್ಟು ಮೀಸಲಾತಿ ಕಲ್ಪಿಸಲಾಗಿದ್ದು, ಇಲ್ಲಿಯೂ ಸಂವಿಧಾನದಲ್ಲಿ ರಕ್ಷಣೆ ಒದಗಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ (ಇಡಬ್ಲುಎಸ್‌) ಕೇಂದ್ರ ಸರ್ಕಾರವು ಶೇ. 10ರಷ್ಟು ಮೀಸಲಾತಿ ಕಲ್ಪಿಸಿರುವ ವಿಚಾರವು ಸುಪ್ರೀಂ ಕೋರ್ಟ್‌ನಲ್ಲಿ ಸಾಂವಿಧಾನಿಕ ಪೀಠದ ಪರಿಶೀಲನೆಗೆ ಒಳಪಟ್ಟಿದೆ.

Related Stories

No stories found.
Kannada Bar & Bench
kannada.barandbench.com