ರಾಜ್ಯಪಾಲರು ರಾಜ್ಯದ ಸಾಂಕೇತಿಕ ಮುಖ್ಯಸ್ಥರೇ ವಿನಾ ಅವರು ಶಾಸನಸಭೆಯ ಶಾಸನ ರೂಪಿಸುವ ಅಧಿಕಾರಕ್ಕೆ ಅಡ್ಡಿಪಡಿಸಲಾಗದು ಎಂದು ಈಚೆಗೆ ಸುಪ್ರೀಂ ಕೋರ್ಟ್ ಹೇಳಿದೆ [ಪಂಜಾಬ್ ರಾಜ್ಯ ವರ್ಸಸ್ ಪಂಜಾಬ್ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ].
2023ರ ಜೂನ್ 19, 20 ಮತ್ತು ಅಕ್ಟೋಬರ್ 20ರಂದು ನಡೆಸಲಾಗಿರುವ ಪಂಜಾಬ್ ವಿಧಾನಸಭೆ ಅಧಿವೇಶನದ ಸಿಂಧುತ್ವ ಅನುಮಾನಿಸಲು ಯಾವುದೇ ಸಾಂವಿಧಾನಿಕ ಆಧಾರ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.
“ವಿಧಾನಸಭೆಯ ಅಧಿವೇಶನದ ಸಿಂಧುತ್ವ ಅನುಮಾನಿಸುವ ಸಾಂವಿಧಾನಿಕ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಹೀಗಾಗಿ, ಸಾಂವಿಧಾನಿಕವಾಗಿ ಸಿಂಧುವಾಗಿರುವ 2023ರ ಜೂನ್ 19, 20 ಮತ್ತು ಅಕ್ಟೋಬರ್ 20ರಂದು ನಡೆಸಲಾಗಿರುವ ಅಧಿವೇಶನದಲ್ಲಿ ಒಪ್ಪಿಗೆ ಸೂಚಿಸಿರುವ ಮಸೂದೆಗಳಿಗೆ ಸಂಬಂಧಿಸಿದ ತೀರ್ಮಾನವನ್ನು ರಾಜ್ಯಪಾಲರು ಕೈಗೊಳ್ಳಬೇಕು” ಎಂದು ನ್ಯಾಯಾಲಯ ಹೇಳಿದೆ.
“ಶಾಸನಸಭೆ ರೂಪಿಸಿದ ಮಸೂದೆಗಳನ್ನು ತಡೆಹಿಡಿಯಲು ರಾಜ್ಯಪಾಲರು ತಮ್ಮ ಸಾಂವಿಧಾನಿಕ ಅಧಿಕಾರ ಬಳಕೆ ಮಾಡಲಾಗದು. ಇಡೀ ಮಸೂದೆಯನ್ನು ಮತ್ತೊಮ್ಮೆ ಪರಿಗಣಿಸುವಂತೆ ಅಥವಾ ನಿರ್ದಿಷ್ಟ ಭಾಗದಲ್ಲಿ ತಿದ್ದುಪಡಿ ತರುವಂತೆ ಮಾರ್ಗದರ್ಶಕ ರಾಜನೀತಿಜ್ಞನಾಗಿ ಅವರು ಶಿಫಾರಸ್ಸು ಮಾಡಬಹುದು. ಅದಾಗ್ಯೂ, ರಾಜ್ಯಪಾಲರ ಸಲಹೆಯನ್ನು ಪರಿಗಣಿಸಬೇಕೆ ಅಥವಾ ಬೇಡವೇ ಎಂಬುದು ಶಾಸನಸಭೆಗೆ ಮಾತ್ರ ಬಿಟ್ಟ ವಿಚಾರ” ಎಂದು ನ್ಯಾಯಾಲಯ ಹೇಳಿದೆ.
“ಶಾಸನಸಭೆಯ ಅಧಿವೇಶದ ಬಗ್ಗೆ ಅನುಮಾನಪಡುವ ಯಾವುದೇ ಪ್ರಯತ್ನವು ಪ್ರಜಾಪ್ರಭುತ್ವಕ್ಕೆ ಗಂಭೀರ ಅಪಾಯಗಳನ್ನು ಉಂಟು ಮಾಡುತ್ತವೆ. ಸದನದ ವಿಶೇಷ ಅಧಿಕಾರಗಳ ರಕ್ಷಕರಾದ ವಿಧಾನಸಭಾಧ್ಯಕ್ಷರು ಮತ್ತು ಸದನವನ್ನು ಪ್ರತಿನಿಧಿಸುವ ಸಾಂವಿಧಾನಿಕ ಪ್ರತಿನಿಧಿಯು ಅನಿರ್ದಿಷ್ಟಾವಧಿಗೆ ಸದನವನ್ನು ಮುಂದೂಡುವ ಮೂಲಕ ತಮ್ಮ ವ್ಯಾಪ್ತಿಯ ಮಿತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ” ಎಂದು ಪೀಠ ಹೇಳಿದೆ.