ರಾಜ್ಯಪಾಲರು ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ

ಹೈದರಾಬಾದ್‌ನ ನಲ್ಸಾರ್ ಕಾನೂನು ವಿಶ್ವವಿದ್ಯಾಲಯ ಶನಿವಾರ ಆಯೋಜಿಸಿದ್ದ ನ್ಯಾಯಾಲಯಗಳ ಪರಿಚಯಾತ್ಮಕ ಅಧಿವೇಶನ ಮತ್ತು ಸಂವಿಧಾನ ಸಮ್ಮೇಳನದಲ್ಲಿ ನ್ಯಾ. ನಾಗರತ್ನ ಮಾತನಾಡಿದರು.
ನ್ಯಾಯಮೂರ್ತಿ ಬಿ.ವಿ.ನಾಗರತ್ನ
ನ್ಯಾಯಮೂರ್ತಿ ಬಿ.ವಿ.ನಾಗರತ್ನ
Published on

ರಾಜ್ಯಪಾಲರುಗಳು ಸಾಂವಿಧಾನಿಕ ನ್ಯಾಯಾಲಯಗಳಲ್ಲಿ ಹೂಡಲಾಗುವ ದಾವೆಗಳ ಕೇಂದ್ರ ಬಿಂದುವಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಹೈದರಾಬಾದ್‌ನ ನಲ್ಸಾರ್ ಕಾನೂನು ವಿಶ್ವವಿದ್ಯಾಲಯ ಶನಿವಾರ ಆಯೋಜಿಸಿದ್ದ ನ್ಯಾಯಾಲಯಗಳ ಪರಿಚಯಾತ್ಮಕ ಅಧಿವೇಶನ ಮತ್ತು ಸಂವಿಧಾನ ಸಮ್ಮೇಳನದಲ್ಲಿ ನ್ಯಾ. ನಾಗರತ್ನ ಮಾತನಾಡಿದರು.

ರಾಜ್ಯಪಾಲರು ಏನು ಮಾಡಬೇಕು, ಏನು ಮಾಡಬಾರದು ಎಂದು ಹೇಳಿಸಿಕೊಳ್ಳುವ ಬದಲು ಸಂವಿಧಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ನ್ಯಾ. ನಾಗರತ್ನ ಕಿವಿಮಾತು ಹೇಳಿದರು.

"ಮಸೂದೆಗಳಿಗೆ ಒಪ್ಪಿಗೆ ನೀಡುವಲ್ಲಿನ ಲೋಪ ಅಥವಾ ತಾವು ತೆಗೆದುಕೊಳ್ಳುವ ಇತರ ಕ್ರಮಗಳಿಂದಾಗಿ ರಾಜ್ಯಪಾಲರುಗಳು ದಾವೆಯ ಕೇಂದ್ರಬಿಂದುವಾಗುತ್ತಿದ್ದಾರೆ. ಒಂದು ರಾಜ್ಯದ ರಾಜ್ಯಪಾಲರ ಕ್ರಮಗಳು ಅಥವಾ ಲೋಪಗಳನ್ನು ಸಾಂವಿಧಾನಿಕ ನ್ಯಾಯಾಲಯಗಳ ಪರಿಗಣನೆಗೆ ತರುವುದು ಸಂವಿಧಾನದ ಪ್ರಕಾರ ಆರೋಗ್ಯಕರ ಪ್ರವೃತ್ತಿಯಲ್ಲ. ಇದು ಗಂಭೀರ ಸಾಂವಿಧಾನಿಕ ಹುದ್ದೆಯಾಗಿದ್ದು ರಾಜ್ಯಪಾಲರು ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸಬೇಕು. ರಾಜ್ಯಪಾಲರುಗಳಿಗೆ ಹೀಗೆ ಮಾಡಿ ಅಥವಾ ಮಾಡಬೇಡಿ ಎಂದು ಹೇಳುವುದು ಸಾಕಷ್ಟು ಮುಜುಗರ ಉಂಟುಮಾಡುತ್ತದೆ. ಸಂವಿಧಾನದ ಪ್ರಕಾರ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಂತೆ ಅವರಿಗೆ ಹೇಳುವ ಕಾಲ ಬಂದಿದೆ" ಎಂದು ಅವರು ನುಡಿದರು.

ತಮಿಳುನಾಡು ರಾಜ್ಯಪಾಲ ಆರ್‌ ಎನ್‌ ರವಿ ಅವರ ನಡವಳಿಕೆಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿರುವ ಬೆನ್ನಲ್ಲೇ ಮತ್ತು ಇತ್ತೀಚಿನ ದಿನಗಳಲ್ಲಿ ಕೇರಳ, ತೆಲಂಗಾಣ ಮತ್ತು ಪಂಜಾಬ್ ರಾಜ್ಯಗಳು ತಮ್ಮ ರಾಜ್ಯಪಾಲರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿರುವ ಹೊತ್ತಿನಲ್ಲೇ ನ್ಯಾ. ನಾಗರತ್ನ ಅವರ ಈ ಮಾತುಗಳಿಗೆ ಮಹತ್ವ ದೊರೆತಿದೆ.

ದೇಶದ ಪ್ರಜಾಪ್ರಭುತ್ವದ ಅಡಿಪಾಯವನ್ನು ಬಲಪಡಿಸಲು ಸುಪ್ರೀಂ ಕೋರ್ಟ್ ಮುಂದಡಿ ಇಡುತ್ತಿದೆ ಎಂದು ನ್ಯಾಯಮೂರ್ತಿ ನಾಗರತ್ನ ಅಭಿಪ್ರಾಯಪಟ್ಟರು.

ನೋಟು ಅಮಾನ್ಯೀಕರಣ ಕುರಿತಂತೆ ತಾವು ನೀಡಿದ ಭಿನ್ನ ತೀರ್ಪಿನ ಬಗ್ಗೆ ಮಾತನಾಡಿದ ಅವರು ನೋಟುಗಳನ್ನು ಹಿಂಪಡೆದ ವೇಳೆ ಜನಸಾಮಾನ್ಯರು ಅನುಭವಿಸಿದ ಕಷ್ಟ ಕಾರ್ಪಣ್ಯಗಳ ಬಗ್ಗೆ ತಾನು ಚಿಂತಿತಳಾಗಿದ್ದೆ ಎಂದು ವಿವರಿಸಿದರು.

"ಆ ತೀರ್ಪು ನೀಡಿದ ಪೀಠದ ಭಾಗವಾಗಿದ್ದಕ್ಕೆ ನಾನು ಖುಷಿ ಪಡುತ್ತೇನೆ. ನವೆಂಬರ್ 8, 2016ರಂದು ಏನಾಯಿತು ಎಂದು ನಮಗೆಲ್ಲರಿಗೂ ತಿಳಿದಿದೆ. ಶೇ 86ರಷ್ಟು ನೋಟುಗಳು 500 ಮತ್ತು 1,000 ರೂಪಾಯಿಯದ್ದಾಗಿದ್ದವು, ಇದನ್ನು ಕೇಂದ್ರ ಸರ್ಕಾರ ಗಮನಿಸದೆ ಹೋಯಿತು ಎಂದು ನನಗೆ ಅನಿಸುತ್ತದೆ . ಕಾರ್ಮಿಕನೊಬ್ಬ ತನ್ನ ದೈನಂದಿನ ಅಗತ್ಯಗಳಿಗಾಗಿ ಈ ನೋಟುಗಳನ್ನು ಬದಲಿಸಿಕೊಳ್ಳಬೇಕಾದ ಪರಿಸ್ಥಿತಿಯ ಬಗ್ಗೆ ಒಮ್ಮೆ ಊಹಿಸಿ. ಅಲ್ಲದೆ, ಶೇ. 98ರಷ್ಟು ನೋಟುಗಳು ಮರಳಿ (ಅರ್ಥವ್ಯವಸ್ಥೆಗೆ) ಬಂದಿವೆ, ಹಾಗಾದರೆ (ನೋಟು ಅಮಾನ್ಯೀಕರಣದ ಉದ್ದೇಶವಾಗಿದ್ದ)ಕಪ್ಪು ಹಣ ನಿರ್ಮೂಲನೆ ವಿಚಾರದಲ್ಲಿ ನಾವು ಎಲ್ಲಿದ್ದೇವೆ? ಆದ್ದರಿಂದ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡಲು, ಲೆಕ್ಕದಲ್ಲಿಲ್ಲದ ಹಣ ವ್ಯವಸ್ಥೆಗೆ ಪ್ರವೇಶಿಸಲು ಇದು ಉತ್ತಮ ಮಾರ್ಗವಾಯಿತು ಎಂದು (ಆ ಸಮಯದಲ್ಲಿ) ನಾನು ಭಾವಿಸಿದೆ. ಇದರ ನಂತರ ಆದಾಯ ತೆರಿಗೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಏನಾಯಿತು ಎಂಬುದು ನಮಗೆ ಈವರೆಗೆ ತಿಳಿದಿಲ್ಲ. ಹಾಗಾಗಿ, ಸಾಮಾನ್ಯ ಮನುಷ್ಯನ ದುಃಸ್ಥಿತಿ ನಿಜವಾಗಿಯೂ ನನ್ನನ್ನು ಚಿಂತಿತಳನ್ನಾಗಿಸಿ ಭಿನ್ನ ತೀರ್ಪು ನೀಡುವಂತೆ ಮಾಡಿತು" ಎಂದರು.

ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಬಂಧಿತರಾದ ವ್ಯಕ್ತಿಗಳಿಗೆ ಬಂಧನದ ಲಿಖಿತ ಕಾರಣಗಳನ್ನು ಜಾರಿ ನಿರ್ದೇಶನಾಲಯ ಒದಗಿಸಬೇಕು' ಎಂದು ಸುಪ್ರೀಂ ಕೋರ್ಟ್ ಈಚೆಗೆ ನೀಡಿದ ತೀರ್ಪು 'ಸ್ವಲ್ಪ ಬಲಹೀನವಾಗಿತ್ತು' ಎಂದು ಅವರು ತಿಳಿಸಿದ್ದಾರೆ.

ವೈದ್ಯಕೀಯ ಗರ್ಭಪಾತದ ವಿಚಾರದಲ್ಲಿ ವಂಶೋತ್ಪಾದನೆಯ ಹಕ್ಕುಗಳ ಕಳಕಳಿಯ ವಿಷಯವಾಗಿ ಸುಪ್ರೀಂ ಕೋರ್ಟ್‌ನ ನಿಲುವು ಒಂದು ಧ್ರುವದಿಂದ ಮತ್ತೊಂದು ಧ್ರುವದವರೆಗೆ ಚಲಿಸಿರುವ ಬಗ್ಗೆ ಅವರು ಗಮನಸೆಳೆದರು. ಈ ರೀತಿ ಇಡೀ ವಾದವನ್ನು ಧ್ರುವೀಕರಣಗೊಳಿಸುವುದರ ಅಪಾಯದ ಬಗ್ಗೆ ಬೆರಳು ಮಾಡಿದರು. ಅಂತಿಮವಾಗಿ ಈ ವಿಚಾರಗಳು ಪ್ರಕರಣದ ವಾಸ್ತವಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ, ಏಕೆ ನಿರ್ದಿಷ್ಟ ಅವಧಿಯ ನಂತರ ಮಹಿಳೆಯು ನ್ಯಾಯಾಲಯವನ್ನು ಎಡತಾಕಿದ್ದಾಳೆ ಎನ್ನುವುದು ಮುಖ್ಯವಾಗುತ್ತದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರವೀಂದ್ರ ಭಟ್, ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ, ನೇಪಾಳದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಪನಾ ಮಲ್ಲಾ ಹಾಗೂ ಪಾಕಿಸ್ತಾನದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೈಯದ್ ಮನ್ಸೂರ್ ಅಲಿ ಶಾ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.

Kannada Bar & Bench
kannada.barandbench.com