ಗೋವಿಂದ ಪನ್ಸಾರೆ ಹತ್ಯೆ ಪ್ರಕರಣ: ಸಮೀರ್ ಗಾಯಕವಾಡ್‌ ಜಾಮೀನು ಎತ್ತಿಹಿಡಿದ ಬಾಂಬೆ ಹೈಕೋರ್ಟ್

ಪ್ರಾಸಿಕ್ಯೂಷನ್ ಹಾಜರುಪಡಿಸಿದ ಸಾಕ್ಷ್ಯಗಳನ್ನು ಗಮನಿಸಿದರೆ ಅಪರಾಧದಲ್ಲಿ ಗಾಯಕವಾಡ್‌ ಭಾಗಿಯಾಗಿರುವ ಬಗ್ಗೆ ಅನುಮಾನ ಉಂಟಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಗೋವಿಂದ ಪನ್ಸಾರೆ ಮತ್ತು ಬಾಂಬೆ ಹೈಕೋರ್ಟ್
ಗೋವಿಂದ ಪನ್ಸಾರೆ ಮತ್ತು ಬಾಂಬೆ ಹೈಕೋರ್ಟ್thebridgechronicle.com

ವಿಚಾರವಾದಿ, ಕಮ್ಯುನಿಸ್ಟ್ ಪಕ್ಷದ ರಾಜಕಾರಣಿ ಹಾಗೂ ಲೇಖಕ ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ಆರೋಪಿ ಸಮೀರ್ ಗಾಯಕವಾಡ್‌ಗೆ ನೀಡಲಾಗಿರುವ ಜಾಮೀನು ರದ್ದುಗೊಳಿಸುವಂತೆ ಕೋರಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ [ಮಹಾರಾಷ್ಟ್ರ ಸರ್ಕಾರ ಮತ್ತು ಸಮೀರ್ ಗಾಯಕವಾಡ್‌ ನಡುವಣ ಪ್ರಕರಣ].

ಕೊಲ್ಹಾಪುರ ಸೆಷನ್ಸ್ ನ್ಯಾಯಾಲಯ 2017ರಲ್ಲಿ ಗಾಯಕವಾಡ್‌ಗೆ ಜಾಮೀನು ನೀಡಿತ್ತು. ಆಗ ನ್ಯಾಯಾಲಯ ವಿಧಿಸಿದ್ದ ಯಾವುದೇ ನಿಯಮ ಮತ್ತು ಷರತ್ತನ್ನು ಗಾಯಕವಾಡ್‌ ಉಲ್ಲಂಘಿಸಿಲ್ಲ ಎಂದು ನ್ಯಾ. ಅನುಜಾ ಪ್ರಭುದೇಸಾಯಿ ಅಭಿಪ್ರಾಯಪಟ್ಟರು.

"ಜಾಮೀನು ರದ್ದುಗೊಳಿಸಲು ಅರ್ಜಿಯನ್ನು ಅಲ್ಪಾವಧಿಯಲ್ಲಿ (2018 ರಲ್ಲಿ) ಸಲ್ಲಿಸಲಾಗಿದ್ದರೂ, ಪ್ರಕರಣ ಸಾಕಷ್ಟು ಸಮಯದಿಂದ ಈ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ಮಧ್ಯಂತರ ಅವಧಿಯಲ್ಲಿ, ವಿಚಾರಣೆ ಪ್ರಾರಂಭವಾಗಿದ್ದು, 19 ಸಾಕ್ಷಿಗಳನ್ನು ಪರಿಶೀಲಿಸಲಾಗಿದೆ. ಗಾಯಕವಾಡ್‌ ಜಾಮೀನು ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘಿಸಿಲ್ಲ ಮತ್ತು ಅವರ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿಲ್ಲ " ಎಂದು ನ್ಯಾಯಾಲಯ ಜನವರಿ 10ರಂದು ನೀಡಿರುವ ಆದೇಶದಲ್ಲಿ ತಿಳಿಸಿದೆ.

ಬಾಂಬೆ ಹೈಕೋರ್ಟ್, ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ
ಬಾಂಬೆ ಹೈಕೋರ್ಟ್, ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ

2015ರ ಫೆಬ್ರವರಿಯಲ್ಲಿ ಕೊಲ್ಹಾಪುರದಲ್ಲಿ ಪನ್ಸಾರೆ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಗಾಯಕವಾಡ್‌ ಅವರ ಹಿಂದಿನ ಎರಡು ಅರ್ಜಿಗಳನ್ನು ಕೊಲ್ಹಾಪುರದ ಸೆಷನ್ಸ್ ನ್ಯಾಯಾಲಯವು ಅರ್ಹತೆಯ ಆಧಾರದ ಮೇಲೆ ತಿರಸ್ಕರಿಸಿದೆ ಎಂಬ ನೆಲೆಯಲ್ಲಿ ಜಾಮೀನು ರದ್ದುಗೊಳಿಸುವಂತೆ ಕೋರಿ ಮಹಾರಾಷ್ಟ್ರ ಸರ್ಕಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಅಪರಾಧ ಗಂಭೀರವಾಗಿದ್ದು ಗಾಯಕವಾಡ್‌ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಈ ಹಿಂದೆ ಎರಡು ಬಾರಿ ತಿರಸ್ಕರಿಸಲಾಗಿದೆ ಎಂದು ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಜಕ್ತಾ ಶಿಂಧೆ, ವಾದಿಸಿದ್ದರು. ನಂತರ, ಹೈಕೋರ್ಟ್ ಜುಲೈ 11, 2016 ರಂದು ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆರೋಪಿ ಮತ್ತೊಮ್ಮೆ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದ. ಅದು ಜೂನ್ 17, 2017 ರಂದು ಜಾಮೀನು ನೀಡಿತ್ತು.

2017 ರಲ್ಲಿ ಕೊಲ್ಹಾಪುರ ನ್ಯಾಯಾಲಯ ಜಾಮೀನು ನೀಡಿದಾಗ, ಪನ್ಸಾರೆ ಅವರ ಪತ್ನಿ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ಹಲ್ಲೆಕೋರ ಎಂದು ಗುರುತಿಸಿದ್ದಾರೆ ಎಂದು ಗಾಯಕವಾಡ್‌ ಪರ ವಕೀಲ ಸಂಜೀವ್ ಪುನಲೇಕರ್ ಗಮನಸೆಳೆದರು.

ಆದಾಗ್ಯೂ, ಜುಲೈ 2016 ರಲ್ಲಿ ಆರೋಪಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ, ಸೆಷನ್ಸ್ ನ್ಯಾಯಾಲಯ ಆರೋಪಿಗಳ ಜಾಮೀನು ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಆದರೂ ಪ್ರಾಸಿಕ್ಯೂಷನ್ ಹಾಜರುಪಡಿಸಿದ ಸಾಕ್ಷ್ಯಗಳನ್ನು ಗಮನಿಸಿದರೆ ಅಪರಾಧದಲ್ಲಿ ಗಾಯಕವಾಡ್‌ ಭಾಗಿಯಾಗಿರುವ ಬಗ್ಗೆ ಅನುಮಾನ ಉಂಟಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

"ಇಂತಹ ಸಂದರ್ಭಗಳಲ್ಲಿ ಅದರಲ್ಲಿಯೂ, ಮೃತರ ಪತ್ನಿ ನೀಡಿದ ಹೇಳಿಕೆಯನ್ನು ಗಮನಿಸಿ ಪ್ರತಿವಾದಿ ಗಾಯಕವಾಡ್‌ಗೆ ನೀಡಲಾದ ಜಾಮೀನನ್ನು ರದ್ದುಗೊಳಿಸಲು ನಾನು ಒಲವು ಹೊಂದಿಲ್ಲ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಮೂರ್ತಿ ಪ್ರಭುದೇಸಾಯಿ ಹೇಳಿದ್ದಾರೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
State of Maharashtra v. Samir Gaikwad.pdf
Preview

Related Stories

No stories found.
Kannada Bar & Bench
kannada.barandbench.com