ಅನುದಾನ ರಹಿತ ಖಾಸಗಿ ಶಾಲೆಗಳ ಮಾನ್ಯತೆ ನವೀಕರಿಸಲು ಒತ್ತಾಯ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಪ್ರತಿ ವರ್ಷ ಶಾಲಾ ಮಾನ್ಯತೆ ನವೀಕರಿಸುವಂತೆ ಸೂಚನೆ ನೀಡುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಮನವಿಯಲ್ಲಿ ಕೋರಿದ್ದಾರೆ.
High Court of Karnataka

High Court of Karnataka

Published on

ಪ್ರತಿ ವರ್ಷ ಅನುದಾನ ರಹಿತ ಖಾಸಗಿ ಶಾಲೆಗಳ ಮಾನ್ಯತೆ ನವೀಕರಿಸಲು ಬಲವಂತಪಡಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ತುರ್ತು ನೋಟಿಸ್ ಜಾರಿ ಮಾಡಿದೆ.

ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸಾ) ಮತ್ತು ಬೆಂಗಳೂರಿನ ಗುರು ಸಿದ್ಧಾರ್ಥ್ ಶೈಕ್ಷಣಿಕ ಟ್ರಸ್ಟ್ ಹಾಗೂ ರಾಜ್ಯದ ಇತರೆ ಶಿಕ್ಷಣ ಸಂಸ್ಥೆಗಳು ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ರಾಜ್ಯ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಪೀಠವು ತುರ್ತು ನೋಟಿಸ್ ಜಾರಿ ಮಾಡಿತು.

“ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಶಾಲಾ ಮಾನ್ಯತೆಯ ವಾರ್ಷಿಕ ನವೀಕರಣಕ್ಕೆ ಬಲವಂತಪಡಿಸದೆ ಅರ್ಜಿದಾರರ ಶಾಲೆಗಳ ಅರ್ಹ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ವಾರ್ಷಿಕ ಪರೀಕ್ಷಾ ನೋಂದಣಿಗೆ ಅರ್ಜಿ ಸ್ವೀಕರಿಸಬೇಕು. ಆದರೆ, ನ್ಯಾಯಾಲಯದ ಅನುಮತಿ ಪಡೆಯದೆ ಪರೀಕ್ಷಾ ಫಲಿತಾಂಶ ಪ್ರಕಟಿಸಬಾರದು” ಎಂದು ಪೀಠವು ಮಧ್ಯಂತರ ಆದೇಶ ಮಾಡಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್ ಬಸವರಾಜು ಅವರು “ಕರ್ನಾಟಕ ಶಿಕ್ಷಣ ಕಾಯಿದೆಯ ಪ್ರಕಾರ 10 ವರ್ಷಗಳಿಗೊಮ್ಮೆ ಶಾಲಾ ಮಾನ್ಯತೆ ನವೀಕರಿಸಬೇಕಿದೆ. ಆದರೆ, ರಾಜ್ಯ ಸರ್ಕಾರವು ಪ್ರತಿ ವರ್ಷವೂ ಮಾನ್ಯತೆ ನವೀಕರಣ ಮಾಡುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ಸೂಚಿಸುತ್ತಿದೆ. ಅದರಂತೆ 2021ರ ಡಿಸೆಂಬರ್‌ 12ರಂದು ಸುತೋಲೆ ಹೊರಡಿಸಿ, 2022ರ ಆಗಸ್ಟ್ 31ರೊಳಗೆ ಶಾಲಾ ಮಾನ್ಯತೆ ನವೀಕರಿಸುವಂತೆ ಸರ್ಕಾರ ಸೂಚನೆ ನೀಡಿದೆ” ಎಂದು ಪೀಠದ ಗಮನಸೆಳೆದರು.

Also Read
ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯಾಗಲು ನೀಡಿದ್ದ ಸಮ್ಮತಿ ಹಿಂಪಡೆದ ಹಿರಿಯ ವಕೀಲ ಆದಿತ್ಯ ಸೋಂಧಿ

“ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2022ರ ಜನವರಿ 17ರಂದು ಸುತ್ತೋಲೆ ಹೊರಡಿಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕಡ್ಡಾಯವಾಗಿ ನೋಂದಣಿಗೆ ಅರ್ಜಿ ಸಲ್ಲಿಸಲು ಸೂಚಿಸಿದ್ದು, ನೋಂದಣಿಗೆ ಅಂತಿಮ ದಿನಾಂಕ ನಿಗದಿಪಡಿಸಿದೆ. ಅದರಂತೆ ಶಾಲಾ ಮಾನ್ಯತೆ ನವೀಕರಿಸಿಕೊಳ್ಳದಿದ್ದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ನೋಂದಣಿಗೆ ಸಲ್ಲಿಸುವ ಅರ್ಜಿಗೆ ಸಂಬಂಧಿಸಿದ ಪ್ರಕ್ರಿಯೆ ಮುಂದುವರಿಯುವುದಿಲ್ಲ” ಎಂದು ಪೀಠದ ಗಮನಕ್ಕೆ ತಂದರು.

ಕರ್ನಾಟಕ ಶಿಕ್ಷಣ ಕಾಯಿದೆ-1983ರ ಸೆಕ್ಷನ್ 36ರ ಪ್ರಕಾರ ಅಥವಾ ಕರ್ನಾಟಕ ಶೈಕ್ಷಣಿಕ ಶಿಕ್ಷಣ ಸಂಸ್ಥೆಗಳ (ನೋಂದಣಿ) ಅಧಿನಿಯಮ-1999ರ ಪ್ರಕಾರ ಪ್ರತಿ ವರ್ಷ ಶಾಲಾ ಮಾನ್ಯತೆ ನವೀಕರಿಸುವಂತೆ ಸೂಚನೆ ನೀಡುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಘೋಷಿಸಬೇಕು. ಹತ್ತು ವರ್ಷಕ್ಕೊಮ್ಮೆ ಮಾತ್ರ ಶಾಲಾ ಮಾನ್ಯತೆ ನವೀಕರಣ ಮಾಡುವುದನ್ನು ಪ್ರತಿಪಾದಿಸುವ ಶಿಕ್ಷಣ ಕಾಯಿದೆ ಮತ್ತು ಅಧಿನಿಯಮಗಳನ್ನು ಪಾಲಿಸುವಂತೆ ಸರ್ಕಾರ ಮತ್ತು ಶಿಕ್ಷಣ ಇಲಾಖೆಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Kannada Bar & Bench
kannada.barandbench.com