ಎಜಿ, ಎಎಜಿ, ಎಸ್‌ಪಿಪಿ, ಸರ್ಕಾರಿ ವಕೀಲರ ಶುಲ್ಕ ಪಾವತಿಯಲ್ಲಿ ಸರ್ಕಾರದ ವಿಳಂಬ ಧೋರಣೆ ಸಲ್ಲ: ಹೈಕೋರ್ಟ್‌

ಹಳೆ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಎಸ್‌ಪಿಪಿ ಆಗಿದ್ದ ಹಿರಿಯ ವಕೀಲ ವಿಜಯಕುಮಾರ್ ಶೀಲವಂತ ಅವರು ಸರ್ಕಾರ ಈ ಪ್ರಕರಣದಲ್ಲಿ ಪಾವತಿಸಬೇಕಾದ ಶುಲ್ಕವನ್ನು ಇನ್ನೂ ಪಾವತಿಸಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದೆ.
Justice Suraj Govindraj
Justice Suraj Govindraj
Published on

“ಅಡ್ವೊಕೇಟ್‌ ಜನರಲ್‌, ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳು, ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳು, ಸರ್ಕಾರಿ ವಕೀಲರು ಅಥವಾ ಹೈಕೋರ್ಟ್‌ನ ಸರ್ಕಾರಿ ಪ್ಲೀಡರ್‌ಗಳು... ಇತ್ಯಾದಿ ಸರ್ಕಾರದ ಪರ ವಾದ ಮಂಡಿಸುವ ವಕೀಲರ ಶುಲ್ಕ ಪಾವತಿಯಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸಬಾರದು” ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ಆದೇಶಿಸಿದೆ.

ಹಳೆ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿ ವಾದ ಮಂಡಿಸಿದ್ದ ಹಿರಿಯ ವಕೀಲ ವಿಜಯಕುಮಾರ್ ಎಂ.ಶೀಲವಂತ ಅವರು ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ಪಾವತಿಸಬೇಕಾದ ಶುಲ್ಕವನ್ನು ಇನ್ನೂ ಪಾವತಿಸಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಅರ್ಜಿದಾರ ವಿಜಯಕುಮಾರ್ ಎಂ.ಶೀಲವಂತ ಅವರ ಶುಲ್ಕದ ಮೊತ್ತ ₹44.59 ಲಕ್ಷವನ್ನು ನಾಲ್ಕು ವಾರಗಳ ಒಳಗಾಗಿ ಪಾವತಿಸುವಂತೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಗೃಹ ಇಲಾಖೆಯ ಅಧೀನ ಕಾರ್ಯದರ್ಶಿಗೆ ನಿರ್ದೇಶಿಸಿದೆ. ಅಂತೆಯೇ, ಈ ಕುರಿತ ಅನುಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದೂ ತಾಕೀತು ಮಾಡಿದೆ.

ಸರ್ಕಾರದ ಪರ ವಾದ ಮಂಡಿಸುವ ವಕೀಲರಿಗೆ ಸಕಾಲದಲ್ಲಿ ಶುಲ್ಕ ಪಾವತಿ ಮಾಡುವ ನಿಟ್ಟಿನಲ್ಲಿ ಮತ್ತು ಶುಲ್ಕ ಪಾವತಿ ವ್ಯವಸ್ಥೆ ಪಾರದರ್ಶಕವಾಗಿರುವಂತೆ ಅಗತ್ಯ ಡಿಜಿಟಲ್‌ ವ್ಯವಸ್ಥೆಯೊಂದನ್ನು ರೂಪಿಸಿ ಎಂದು ರಾಜ್ಯ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಿರುವ ಪೀಠ ಈ ದಿಸೆಯಲ್ಲಿ ಮಾರ್ಗದರ್ಶಿ ಸೂತ್ರಾಂಶಗಳನ್ನೂ ವಿವರಿಸಿದೆ.

Attachment
PDF
Vijaykumar Sheelvant Vs State of Karnataka
Preview
Kannada Bar & Bench
kannada.barandbench.com