ಹಾಥ್‌ರಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಹಾಗೂ ಪ್ರಕರಣದಲ್ಲಿನ ಸಾಕ್ಷಿಗಳಿಗೆ ನೀಡಲಾಗಿರುವ ರಕ್ಷಣೆ ಮತ್ತು ಭದ್ರತೆ ಕುರಿತಾದ ದಾಖಲೆಗಳನ್ನು ಒಳಗೊಂಡ ಅಫಿಡವಿಟ್ ಅನ್ನು ಉತ್ತರ ಪ್ರದೇಶ ಸರ್ಕಾರವು ಬುಧವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.
ಸಂತ್ರಸ್ತೆಯ ಕುಟುಂಬದ ಸಾಕ್ಷ್ಯಗಳಿಗೆ ನೀಡಲಾಗಿರುವ ಭದ್ರತೆ ಮತ್ತು ಅವರು ಆಯ್ಕೆ ಮಾಡಿಕೊಂಡಿರುವ ವಕೀಲರ ವಿವರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪಾಲನಾ ಅಫಿಡವಿಟ್ ಸಲ್ಲಿಸಿದೆ.
ಸಾಕ್ಷ್ಯ ಭದ್ರತೆ ವಿಚಾರವನ್ನು ಅಫಿಡವಿಟ್‌ನಲ್ಲಿ ಪ್ರಸ್ತಾಪಿಸಿರುವ ಉತ್ತರ ಪ್ರದೇಶ ಸರ್ಕಾರವು ಹಾಥ್‌ರಸ್ ಜಿಲ್ಲೆಯ ಚಾಂದ್ಪಾ ಗ್ರಾಮದ ನಿವಾಸಿಗಳಾದ ಸಂತ್ರಸ್ತೆಯ ಕುಟುಂಬಸ್ಥರಿಗೆ ಅಗತ್ಯವಾದಷ್ಟು ಭದ್ರತಾ ಪಡೆಗಳನ್ನು ರಕ್ಷಣೆಗಾಗಿ ನಿಯೋಜಿಸಲಾಗಿದೆ. ಸಂತ್ರಸ್ತೆಯ ತಂದೆ-ತಾಯಿ, ಇಬ್ಬರು ಸಹೋದರರು, ಸಂತ್ರಸ್ತೆಯ ಅತ್ತಿಗೆ ಹಾಗೂ ಅಜ್ಜಿಗೆ ಭದ್ರತೆ ಕಲ್ಪಿಸಲಾಗಿದ್ದು, ವಿವರ ಇಂತಿದೆ ಎಂದು ಸರ್ಕಾರ ಹೇಳಿದೆ.
ಸಶಸ್ತ್ರ ಪೊಲೀಸ್ ತುಕಡಿ
ಸಿವಿಲ್ ಪೊಲೀಸ್ ತುಕಡಿ
ಸಂತ್ರಸ್ತೆಯ ಮನೆಯ ಸುತ್ತಲಿನ ಪ್ರದೇಶದಲ್ಲಿ ನಿಗಾವಹಿಸುವ ಉದ್ದೇಶದಿಂದ ವಿದ್ಯುದ್ದೀಪಗಳು ಹಾಗೂ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ
ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿರುವ ಚಾರ್ಟ್ ಅನ್ನು ಅಫಿಡವಿಟ್ ಜೊತೆ ಅಳವಡಿಸಲಾಗಿದೆ. ಚಾಂದ್ಪಾ ಪೊಲೀಸ್ ಠಾಣೆಯ (ಉಸ್ತುವಾರಿ) ಇನ್ಪೆಕ್ಟರ್ ಅವರಿಗೆ ದಿನನಿತ್ಯ ಒಟ್ಟಾರೆ ಭದ್ರತಾ ವ್ಯವಸ್ಥೆಯ ಮೇಲೆ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಕುಟುಂಬದ ಭದ್ರತೆಯ ದೃಷ್ಟಿಯಿಂದ ದಿನದ ಇಪ್ಪತ್ನಾಲ್ಕು ತಾಸೂ ನಿಗಾ ಇಡಲು ಅನುಕೂಲವಾಗುವಂತೆ ಸಿಸಿಟಿವಿ ಕ್ಯಾಮೆರಾ ಒದಗಿಸಲಾಗಿದೆ ಎಂದು ಅಫಿಡವಿಟ್ ನಲ್ಲಿ ವಿವರಿಸಲಾಗಿದೆ.
ಸೀಮಾ ಕುಶ್ವಾಹಾ ಮತ್ತು ರಾಜ್ ರತನ್ ಅವರನ್ನು ವಕೀಲರನ್ನಾಗಿ ನೇಮಿಸಿಕೊಳ್ಳಲಾಗಿದೆ ಎಂದು ಸಂತ್ರಸ್ತೆಯ ಸಹೋದರ ಬರವಣಿಗೆಯಲ್ಲಿ ಸರ್ಕಾರಕ್ಕೆ ಮಾಹಿತಿ ಒದಗಿಸಿದ್ದಾರೆ. ಇದರ ಜೊತೆಗೆ ಸರ್ಕಾರಿ ವಕೀಲರೂ ಅವರ ಪರವಾಗಿ ಪ್ರಕರಣವನ್ನು ಮುನ್ನಡೆಸಬೇಕು ಎಂದು ಸಂತ್ರಸ್ತೆಯ ಕುಟುಂಬಸ್ಥರು ಕೋರಿದ್ದಾರೆ ಎಂದು ಉತ್ತರ ಪ್ರದೇಶದ ಸರ್ಕಾರದ ಅಫಿಡವಿಟ್ ನಲ್ಲಿ ವಿವರಿಸಲಾಗಿದೆ.