ಕ್ರಿಮಿನಲ್‌ ಪ್ರಕರಣ ವಿಚಾರಣೆಗೆ ಬಾಕಿಯಿದೆ ಎಂದು ಸರ್ಕಾರಿ ನೌಕರರಿಗೆ ಬಡ್ತಿ ನಿರಾಕರಿಸಲಾಗದು: ಹೈಕೋರ್ಟ್‌

ಕ್ರಿಮಿನಲ್‌ ಪ್ರಕರಣ ಬಾಕಿಯಿರುವ ಕಾರಣಕ್ಕೆ ಬಡ್ತಿ ನಿರಾಕರಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಧಾರವಾಡ ತಹಸೀಲ್ದಾರ್‌ ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಜಯಶ್ರೀ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ಹೈಕೋರ್ಟ್‌.
Justices S R Krishna Kumar & G Basavaraja and Karnataka HC (Dharwad Bench)
Justices S R Krishna Kumar & G Basavaraja and Karnataka HC (Dharwad Bench)

gಆರೋಪ ಪಟ್ಟಿ ಸಲ್ಲಿಕೆಯಾಗದಿದ್ದರೂ ಕೇವಲ ಕ್ರಿಮಿನಲ್‌ ಪ್ರಕರಣ ವಿಚಾರಣೆಗೆ ಬಾಕಿಯಿದೆ ಎಂಬ ಕಾರಣಕ್ಕೆ ಸರ್ಕಾರಿ ನೌಕರರಿಗೆ ಬಡ್ತಿ ನಿರಾಕರಿಸಲಾಗದು ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಆದೇಶಿಸಿದೆ.

ಕ್ರಿಮಿನಲ್‌ ಪ್ರಕರಣ ಬಾಕಿಯಿರುವ ಕಾರಣಕ್ಕೆ ತಮಗೆ ಬಡ್ತಿ ನಿರಾಕರಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಧಾರವಾಡದ ತಹಸೀಲ್ದಾರ್‌ ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಜಯಶ್ರೀ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್‌ ಆರ್ ಕೃಷ್ಣ ಕುಮಾರ್‌ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠ ಪುರಸ್ಕರಿಸಿದೆ.

ತಮಗೆ ಬಡ್ತಿ ನೀಡುವಂತೆ ಕೋರಿ ಜಯಶ್ರೀ ಅವರು 2022ರ ಜುಲೈ 5ರಂದು ಸಲ್ಲಿಸಿದ್ದ ಮನವಿ ತಿರಸ್ಕರಿಸಿ ಧಾರವಾಡ ಜಿಲ್ಲಾಧಿಕಾರಿ ನೀಡಿದ್ದ ಹಿಂಬರಹವನ್ನು ಮತ್ತು ಜಿಲ್ಲಾಧಿಕಾರಿಯ ಹಿಂಬರಹವನ್ನು ಎತ್ತಿ ಹಿಡಿದಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣದ (ಕೆಎಟಿ) ಆದೇಶವನ್ನು ಹೈಕೋರ್ಟ್‌ ಇದೇ ವೇಳೆ ರದ್ದುಪಡಿಸಿದೆ. ಜೊತೆಗೆ, ಮುಂದಿನ ಮೂರು ತಿಂಗಳ ಒಳಗೆ ಎಲ್ಲಾ ಸರ್ಕಾರಿ ಸೌಲಭ್ಯಗಳೊಂದಿಗೆ ಅರ್ಜಿದಾರರನ್ನು ಒಟ್ಟಿಗೆ ಪ್ರಥಮ ದರ್ಜೆ ಸಹಾಯಕರು/ಕಂದಾಯ ಇನ್ಸ್‌ಪೆಕ್ಟರ್‌ ಹುದ್ದೆಗೆ ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಇಲಾಖಾ ಬಡ್ತಿ ಸಮಿತಿ (ಡಿಪಿಸಿ) ಸಭೆ ನಡೆಯುವ ದಿನಾಂಕದಂದು ಆರೋಪ ಪಟ್ಟಿ ಸಲ್ಲಿಕೆಯಾಗಿದ್ದರೆ ಮತ್ತು ಆರೋಪಗಳ ಕಲಂ ಹೊರಡಿಸಿದ್ದರೆ, ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಆರೋಪಿ ಸರ್ಕಾರಿ ಅಧಿಕಾರಿಗೆ ಬಡ್ತಿ ನಿರಾಕರಿಸುವ ಅಥವಾ ಮುಚ್ಚಿದ ಲಕೋಟೆ ಪ್ರಕ್ರಿಯೆ ಅನುಸರಿಸಬೇಕು. ಈ ವಿಚಾರವನ್ನು ಸ್ಪಷ್ಟಪಡಿಸಿ 1993ರ ಜುಲೈ 14ರಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಪ್ರಕರಣದಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ 2021ರ ಡಿಸೆಂಬರ್‌ 20ರಂದು ಡಿಪಿಸಿ ಸಭೆ ನಡೆದಿದೆ. ಅಂದಿಗೆ ಅರ್ಜಿದಾರೆಯ ವಿರುದ್ಧ ಯಾವುದೇ ಅರೋಪ ಪಟ್ಟಿ ಅಥವಾ ದೋಷಾರೋಪಣೆ ಕಲಂಗಳನ್ನು ನೀಡಿರಲಿಲ್ಲ. 2022ರ ಫೆಬ್ರವರಿ 1ರಂದು ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಹಾಗಾಗಿ, 2021ರ ಡಿಸೆಂಬರ್‌ 20ರಂದು ನಡೆದಿದ್ದ ಡಿಪಿಸಿ ಸಭೆಯಲ್ಲಿ ಅರ್ಜಿದಾರರಿಗೆ ಬಡ್ತಿ ನಿರಾಕರಿಸುವ ಅಥವಾ ಮುಚ್ಚಿದ ಲಕೋಟೆ ಪ್ರಕ್ರಿಯೆ ಅನುಸರಿಸುವ ಅವಶ್ಯಕತೆಯೇ ಉದ್ಭವಿಸಿರುವುದಿಲ್ಲ. ಹಾಗಾಗಿ, ಕೆಎಟಿ ಆದೇಶವನ್ನು ರದ್ದುಪಡಿಸಲು ಅರ್ಹವಾಗಿದೆ ಎಂದು ಹೈಕೋರ್ಟ್‌ ತೀರ್ಮಾನಿಸಿದೆ.

ಪ್ರಕರಣದ ಹಿನ್ನೆಲೆ: ಧಾರವಾಡ ತಹಸಿಲ್ದಾರ್‌ ಕಚೇರಿಯಲ್ಲಿ ಜಯಶ್ರೀ ಅವರು 2005ರ ಮಾರ್ಚ್‌ 16ರಿಂದ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧ 2017ರಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಾಗಿತ್ತು. ಅರ್ಜಿದಾರೆ ಸೇರಿದಂತೆ ಇತರರಿಗೆ ಬಡ್ತಿ ನೀಡುವ ವಿಚಾರವಾಗಿ 2021ರ ಡಿಸೆಂಬರ್‌ 20ರಂದು ಡಿಪಿಸಿ ಸಭೆ ನಡೆದಿತ್ತು. ಅರ್ಜಿದಾರೆಯ ವಿರುದ್ಧ ಕ್ರಿಮಿನಲ್‌ ಪ್ರಕರಣ ಬಾಕಿಯಿದೆ ಎಂಬ ಕಾರಣಕ್ಕೆ ಅವರಿಗೆ ಬಡ್ತಿ ನೀಡಲು ನಿರಾಕರಿಸಲಾಗಿತ್ತು.

ಇದರಿಂದ ಜಯಶ್ರೀ, 2022ರ ಮೇ 13ರಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ, ತಮಗೆ ಬಡ್ತಿ ನೀಡಲು ಕೋರಿದ್ದರು. ಆ ಮನವಿಯನ್ನು ತಿರಸ್ಕರಿಸಿ ಧಾರವಾಡ ಜಿಲ್ಲಾಧಿಕಾರಿ 2022ರ ಜುಲೈ 5ರಂದು ಹಿಂಬರಹ ನೀಡಿದ್ದರು. ಅದನ್ನು ಪ್ರಶ್ನಿಸಿ ಜಯಶ್ರೀ ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಜಾಗೊಳಿಸಿ ಕೆಎಟಿ, 2023ರ ಮಾರ್ಚ್‌ 30ರಂದು ಆದೇಶಿಸಿತ್ತು. ಇದರಿಂದ ಆಕೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಕ್ರಿಮಿನಲ್‌ ಪ್ರಕರಣದ ವಿಚಾರಣೆ ಬಾಕಿಯಿರುವುದು ಸರ್ಕಾರಿ ನೌಕರರಿಗೆ ಬಡ್ತಿ ನೀಡದಿರುವುದಕ್ಕೆ ಆಧಾರವಾಗುವುದಿಲ್ಲ. 1993ರ ಮಾರ್ಚ್‌ 14ರಂದು ಖುದ್ದು ರಾಜ್ಯ ಸರ್ಕಾರವು ಸುತ್ತೋಲೆ ಹೊರಡಿಸಿ, ಡಿಪಿಸಿ ಸಭೆ ನಡೆಯುವ ದಿನದಂದು ಸರ್ಕಾರಿ ನೌಕರನ ವಿರುದ್ಧದ ಬಾಕಿಯಿರುವ ಕ್ರಿಮಿನಲ್‌ ಪ್ರಕರಣ ಸಂಬಂಧ ಆರೋಪ ಪಟ್ಟಿ ಸಲ್ಲಿಕೆಯಾಗದಿದ್ದರೆ ಅಥವಾ ಆರೋಪಗಳ ಕಲಂ ನೀಡದಿದ್ದ ಪಕ್ಷದಲ್ಲಿ ಕೇವಲ ಕ್ರಿಮಿನಲ್‌ ಪ್ರಕರಣ ಬಾಕಿಯಿದೆ ಎಂಬ ಮಾತ್ರಕ್ಕೆ ಬಡ್ತಿ ನಿರಾಕರಿಸಬಾರದು.ಬಡ್ತಿ ನಿರ್ಣಯವನ್ನು ಮುಚ್ಚಿದ ಲಕೋಟೆಯಲ್ಲಿ ಇಡುವ ಪ್ರಕ್ರಿಯೆ ಅನುಸರಿಸಬಾರದು ಎಂದು ಸ್ಪಷ್ಟಪಡಿಸಿದೆ ಎಂದು ಆಕ್ಷೇಪಿಸಿದ್ದರು.

ಅಲ್ಲದೇ, ಆರೋಪ ಪಟ್ಟಿ ಸಲ್ಲಿಸಿದ ಅಥವಾ ಆರೋಪಗಳ ಕಲಂ ನೀಡಿದ ನಂತರ ಮುಚ್ಚಿದ ಲಕೋಟೆ ಪ್ರಕ್ರಿಯೆ ವಿಧಾನವನ್ನು ಅಳವಡಿಸಬೇಕಾಗುತ್ತದೆ. ಸರ್ಕಾರದ ಆದೇಶ ಮತ್ತು ಈ ವಿಚಾರದಲ್ಲಿ ವಿವಿಧ ನ್ಯಾಯಾಲಯಗಳು ತೀರ್ಪು ಹೊರಡಿಸಿದ್ದರೂ ತಮಗೆ ಬಡ್ತಿ ನಿರಾಕರಿಸಲಾಗಿದೆ. ಈ ವಿಚಾರವನ್ನು ಕೆಎಟಿ ಗಣನೆಗೆ ತೆಗೆದುಕೊಂಡಿಲ್ಲ ಎಂದು ಪ್ರತಿಪಾದಿಸಿದ್ದರು.

Attachment
PDF
Jayashree Vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com