

“ರಾಜ್ಯ ಸರ್ಕಾರವು ತನ್ನನ್ನು ಬಂಧಿಸಲು ಸಕಲ ಪ್ರಯತ್ನ ಮಾಡುತ್ತಿದೆ” ಎಂದು ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಸೋಮವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ಮೌಖಿಕವಾಗಿ ಅಳಲು ತೋಡಿಕೊಂಡರು. ಇದಕ್ಕೆ ನ್ಯಾಯಾಲಯವು ಸಿಸಿಟಿವಿ ಕ್ಯಾಮೆರಾ ಇಲ್ಲವೇ? ಅದರ ನೆರವನ್ನು ಪಡೆಯಬಹುದಲ್ಲಾ ಎಂದು ಜೋಶಿ ಅವರಿಗೆ ಹೇಳಿತು.
ಕಸಾಪ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿ 2025ರ ಜೂನ್ 26 ಹಾಗೂ 30ರಂದು ಸಹಕಾರ ಸಂಘಗಳ ನೋಂದಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ತಡೆ ಕೋರಿ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಜೋಶಿ ಪರ ಹಿರಿಯ ವಕೀಲ ಜಯಕುಮಾರ್ ಎ. ಪಾಟೀಲ್ ಅವರು “ನ್ಯಾಯಾಲಯದಲ್ಲಿ ನಿಯತ ಪ್ರಥಮ ಮೇಲ್ಮನವಿ (ಆರ್‌ಎಫ್‌ಎ) ಬಾಕಿ ಇದ್ದು, ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಅಧಿಕೃತವಾಗಿ ಕಚೇರಿಯಲ್ಲಿ ಇಡಲಾಗಿದೆ. ಅದನ್ನು ತೆಗೆದುಕೊಳ್ಳಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದೇವೆ” ಎಂದರು.
ಆಗ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು “ಜೋಶಿ ಬಂದು ಅದನ್ನು ಪಡೆದುಕೊಳ್ಳಬಹುದು. ಅದನ್ನು ಎಲ್ಲಿಡಲಾಗಿದೆ ಎಂಬುದು ಅವರಿಗೆ ಗೊತ್ತಿದೆ” ಎಂದರು.
ಈ ವೇಳೆ ಪಾಟೀಲ್ ಅವರು “ನಾನು ಅಲ್ಲಿಗೆ ಹೋಗಲ್ಲ. ಅಲ್ಲಿಗೆ ಹೋದರೆ ಈ ದಾಖಲೆಯನ್ನು ತಿರುಚಲಾಗಿದೆ ಎನ್ನುತ್ತಾರೆ. ನಾನು ದಾಖಲೆ ತಿರುಚುವ ಸಾಧ್ಯತೆ ಇದೆ ಎಂದು ಸರ್ಕಾರ ಆಡಳಿತಾಧಿಕಾರಿ ನೇಮಿಸಿದೆ. ಅಲ್ಲಿ ಹಾಜರಿರುತ್ತೇನೆ. ಸರ್ಕಾರ/ಆಡಳಿತಾಧಿಕಾರಿ ಅದನ್ನು ಶೋಧಿಸಿಕೊಡಲಿ. ನಾನು ದಾಖಲೆಗಳನ್ನು ತಿರುಚಿದ್ದು, ಮುಂದೆಯೂ ತಿರುಚುವ ಸಾಧ್ಯತೆ ಎಂಬುದು ಸರ್ಕಾರದ ವಾದ. ನಾನಿದ್ದಾಗ ಕಪಾಟಿನಲ್ಲಿ ದಾಖಲೆ ಇದ್ದವು. ಈಗ ಅವು ಅಲ್ಲಿಲ್ಲ. ಅದೆಲ್ಲವನ್ನೂ ಬಂಡಲ್ ಮಾಡಿದ್ದಾರೆ. ನಾನು ಮುಟ್ಟಿದರೆ ಬೇರೇನೋ ಮಾಡಿದ್ದಾರೆ ಎಂದು ಹೇಳುವ ಸಾಧ್ಯತೆ ಇದೆ. ಅಲ್ಲಿಗೆ ಹೋಗಿ, ಯಾವ ಪತ್ರ ಎಂದು ಹೇಳುತ್ತೇನೆ. ಅವರು ತೆಗೆದುಕೊಡಬೇಕು. ಹಿಂದೆ ಒಮ್ಮೆ ಹೋಗಿದ್ದೆ. ನನ್ನನ್ನು ಬಂಧಿಸಲು ಬೇಕಾದ ಎಲ್ಲಾ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ದಾಖಲೆಗಳನ್ನು ಕಳವು ಮಾಡಲಾಗಿದೆ ಎಂದು ಅವರು ಆರೋಪಿಸಬಹುದು” ಎಂದರು.
ಇದಕ್ಕೆ ಪೀಠವು “ನೀವು ಅಲ್ಲಿ ಹೋಗದಿದ್ದರೆ ಆ ಪತ್ರಗಳು ಹೇಗೆ ಸಿಗುತ್ತವೆ? ಅದು ಎಲ್ಲಿದೆ ಎಂಬುದು ಸರ್ಕಾರಕ್ಕೆ ಏನು ಗೊತ್ತಿದೆ. ಸರ್ಕಾರದ ಉಸ್ತುವಾರಿಯಡಿ ನೀವು ಅಲ್ಲಿಗೆ ಹೋಗಿ ನಿಮ್ಮ ದಾಖಲೆ ಪಡೆಯಬಹುದು. ಶೋಧಿಸಿ ನಿಮಗೆ ಕೊಡಿ ಎಂದು ಸರ್ಕಾರಕ್ಕ ನಿರ್ದೇಶಿಸಿಲಾಗದು. ಕಸಾಪದಲ್ಲಿ ವಿಡಿಯೋ ಕ್ಯಾಮೆರಾ ಇದೆಯಲ್ಲವೇ? ಅದರಲ್ಲಿ ರೆಕಾರ್ಡ್ ಆಗುವುದಿಲ್ಲವೇ ಅದನ್ನು ನೀವು ಬಳಕೆ ಮಾಡಬಹುದಲ್ಲವೇ?” ಎಂದಿತು.
ಇದಕ್ಕೂ ಮುನ್ನ, ಎಎಜಿ ಪ್ರತಿಮಾ ಅವರು “ಆಡಳಿತಾಧಿಕಾರಿಯ ಅವಧಿಯನ್ನು ಬೇರೊಂದು ಆದೇಶದ ಮೂಲಕ ವಿಸ್ತರಿಸಲಾಗಿದೆ ಎಂಬುದನ್ನು ಮೆಮೊದಲ್ಲಿ ತಿಳಿಸಿದ್ದೇವೆ. ಆದೇಶದಲ್ಲಿ ಮಾಡಿರುವ ಆಕ್ಷೇಪಾರ್ಹ ಪದಗಳು ತೆಗೆಯಲು ಕೋರಿ ಅರ್ಜಿದಾರರು ಅರ್ಜಿ ಸಲ್ಲಿಸಿದ್ದಾರೆ” ಎಂದರು.
ಇದಕ್ಕೆ ಪಾಟೀಲ್ ಅವರು “ಆಕ್ಷೇಪಾರ್ಹ ಪದ ತೆಗೆಯಲು ಕೋರಿರುವ ಅರ್ಜಿಯ ಬಗ್ಗೆ ಈಗ ಪ್ರಸ್ತಾಪಿಸುವುದಿಲ್ಲ” ಎಂದರು.
ಈ ನಡುವೆ ಪೀಠವು ಎಎಜಿಯನ್ನು ಕುರಿತು “ಸೊಸೈಟಿ ಏನು ಮಾಡಿದೆ?” ಎಂದಿತು. ಈ ಹಂತದಲ್ಲಿ ಪಾಟೀಲ್ ಅವರು “ಕಸಾಪದಲ್ಲಿ ಅಕ್ರಮದ ತನಿಖೆಗೆ ಆದೇಶಿಸಿರುವುದಕ್ಕೆ ತಡೆ ನೀಡುವಂತೆ ಕೋರಿರುವ ಅರ್ಜಿಯಲ್ಲಿ ತಿದ್ದುಪಡಿ ಕೋರಿ ಫೆಬ್ರವರಿ 2ರಂದು ಮನವಿ ಸಲ್ಲಿಸಲಾಗಿದೆ” ಎಂದರು.
ಇದನ್ನು ಆಲಿಸಿದ ಪೀಠವು ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಸೂಚಿಸಿ, ಅರ್ಜಿಯ ಪ್ರತಿಯನ್ನು ಸರ್ಕಾರಕ್ಕೆ ಒದಗಿಸಲು ನಿರ್ದೇಶಿಸಿ, ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿತು.