ಉನ್ನತ ಶಿಕ್ಷಣ ಪಡೆಯಲು ವೈದ್ಯರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ ಸರ್ಕಾರ: ನ್ಯಾಯಾಂಗ ನಿಂದನೆ ಅರ್ಜಿ ಇತ್ಯರ್ಥ

ಅರ್ಜಿದಾರ ವೈದ್ಯರನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಏಕಸದಸ್ಯ ಪೀಠ ಆದೇಶ ಮಾಡಿ ಎರಡು ತಿಂಗಳು ಕಳೆಯುತ್ತ ಬಂದರೂ, ಅದನ್ನು ಪಾಲನೆ ಮಾಡದ ಸರ್ಕಾರವನ್ನು ಗುರುವಾರವಷ್ಟೇ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
CJ Vibhu Bhakru J̤̤.CM Joshi
CJ Vibhu Bhakru J̤̤.CM Joshi
Published on

ಸರ್ಕಾರಿ ಕೋಟಾದಡಿ ವೈದ್ಯ ಪದವಿ (ಎಂಬಿಬಿಎಸ್) ಪೂರೈಸಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಉನ್ನತ ಶಿಕ್ಷಣ ಪಡೆಯಲು ಸೇವೆಯಿಂದ ಬಿಡುಗಡೆಗೊಳಿಸುವಂತೆ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಸರ್ಕಾರ ಪಾಲನೆ ಮಾಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಹಾಗೂ ಆಯುಕ್ತ ಕೆ ಬಿ ಶಿವಕುಮಾರ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಕೈಬಿಟ್ಟಿದೆ.

ಉನ್ನತ ವ್ಯಾಸಂಗಕ್ಕಾಗಿ ತಮ್ಮನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಏಕಸದಸ್ಯ ಪೀಠ 2025ರ ಜೂನ್ 24ರಂದು ಹೊರಡಿಸಿದ್ದ ಆದೇಶವನ್ನು ಆರೋಗ್ಯ ಇಲಾಖೆ ಪಾಲಿಸಿಲ್ಲ ಎಂದು ಆರೋಪಿಸಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬಾಚಿಗೊಂಡನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಡಿಎಂಒ (ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿ) ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಎಂ ಶಿವರಾಜ ಸೇರಿ ರಾಜ್ಯದ ವಿವಿಧ ಕಡೆ ಸೇವೆ ಸಲ್ಲಿಸಿರುವ 22 ವೈದ್ಯರು ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿಯ ಕಳೆದ ವಿಚಾರಣೆ ವೇಳೆ ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ, ಆಯುಕ್ತ ಕೆ ಬಿ ಶಿವಕುಮಾರ್ ಅವರು ಖುದ್ದು ಹಾಜರಿದ್ದರು. ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು, ಅರ್ಜಿದಾರ ವೈದ್ಯರನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಏಕಸದಸ್ಯ ಪೀಠ ಹೊರಡಿಸಿರುವ ಆದೇಶವನ್ನು ಪಾಲನೆ ಮಾಡಲಾಗಿದೆ ಎಂದು ತಿಳಿಸಿದರಲ್ಲದೆ, ಈ ಸಂಬಂಧ ಶುಕ್ರವಾರ ಹೊರಡಿಸಲಾಗಿದ್ದ ಆದೇಶ ಪ್ರತಿಯನ್ನು ಪೀಠಕ್ಕೆ ಒದಗಿಸಿದರು.

ಇದನ್ನು ದಾಖಲಿಸಿಕೊಂಡ ಪೀಠವು ಹರ್ಷ ಗುಪ್ತ ಹಾಗೂ ಕೆ ಬಿ ಶಿವಕುಮಾರ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಬಿಟ್ಟು, ಅರ್ಜಿ ಇತ್ಯರ್ಥಪಡಿಸಿತು. ಅರ್ಜಿದಾರರ ಪರವಾಗಿ ವಕೀಲ ಆರ್ ವಿಜಯ್ ಕುಮಾರ್ ವಾದ ಮಂಡಿಸಿದ್ದರು.

ಇದೇ ವಿಚಾರವಾಗಿ ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ 39 ನರ್ಸಿಂಗ್ ಅಧಿಕಾರಿಗಳು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನೂ ಸಹ ಪೀಠ ವಿಲೇವಾರಿ ಮಾಡಿದೆ.

ಗುರುವಾರವಷ್ಟೇ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅರ್ಜಿದಾರ ವೈದ್ಯರನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಏಕಸದಸ್ಯ ಪೀಠ ಆದೇಶ ಮಾಡಿ ಎರಡು ತಿಂಗಳು ಕಳೆಯುತ್ತ ಬಂದರೂ, ಅದನ್ನು ಪಾಲನೆ ಮಾಡದ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತಲ್ಲದೆ, ಸರ್ಕಾರದ ಈ ಧೋರಣೆಗೆ ಅಂತ್ಯ ಹಾಡಬೇಕಿದೆ. ಆದ್ದರಿಂದ, ಕೋರ್ಟ್ ಆದೇಶ ಪಾಲಿಸದೆ ಉದ್ದೇಶಪೂರ್ವಕ ಅಸಹಕಾರ ತೋರಿದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ, ಆಯುಕ್ತ ಕೆ ಬಿ ಶಿವಕುಮಾರ್ ವಿರುದ್ಧ ನ್ಯಾಯಾಂಗ ನಿಂದನೆಯಡಿ ಆರೋಪ ನಿಗದಿಪಡಿಸಲಾಗುವುದು. ಅದಕ್ಕಾಗಿ ಇಬ್ಬರೂ ಶುಕ್ರವಾರ ಮಧ್ಯಾಹ್ನ 2.30ಕ್ಕೆ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ತಾಕೀತು ಮಾಡಿತ್ತು.

Kannada Bar & Bench
kannada.barandbench.com