ಜಾತ್ಯತೀತ ಸಂರಚನೆಗೆ ಹಾನಿಯಾಗದಂತೆ ಸರ್ಕಾರದಿಂದ ಜವಾಬ್ದಾರಿ ನಿರ್ವಹಣೆ: ಹೈಕೋರ್ಟ್‌ಗೆ ಎಜಿ ವಿವರಣೆ

ಮುಂಬೈನ ಥಾಣೆ ನಿವಾಸಿ ಪ್ರಾಧ್ಯಾಪಕ ವಿನೀತ್ ನಾರಾಯಣ ನಾಯಕ್‌ (ಭಿಕುಮಾತ್ರೆ ಮುಂಬೈ ಚ ಡಾನ್‌ ಎಂದು ಟ್ವಿಟರ್‌ ಐಡಿ) ತಮ್ಮ ವಿರುದ್ಧದ ಸೈಬರ್‌ ಅಪರಾಧ ಪ್ರಕರಣ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ನಡೆಸಿತು.
Justice M Nagaprasanna
Justice M Nagaprasanna
Published on

“ರಾಜ್ಯದಲ್ಲಿ ಜಾತ್ಯತೀತ ಸಂರಚನೆಗೆ ಹಾನಿಯಾಗದಂತೆ ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸುತ್ತಿದೆ” ಎಂದು ಅಡ್ವೊಕೇಟ್‌ ಜನರಲ್‌ ಕರ್ನಾಟಕ ಹೈಕೋರ್ಟ್‌ಗೆ ಗುರುವಾರ ತಿಳಿಸಿದ್ದಾರೆ.

ಮುಂಬೈನ ಥಾಣೆ ನಿವಾಸಿ ಪ್ರಾಧ್ಯಾಪಕ ವಿನೀತ್ ನಾರಾಯಣ ನಾಯಕ್‌ ತಮ್ಮ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66ಸಿ ಮತ್ತು ಐಪಿಸಿ ಸೆಕ್ಷನ್ 153ಎ ಅಡಿ ದಾಖಲಾಗಿರುವ ಎಫ್‌ಐಆರ್‌ ಹಾಗೂ ದೂರನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. 

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ ಶೆಟ್ಟಿ ಅವರು “ಅರ್ಜಿದಾರ ವಿನೀತ್‌ ನಾರಾಯಣ ನಾಯಕ್ ಹಿಂದೂ–ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ ಬಿತ್ತುವ ರೀತಿಯಲ್ಲಿ ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ” ಎಂದು ಆಕ್ಷೇಪಿಸಿದರು.

ಇದಕ್ಕೆ ಆಕ್ಷೇಪಿಸಿದ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ಅವರು “ಅರ್ಜಿದಾರರು ಸ್ವಯಂ ಹೇಳಿಕೆ ನೀಡಿಲ್ಲ. ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದ ಹೇಳಿಕೆಗೆ ಪ್ರತಿಯಾಗಿ ಟ್ವೀಟ್‌ ಮಾಡಿದ್ದಾರೆ ಅಷ್ಟೇ. ಇದೆಲ್ಲವೂ ಸುದ್ದಿ ವಾಹಿನಿಗಳಲ್ಲಿ ವಿಸ್ತೃತವಾಗಿ ಪ್ರಸಾರವಾಗಿದೆ. ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಲಾಗಿ‌ತ್ತು. ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಕರಣದಲ್ಲಿ ಯಾವುದೇ ಹುರಳಿಲ್ಲ. ಆದ್ದರಿಂದ, ಎಫ್‌ಐಆರ್‌ ರದ್ದುಗೊಳಿಸಬೇಕು” ಎಂದು ಕೋರಿದರು.

ಈ ಮಧ್ಯೆ, ಪೀಠವು ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ ಬಿತ್ತಿರುವ ಘಟನೆ ಎಲ್ಲಿದೆ ತೋರಿಸಿ. ರಾಜ್ಯದ ಇಡೀ ಆಡಳಿತ ಒಬ್ಬ ವ್ಯಕ್ತಿಯ ಮೇಲೆ ಈ ರೀತಿ ಮುಗಿಬೀಳಬಾರದು. ಇಂತಹ ಸಂದರ್ಭದಲ್ಲಿ ಅವರಿಗೆ ರಕ್ಷಣೆ ನೀಡಬೇಕಾಗುತ್ತದೆ ಎಂದು ಅಡ್ವೊಕೇಟ್‌ ಜನರಲ್‌ ಅವರನ್ನು ಉದ್ದೇಶಿಸಿ ಹೇಳಿತು. ಅಲ್ಲದೇ, ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಆದೇಶಿಸಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಜೂನ್‌ 12ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚಲಾಗುತ್ತದೆ ಎಂಬರ್ಥದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ ಎಂದು ಆರೋಪಿಸಲಾದ ಹೇಳಿಕೆಯೊಂದನ್ನು ಗುರಿಯಾಗಿಸಿಕೊಂಡು ವಿನೀತ್‌ ನಾರಾಯಣ ನಾಯಕ್‌ ತಮ್ಮ ಎಕ್ಸ್‌ ಐಡಿ ‘ಭಿಕುಮಾತ್ರೆ (ಮೋದಿಯವರ ಕುಟುಂಬ) ಮುಂಬೈಚ ಡಾನ್‌’ ಖಾತೆಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡುವ ಭಾವಚಿತ್ರವನ್ನು ಪೋಸ್ಟ್‌ ಮಾಡಿ ಪ್ರತಿಕ್ರಿಯಿಸಿದ್ದರು.‌

ಅದರಲ್ಲಿ, “ಯಾವ ಉದಾರವಾದಿ ಕಾಂಗ್ರೆಸ್‌ ಪ್ರಣಾಳಿಕೆಯನ್ನು ಪ್ರತಿಪಾದಿಸುತ್ತಾರೆಯೋ ಅಂಥವರ ಮುಖಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯವರ ಈ ಹೇಳಿಕೆ ಎಸೆಯಿರಿ. ಹಿಂದೂಗಳು ಎಂದರೆ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳನ್ನೂ (ಎಸ್‌ಟಿ) ಒಳಗೊಂಡಿರುತ್ತದೆ. ಹಿಂದೂಗಳ ಸಂಪತ್ತು ಕಸಿದುಕೊಂಡು ಮುಸ್ಲಿಮರಿಗೆ ಹಂಚುವುದಾಗಿ ಕಾಂಗ್ರೆಸ್ ನೀಡಿರುವ ಹೇಳಿಕೆಯ ಹಿಂದೆ ಎಸ್‌ಸಿ ಮತ್ತು ಎಸ್‌ಟಿಗಳ ಸಂಪತ್ತು ಕೂಡಾ ಒಳಗೊಂಡಿದೆ” ಎಂದು ಟೀಕಿಸಿದ್ದರು.

ಈ ಸಂಬಂಧ ಬೆಂಗಳೂರಿನ ಸೈಬರ್ ಅಪರಾಧ ಠಾಣೆಯಲ್ಲಿ 2024ರ ಏಪ್ರಿಲ್‌ 29ರಂದು ದೂರು ದಾಖಲಾಗಿತ್ತು. ಸಾರ್ವಜನಿಕರಲ್ಲಿ ಹಿಂದೂ-ಮುಸ್ಲಿಮ್‌ ಸಮುದಾಯದಲ್ಲಿ ದ್ವೇಷ ಉಂಟು ಮಾಡುವ ದುರುದ್ದೇಶ ಇಟ್ಟುಕೊಂಡು ಸಮಾಜದಲ್ಲಿ ಅಶಾಂತಿ ಉಂಟು ಮಾಡಿ ಪಕ್ಷಕ್ಕೆ ಕೆಟ್ಟ ಹೆಸರು ಬರುವ ರೀತಿಯಲ್ಲಿ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66ಸಿ ಮತ್ತು ಐಪಿಸಿ ಸೆಕ್ಷನ್ 153ಎ ಅಡಿ ಎಫ್‌ಐಆರ್‌ ದಾಖಲಾಗಿದೆ.

Kannada Bar & Bench
kannada.barandbench.com