[ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯರ ನೇಮಕಾತಿ] ಸಾಂವಿಧಾನಿಕ ಹುದ್ದೆ ನೇಮಕದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ: ಹೈಕೋರ್ಟ್‌

ಯಾವುದೇ ಆರೋಪ ಮತ್ತು ನಿರಂಕುಶತ್ವ ಮತ್ತು ಸ್ವೇಚ್ಛೆಯಿಂದ ಅಧಿಕಾರ ಬಳಕೆ ಮಾಡಲಾಗಿದೆ ಎಂಬುದಕ್ಕೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಬಾರದು ಎಂದು ಕಿವಿಮಾತು ಹೇಳಿದ ನ್ಯಾಯಾಲಯ.
Karnataka HC and KPSC
Karnataka HC and KPSC

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ವಿಚಾರದಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ.

ಕೆಪಿಎಸ್‌ಸಿ ಅಧ್ಯಕ್ಷ ಮತ್ತು 11 ಮಂದಿ ಸದಸ್ಯರ ನೇಮಕಾತಿ ಆದೇಶ ರದ್ದುಪಡಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ ನರಸಿಂಹ ಮೂರ್ತಿ ಮತ್ತು ಶಶಿಪ್ರಸಾದ್ ಗಾಂಧಿ ಅವರು ಸಲ್ಲಿಸಿದ್ದ ಪ್ರತ್ಯೇಕ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ಇತ್ಯರ್ಥಪಡಿಸಿದೆ.

“ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ಹುದ್ದೆಗಳು ಉನ್ನತ ಮತ್ತು ಅತಿಸೂಕ್ಷ್ಮ ಸಾಂವಿಧಾನಿಕ ಹುದ್ದೆಗಳಾಗಿವೆ. ಅವುಗಳಿಗೆ ನೇಮಕ ಮಾಡುವ ವೇಳೆ ರಾಜ್ಯ ಸರ್ಕಾರ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಯಾವುದೇ ಆರೋಪ, ನಿರಂಕುಶತ್ವ ಮತ್ತು ಸ್ವೇಚ್ಛೆಯಿಂದ ಅಧಿಕಾರ ಬಳಕೆ ಮಾಡಲಾಗಿದೆ ಎಂಬುದಕ್ಕೆ ಅವಕಾಶ ಕಲ್ಪಿಸಬಾರದು. ಲೋಕಸೇವಾ ಆಯೋಗದ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ಪ್ರಕ್ರಿಯೆ ಕುರಿತಂತೆ ಪಂಜಾಬ್ ಸರ್ಕಾರ ಮತ್ತು ಸಲೀಲ್ ಸಬ್‌ಲೋಕ್ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಪಾಲಿಸಲು ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನ ನಡೆಸಬೇಕು” ಎಂದು ಆದೇಶದಲ್ಲಿ ಪೀಠ ನಿರ್ದೇಶಿಸಿದೆ.

“ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಗೆ ನಿರ್ದಿಷ್ಟ ನಿಯಮಗಳಿಲ್ಲ. ಆ ನಿಯಮಗಳನ್ನು ರೂಪಿಸುವವರೆಗೆ ಕೇಂದ್ರ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಪಿ ಸಿ ಹೋಟಾ ಅವರ ನೇತೃತ್ವದ ಸಮಿತಿ ಶಿಫಾರಸು ಮಾಡಿರುವ ಮಾಗಸೂರ್ಚಿಗಳನ್ನು ಪಾಲಿಸಬೇಕು. ಮಾರ್ಗಸೂಚಿಯಂತೆ ಅಧ್ಯಕ್ಷರ ನೇಮಕಾತಿ ಹಾಗೂ ಶೋಧನಾ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು” ಎಂಬ ಅರ್ಜಿದಾರರ ಮನವಿ ಕುರಿತು ಹೈಕೋರ್ಟ್ ಯಾವುದೇ ನಿರ್ದೇಶನವನ್ನು ನೀಡಿಲ್ಲ.

“ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ವೇಳೆ ಶೋಧನಾ ಸಮಿತಿ ರಚನೆ ಮಾಡಬೇಕು ಎಂಬ ಪಿ ಸಿ ಹೋಟಾ ಸಮಿತಿಯ ಶಿಫಾರಸನ್ನು ಕೈ ಬಿಡಲು ರಾಜ್ಯ ಸಚಿವ ಸಂಪುಟವು 2013ರ ಆಗಸ್ಟ್‌ 23ರಂದು ನಿರ್ಣಯ ಕೈಗೊಂಡಿದೆ. ಇದರಿಂದ 2021ರಲ್ಲಿ ಶಿವಶಂಕರ ಎಸ್. ಸಾಹುಕಾರ್ ಅವರನ್ನು ಸದಸ್ಯರಾಗಿ ನಂತರ ಅವರನ್ನೇ ಅಧ್ಯಕ್ಷರಾಗಿ ಹಾಗೂ ಡಾ.ಚಂದ್ರಕಾಂತ್ ಡಿ. ಶಿವಕೇರಿ ಸೇರಿದಂತೆ 11 ಮಂದಿ ಸದಸ್ಯರನ್ನು ನೇಮಿಸಿದ ವೇಳೆ ಹೋಟಾ ಸಮಿತಿ ಮಾರ್ಗಸೂಚಿ ಅನುಸರಿಸಬೇಕಿತ್ತು ಎಂಬ ನಿಯಮ ಪ್ರಚಲಿತದಲ್ಲಿ ಇರಲಿಲ್ಲ. ಹೀಗಾಗಿ, ಕೆಪಿಎಸ್‌ಸಿ ಅಧ್ಯಕ್ಷರ ಹಾಗೂ ಸದಸ್ಯರ ನೇಮಕಕ್ಕೆ ಹೋಟಾ ಸಮಿತಿಯ ಮಾರ್ಗಸೂಚಿ ಪಾಲಿಸಬೇಕು ಮತ್ತು ನಿರ್ದಿಷ್ಟ ನಿಯಮ ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು” ಎಂಬ ಅರ್ಜಿದಾರರ ಮನವಿ ಪರಿಗಣಿಸುವ ಅಗತ್ಯವಿಲ್ಲ ಎಂದು ಆದೇಶದಲ್ಲಿ ಪೀಠ ಅಭಿಪ್ರಾಯಪಟ್ಟಿದೆ.

ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಗೆ ನಿರ್ದಿಷ್ಟ ನಿಯಮಗಳನ್ನು ರೂಪಿಸಬೇಕು. ಆ ನಿಯಮಗಳನ್ನು ರೂಪಿಸುವವರೆಗೆ ಕೇಂದ್ರ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಪಿ ಸಿ ಹೋಟಾ ಅವರ ನೇತೃತ್ವದ ಸಮಿತಿ ಶಿಫಾರಸು ಮಾಡಿರುವ ಮಾಗಸೂರ್ಚಿಗಳನ್ನು ಪಾಲಿಸಬೇಕು ಎಂದು 2016ರಲ್ಲಿ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿತ್ತು. ಆದರೆ, ಹೋಟಾ ಸಮಿತಿ ಮಾರ್ಗಸೂಚಿಯಂತೆ ಶೋಧನಾ ಸಮಿತಿ ರಚಿಸದೆ ಮತ್ತು ಯಾವುದೇ ನಿಯಮ ರೂಪಿಸದೆ ರಾಜ್ಯ ಸರ್ಕಾರವು ಕೆಪಿಎಸ್‌ಎಸಿಗೆ ಸದಸ್ಯರನ್ನು ನೇಮಿಸಿದೆ. ಹೀಗಾಗಿ, ಕೆಪಿಎಸ್‌ಸಿ ಸದಸ್ಯರ ನೇಮಕಾತಿ ಆದೇಶ ರದ್ದುಪಡಿಸಬೇಕು. ಹೋಟಾ ಸಮಿತಿ ಅನುಸಾರ ಹೊಸದಾಗಿ ಸದಸ್ಯರನ್ನು ನೇಮಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂಬುದು ಅರ್ಜಿದಾರರ ಮನವಿಯಾಗಿತ್ತು.

ಅರ್ಜಿದಾರರ ಪರವಾಗಿ ವಕೀಲರಾದ ಆರ್‌ ಎ ದೇವ್‌ನಂದ್‌, ಹನುಮಂತಪ್ಪ ಹರವಿ ಬಿ. ಗೌಡ, ಎಸ್‌ ಉಮಾಪತಿ ವಾದಿಸಿದ್ದರು. ಸರ್ಕಾರದ ಪರವಾಗಿ ಅಂದಿನ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಅಂದಿನ ಸರ್ಕಾರಿ ವಕೀಲೆ ಪ್ರತಿಮಾ ಹೊನ್ನಾಪುರ, ಹಿರಿಯ ವಕೀಲ ವಿಕ್ರಂ ಹುಯಿಲಗೋಳ, ವಕೀಲರಾದ ವಿ ಸತೀಶ್‌ ಮತ್ತು ಬಸವರಾಜ್‌ ಗೊಡಚಿ ವಾದಿಸಿದ್ದರು.

Attachment
PDF
Shashi Prasad Gandhi and others Vs State of Karnataka.pdf
Preview
Kannada Bar & Bench
kannada.barandbench.com