ಹಿಂದಿನ ಬಿಜೆಪಿ ಸರ್ಕಾರವು ಜಾರಿಗೊಳಿಸಿರುವ ಸಂವಿಧಾನ ಬಾಹಿರ, ಬಹುತ್ವಕ್ಕೆ ವಿರುದ್ಧವಾದ ಎಲ್ಲಾ ನೀತಿಗಳನ್ನು ಮರು ಪರಿಶೀಲಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಠ್ಯ ಪುಸ್ತಕ ಪರಿಷ್ಕರಣೆ, ಗೋಹತ್ಯೆ, ಮತಾಂತರ ನಿಷೇಧ ಮಸೂದೆಗಳನ್ನು ಪರಿಷ್ಕರಣೆ ಮಾಡೇ ಮಾಡುತ್ತೇವೆ. ಯಾವೆಲ್ಲಾ ಮಸೂದೆಗಳಿಂದ ಕರ್ನಾಟಕದ ಪ್ರಗತಿಗೆ ತೊಂದರೆಯಾಗುತ್ತದೆಯೋ ಅವುಗಳನ್ನು ಮರುಪರಿಶೀಲಿಸಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.
ಇದರ ಜೊತೆಗೆ “ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಮಾನ ಕರ್ನಾಟಕ ರೂಪಿಸಲು ಬದ್ಧವಾಗಿದ್ದು, ಈ ನೆಲೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಯಾವುದೇ ಮಸೂದೆಯನ್ನು ಪರಿಶೀಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ರಾಜ್ಯ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವ, ಹೂಡಿಕೆಗೆ ಮಾರಕವಾಗಿರುವ, ಉದ್ಯೋಗ ಸೃಷ್ಟಿಸದ, ಅಸಾಂವಿಧಾನಿಕವಾದ ಹಾಗೂ ವ್ಯಕ್ತಿಗತ ಹಕ್ಕು ಉಲ್ಲಂಘಿಸುವ ಮಸೂದೆಗಳನ್ನು ಮರುಪರಿಶೀಲಿಸಲಾಗುವುದು” ಎಂದೂ ಅವರು ಟ್ವೀಟ್ ಮಾಡಿದ್ದಾರೆ.