ಬೆಂಗಳೂರಿನ ಕೆ ಆರ್ ವೃತ್ತದಲ್ಲಿರುವ ಲೋಕೋಪಯೋಗಿ ಇಲಾಖೆ ಕಟ್ಟಡದ ಆವರಣದಲ್ಲಿ ಹೋಟೆಲ್ ಆರಂಭಿಸುವುದಕ್ಕೆ ನೀಡಲಾಗಿದ್ದ ಅನುಮತಿಯನ್ನು ಹಿಂಪಡೆಯಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ಗುರುವಾರ ರಾಜ್ಯ ಸರ್ಕಾರ ತಿಳಿಸಿದೆ.
ಸಾಮಾಜಿಕ ಹೋರಾಟಗಾರ ಸಾಯಿದತ್ತಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಲೋಕೋಪಯೋಗಿ ಇಲಾಖೆ ಕಟ್ಟಡ ಆವರಣದಲ್ಲಿ ‘ಸಿಂಪಲ್ ತಿಂಡಿ’ ಹೆಸರಿನಲ್ಲಿ ಹೋಟೆಲ್‌ಗೆ ಅನುಮತಿ ನೀಡಲಾಗಿತ್ತು. ಆದರೆ, ಆ ಆವರಣದಲ್ಲಿ ಇಲಾಖೆ ಕಚೇರಿಗಳಿರುವುದರಿಂದ ಜನ ದಟ್ಟಣೆ ಉಂಟಾಗಿ ವಾಹನಗಳ ನಿಲುಗಡೆಗೆ ತೊಂದರೆಯಾಗಲಿದೆ ಎಂಬ ಉದ್ದೇಶದಿಂದ ಹೋಟೆಲ್ ಆರಂಭಕ್ಕೆ ನೀಡಲಾಗಿದ್ದ ಅನುಮೋದನೆ ರದ್ದುಪಡಿಸಲಾಗಿದೆ ಎಂದು ತಿಳಿಸಿದರು.
ಇದನ್ನು ದಾಖಲಿಸಿಕೊಂಡ ನ್ಯಾಯಾಲಯವು ಅರ್ಜಿ ಕುರಿತು ಹೆಚ್ಚಿನ ವಿಚಾರಣೆ ನಡೆಸಿ ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥ ಪಡಿಸಿತು.
ಕೆ ಆರ್ ವೃತ್ತದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿ ಆವರಣ ವ್ಯಾಪ್ತಿಯ 210 ಚದರ ಅಡಿ ಜಾಗದಲ್ಲಿ ‘ಸಿಂಪಲ್ ತಿಂಡಿʼ ಹೆಸರಿನಲ್ಲಿ ಹೋಟೆಲ್ ಆರಂಭಿಸಲು ಎನ್ ಜಿ ಅಭಿಷೇಕ್ ಎಂಬುವರಿಗೆ ಅನುಮತಿ ನೀಡಲಾಗಿತ್ತು. ಜಾಗವನ್ನು ಮಾಸಿಕ 36,750 ರೂಪಾಯಿ ಬಾಡಿಗೆಯಂತೆ 10 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ತೀರ್ಮಾನಿಸಲಾಗಿತ್ತು. ಇದಕ್ಕೆ ಆಕ್ಷೇಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರು, ಟೆಂಡರ್ ಕರೆಯದೆ ಹೋಟೆಲ್ ಆರಂಭಿಸುವುದಕ್ಕೆ ಅನುಮತಿ ನೀಡಲಾಗಿದೆ. ಇದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯಿದೆಯ ಸ್ಪಷ್ಟ ಉಲ್ಲಂಘನೆ ಎಂದು ಆಕ್ಷೇಪಿಸಿದ್ದರು.