ಖಾಸಗಿಯಾಗಿ ಪಾಠ ಹೇಳಿಕೊಡುವ ಅಥವಾ ಇನ್ನಾವುದಾದರೂ ಉದ್ಯಮ, ವ್ಯವಹಾರಗಳಲ್ಲಿ ತೊಡಗುವ ಪ್ರವೃತ್ತಿ ಸರ್ಕಾರಿ ಶಿಕ್ಷಕರಲ್ಲಿ ಹೆಚ್ಚುತ್ತಿರುವ ಬಗ್ಗೆ ಇತ್ತೀಚೆಗೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ತೀವ್ರ ಖಂಡಿಸಿದೆ [ಕೆ. ರಾಧಾ ವರ್ಸಸ್ ಮುಖ್ಯ ಶಿಕ್ಷಣಾಧಿಕಾರಿ].
ಶಿಕ್ಷಕರು ದುರಾಸೆಯನ್ನು ಬೆಳೆಸಿಕೊಂಡಿರುವುದರಿಂದ ಅವರಲ್ಲಿ ಈ ಪಿಡುಗು ಕ್ಯಾನ್ಸರ್ ರೀತಿಯಲ್ಲಿ ಹಬ್ಬುತ್ತಿದ್ದು, ಇದು ದುರ್ವರ್ತನೆಯಾಗಿದೆ ಎಂದು ನ್ಯಾ. ಎಸ್ ಎಂ ಸುಬ್ರಮಣಿಯಂ ಅವರಿದ್ದ ಪೀಠ ಹೇಳಿತು.
"ಶಿಕ್ಷಕರು ಹಣವನ್ನು ಗಳಿಸಬೇಕೆನ್ನುವ ದುರಾಸೆ ಬೆಳೆಸಿಕೊಂಡಿರುವುದರಿಂದ ಖಾಸಗಿ ಪಾಠದಂತಹ ಅರೆಕಾಲಿಕ ವೃತ್ತಿ ಮತ್ತು ವ್ಯವಹಾರಗಳಲ್ಲಿ ತೊಡಗಿಕೊಳ್ಳುವ ಪ್ರವೃತ್ತಿ ಕ್ಯಾನ್ಸರ್ ರೀತಿಯಲ್ಲಿ ವ್ಯಾಪಿಸುತ್ತಿದೆ. ಇಂತಹ ದುರ್ವರ್ತನೆಗೆ ಅನುವು ಮಾಡಿದರೆ ಶಿಕ್ಷಕರಿಂದ ತಮ್ಮ ಕರ್ತವ್ಯ ನಿರ್ವಹಣೆಯೆಡೆಗೆ ಶ್ರದ್ಧೆಯನ್ನಾಗಲಿ, ಉತ್ತಮ ಸಾಮರ್ಥ್ಯವನ್ನಾಗಲಿ ಸರ್ಕಾರವು ನಿರೀಕ್ಷಿಸಲಾಗದು," ಎಂದು ನ್ಯಾಯಾಲಯವು ಹೇಳಿತು.
ವಿದ್ಯಾರ್ಥಿಗಳ ಹಿತಾಸಕ್ತಿ ಹಾಗೂ ಶೈಕ್ಷಣಿಕ ವ್ಯವಸ್ಥೆಯ ದೃಷ್ಟಿಯಿಂದ ಇಂತಹ ದುರ್ವರ್ತನೆಯನ್ನು ನೋಡಬೇಕಿದೆ ಎಂದು ನ್ಯಾಯಾಲಯ ಹೇಳಿತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಸ್ವಪ್ರೇರಣೆಯಿಂದ ಪ್ರಕರಣದಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನು ಸೇರಿಸಿತು. ಆ ಮೂಲಕ ಶಿಕ್ಷಕರ ದುರ್ವರ್ತನೆಗೆ ಲಗಾಮು ಹಾಕುವ ನ್ಯಾಯಾಲಯದ ನಿರ್ದೇಶನಗಳನ್ನು ಜಾರಿಗೊಳಿಸಲು ಅನುವಾಗುವಂತೆ ಮಾಡಿತು.
ಖಾಸಗಿ ಪಾಠ ಮಾಡುತ್ತಿರುವ ಶಿಕ್ಷಕರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ನ್ಯಾಯಾಲಯವು ಶಿಕ್ಷಕರ ನಡತೆಯ ಮೇಲೆ ನಿಗಾ ಇರಿಸುವ ಸಲುವಾಗಿ ನಿಯಮಾವಳಿಗಳನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು.