Karnataka High Court
Karnataka High Court

ತಡೆ ರಹಿತ ಸಂಚಾರಕ್ಕಾಗಿ 3,368 ಆಂಬ್ಯುಲನ್ಸ್‌ಗಳಿಗೆ ಜಿಪಿಎಸ್ ಅಳವಡಿಕೆ: ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ವಿವರಣೆ

ಸರ್ಕಾರ ಮಾಡುತ್ತಿರುವ ಕೆಲಸ ತೃಪ್ತಿಕರವಾಗಿದೆ. ಪ್ರಕರಣದಲ್ಲಿ ಸರ್ಕಾರ ಪೂರಕವಾಗಿ ಸ್ಪಂದಿಸುತ್ತಿರುವುದನ್ನು ನ್ಯಾಯಾಲಯ ಪರಿಗಣಿಸಿದೆ. ಆದರೆ, ಎಲ್ಲಾದಕ್ಕೂ ಸರ್ಕಾರವನ್ನೇ ಹೊಣೆ ಮಾಡಲಾಗುವುದಿಲ್ಲ ಎಂದಿರುವ ನ್ಯಾಯಾಲಯ.

ಆಂಬ್ಯುಲನ್ಸ್‌ಗಳ ತಡೆ ರಹಿತ ಸಂಚಾರಕ್ಕೆ ಅನುವು ಮಾಡಿಕೊಡಲು ಈವರೆಗೂ ಒಟ್ಟು 3,368 ಆಂಬುಲೆನ್ಸ್‌ಗಳಿಗೆ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ವ್ಯವಸ್ಥೆ ಅಳವಡಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದೆ.

ರಾಜ್ಯದಲ್ಲಿರುವ ಎಲ್ಲಾ ಆಂಬುಲೆನ್ಸ್‌ಗಳಿಗೆ ಜಿಪಿಎಸ್ ಅಳವಡಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ‘ಭಾರತ್ ಪುನರುತ್ಥಾನ ಟ್ರಸ್ಟ್’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಆಂಬ್ಯುಲನ್ಸ್‌ಗಳು ತಡೆ ರಹಿತವಾಗಿ ಸಂಚರಿಸಲು ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಂಬುಲೆನ್ಸ್‌ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಬೇಕು ಎಂದು ನವೆಂಬರ್‌ 8ರಂದು ಹೈಕೋರ್ಟ್ ನೀಡಿರುವ ಆದೇಶದ ಅನುಪಾಲನಾ ವರದಿಯನ್ನು ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ಪ್ರತಿಮಾ ಹೊನ್ನಾಪುರ ಪೀಠಕ್ಕೆ ಸಲ್ಲಿಸಿದರು.

ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರಕ್ಕೆ ಸೇರಿದ 12,107 ಆಂಬ್ಯುಲನ್ಸ್‌ಗಳಿವೆ. ಅವುಗಳನ್ನು ಸರ್ಕಾರ ತಪಾಸಣೆ ನಡೆಸಿದಾಗ 3,368ಗಳಿಗೆ ಮಾತ್ರ ಜಿಪಿಎಸ್ ಅಳವಡಿಸಿರುವುದು ಕಂಡುಬದಿದೆ. ಉಳಿದ ಆಂಬ್ಯುಲನ್ಸ್‌ಗಳಿಗೂ ಜಿಪಿಎಸ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಇನ್ನು ಸಂಚರಿಸುವ ಮಾರ್ಗದ ಕುರಿತು ಸಂಚಾರ ದಟ್ಟಣೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಎಲ್ಲಾ ಆಂಬ್ಯುಲನ್ಸ್‌ಗಳ ಚಾಲಕರಿಗೆ ಮಾಹಿತಿ ನೀಡಲಾಗಿದೆ. ಅದಕ್ಕಾಗಿ ವಿಶೇಷ ಸಹಾಯವಾಣಿ ಸಂಖ್ಯೆಯನ್ನೂ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

ಅಲ್ಲದೆ, ಸಂಯೋಜಿತ ಆಂಬುಲೆನ್ಸ್‌ ಸೇವೆಗೆ ಒದಗಿಸಲು ಟೆಂಡರ್ ಕರೆಯಲಾಗಿತ್ತು. ಆದರೆ, ಟೆಂಡರ್‌ಗೆ ಈವರೆಗೂ ಯಾವುದೇ ಬಿಡ್ ಸ್ವೀಕರಿಸಿಲ್ಲ. ಆದ್ದರಿಂದ, ಮುಂದಿನ 15 ದಿನಗಳಲ್ಲಿ ಹೊಸದಾಗಿ ಟೆಂಡರ್ ಅಧಿಸೂಚನೆಯನ್ನು ಹೊರಡಿಸಲು ಸರ್ಕಾರ ಸೂಚಿಸಿದೆ ಎಂದು ಮಾಹಿತಿ ನೀಡಿದರು.

Also Read
ಆಂಬ್ಯುಲನ್ಸ್‌ಗಳಲ್ಲಿ ಜಿಪಿಎಸ್‌ ಸಾಧನ ಅಳವಡಿಸಲು ತಯಾರಕರಿಗೆ ಹೈಕೋರ್ಟ್‌ ಸಲಹೆ

ಇದನ್ನು ಪರಿಗಣಿಸಿದ ಪೀಠವು ಸರ್ಕಾರವು ಪ್ರಕರಣವನ್ನು ತುರ್ತಾಗಿ ಪರಿಗಣಿಸಿ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ನ್ಯಾಯಾಲಯ ನಿರೀಕ್ಷಿಸಿದೆ. 15 ದಿನ ಅವಧಿಗೆ ಕಾಯದೆ ಟೆಂಡರ್‌ಗೆ ಅನುಮೋದನೆ ನೀಡಬೇಕು. ಸಹಾಯವಾಣಿ ಸಂಖ್ಯೆಯನ್ನು ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ನೀಡಬೇಕು. ಆ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆಂಬ್ಯುಲನ್ಸ್‌ ಚಾಲಕರ ದತ್ತಾಂಶ ಪಡೆದುಕೊಂಡು ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಆಂಬುಲೆನ್ಸ್‌ ಸಂಚರಿಸುವ ಮಾರ್ಗದಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಪೊಲೀಸರಿಗೆ ಸಹಾಯವಾಗುತ್ತದೆ. ಹುಸಿ ಕರೆಗಳನ್ನು ಪರಿಶೀಲನೆ ಮಾಡಲು ಇದು ಸಹಾಯವಾಗುತ್ತದೆ ಎಂದರು.

ಅಲ್ಲದೆ, ಸರ್ಕಾರ ಮಾಡುತ್ತಿರುವ ಕೆಲಸ ತೃಪ್ತಿಕರವಾಗಿದೆ. ಪ್ರಕರಣದಲ್ಲಿ ಸರ್ಕಾರ ಪೂರಕವಾಗಿ ಸ್ಪಂದಿಸುತ್ತಿರುವುದನ್ನು ನ್ಯಾಯಾಲಯ ಪರಿಗಣಿಸಿದೆ. ಆದರೆ, ಎಲ್ಲ ವಿಚಾರಗಳಿಗೂ ಸರ್ಕಾರವನ್ನೇ ಹೊಣೆ ಮಾಡಲಾಗುವುದಿಲ್ಲ. ನಾಗರಿಕರೂ ಸಹ ಆಂಬ್ಯುಲನ್ಸ್‌ಗಳು ಬಂದಾಗ ಅವುಗಳ ಸಂಚಾರಕ್ಕೆ ದಾರಿ ಮಾಡಿಕೊಡಬೇಕು ಎಂದು ಅಭಿಪ್ರಾಯಪಟ್ಟು ಅರ್ಜಿ ವಿಚಾರಣೆಯನ್ನು ಜನವರಿ 11ಕ್ಕೆ ಮುಂದೂಡಿತು.

Kannada Bar & Bench
kannada.barandbench.com