ಜಿಬಿಎ ಚುನಾವಣೆ: ಕ್ಷೇತ್ರ ಪುನರ್‌ ವಿಂಗಡಣೆ ಅಂತಿಮ ಅಧಿಸೂಚನೆ ಪ್ರಕಟಿಸಲು ನ.15ರವರೆಗೆ ಕಾಲಾವಕಾಶ ಕಲ್ಪಿಸಿದ ಸುಪ್ರೀಂ

ನವೆಂಬರ್‌ 15ರ ಒಳಗೆ ಕ್ಷೇತ್ರ ಪುನರ್‌ ವಿಂಗಡಣೆಯ ಅಂತಿಮ ಅಧಿಸೂಚನೆ ಮತ್ತು ಆನಂತರ ಡಿಸೆಂಬರ್‌ 15ರ ಒಳಗೆ ವಾರ್ಡ್‌ ಮೀಸಲಾತಿ ಅಂತಿಮ ಅಧಿಸೂಚನೆ ಪ್ರಕಟಿಸಲು ರಾಜ್ಯ ಸರ್ಕಾರಕ್ಕೆ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್‌.
ಜಿಬಿಎ ಚುನಾವಣೆ: ಕ್ಷೇತ್ರ ಪುನರ್‌ ವಿಂಗಡಣೆ ಅಂತಿಮ ಅಧಿಸೂಚನೆ ಪ್ರಕಟಿಸಲು ನ.15ರವರೆಗೆ ಕಾಲಾವಕಾಶ ಕಲ್ಪಿಸಿದ ಸುಪ್ರೀಂ
Published on

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಎಲ್ಲಾ ಐದು ಪಾಲಿಕೆಗಳ ಕ್ಷೇತ್ರ ಪುನರ್‌ ವಿಂಗಡಣೆಗೆ ಅಂತಿಮ ಅಧಿಸೂಚನೆ ಪ್ರಕಟಿಸಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ 15 ದಿನಗಳ ಕಾಲಾವಕಾಶ ನೀಡಿದೆ.

ಜಿಬಿಎ ಚುನಾವಣೆ ಸಂಬಂಧ ಕಾಂಗ್ರೆಸ್‌ ಮುಖಂಡ ಎಂ ಶಿವರಾಜು ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌, ಉಜ್ಜಲ್‌ ಭುಯಾನ್‌ ಮತ್ತು ಜೋಯಮಲ್ಯ ಬಾಗ್ಚಿ ಅವರ ನೇತೃತ್ವದ ತ್ರಿಸದಸ್ಯ ಪೀಠ ನಡೆಸಿತು.

ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಮತ್ತು ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಅಧಿಕಾರಿಗಳನ್ನು ನೇಮಿಸಿದ್ದರಿಂದ ಕ್ಷೇತ್ರ ಪುನರ್‌ ವಿಂಗಡಣೆ ಪ್ರಕ್ರಿಯೆ ಅಧಿಸೂಚನೆ ಪ್ರಕಟಿಸಲಾಗಿಲ್ಲ. ಈಗ ಎಲ್ಲಾ ಸಿದ್ಧತೆಗಳಾಗಿದ್ದು, ಇನ್ನು ನವೆಂಬರ್‌ 15ರೊಳಗೆ ಕ್ಷೇತ್ರ ಪುನರ್‌ ವಿಂಗಡಣೆಯ ಅಂತಿಮ ಅಧಿಸೂಚನೆ ಮತ್ತು ಆನಂತರ ಡಿಸೆಂಬರ್‌ 15ರ ಒಳಗೆ ವಾರ್ಡ್‌ ಮೀಸಲಾತಿ ಅಂತಿಮ ಅಧಿಸೂಚನೆ ಪ್ರಕಟಿಸಲಾಗುವುದು” ಎಂದರು.

ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ಆಯೋಗವು ಚುನಾವಣಾ ಪ್ರಕ್ರಿಯೆ ಆರಂಭಿಸಿದ್ದು, ಜಿಲ್ಲಾ ಮತ್ತು ಹೆಚ್ಚುವರಿ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅದಾಗ್ಯೂ, ಚುನಾವಣೆ ನಡೆಸಲು ಆಯೋಗಕ್ಕೆ ಎರಡರಿಂದ ಮೂರು ತಿಂಗಳು ಬೇಕಾಗುತ್ತದೆ” ಎಂದರು.

ಅರ್ಜಿದಾರರ ಪರ ವಕೀಲರು “ಬಿಬಿಎಂಪಿಗೆ ಚುನಾವಣೆ ನಡೆದು ಹಲವು ವರ್ಷಗಳಾಗಿವೆ. ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ” ಎಂದರು.

Also Read
ಬಿಬಿಎಂಪಿ ಚುನಾವಣೆ ನಡೆಸಲು ಕಾಲಾವಕಾಶ ವಿಸ್ತರಣೆ ಕೋರಿಕೆ: ಜನವರಿ 9ಕ್ಕೆ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಇದನ್ನು ಆಲಿಸಿದ ಪೀಠವು “ಕ್ಷೇತ್ರ ಪುನರ್‌ ವಿಂಗಡಣೆ ಅಂತಿಮ ಅಧಿಸೂಚನೆ ಪ್ರಕಟಿಸಲು ನವೆಂಬರ್‌ 15ರವರೆಗೆ ಮತ್ತು ಆನಂತರ ವಾರ್ಡ್‌ ಮೀಸಲಾತಿ ಪ್ರಕಟಿಸಲು ಡಿಸೆಂಬರ್‌ 15ರವರೆಗೆ ರಾಜ್ಯ ಸರ್ಕಾರಕ್ಕೆ ಕಾಲಾವಕಾಶ ಕಲ್ಪಿಸಿ ನ್ಯಾಯಾಲಯವು ಆದೇಶ ಮಾಡಿ, ವಿಚಾರಣೆ ಮುಂದೂಡಿತು.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ಪಶ್ಚಿಮ ಮತ್ತು ಬೆಂಗಳೂರು ಪೂರ್ವ ಮಹಾನಗರ ಪಾಲಿಕೆಗಳನ್ನು ರಾಜ್ಯ ಸರ್ಕಾರ ರೂಪಿಸಿದ್ದು, ಅವುಗಳಿಗೆ ಚುನಾವಣೆ ನಡೆಸಲು ಸಿದ್ಧತೆ ನಡೆಸಿದೆ.

Kannada Bar & Bench
kannada.barandbench.com