ಪ್ರಸಕ್ತ ವರ್ಷ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸ್ಥಾಪನೆ ಇಲ್ಲ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

“ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಜಾರಿ ಮುಂದೂಡಲಾಗಿದೆ. ಈ ವರ್ಷ ಬಿಜಿಎ ಸ್ಥಾಪನೆ ಇಲ್ಲ. ಐದು ಪಾಲಿಕೆಗಳಿಗೆ ಜನವರಿ ವೇಳೆಗೆ ಚುನಾವಣೆ ಸಾಧ್ಯತೆ ಇದೆ. ಅಲ್ಲಿಯವರೆಗೆ ಬಿಬಿಎಂಪಿ ಆಡಳಿತವೇ ಮುಂದುವರಿಯಲಿದೆ” ಎಂದು ಎಜಿ ಪೀಠಕ್ಕೆ ತಿಳಿಸಿದರು.
BBMP and Karnataka HC
BBMP and Karnataka HC
Published on

“ಪ್ರಸಕ್ತ ವರ್ಷ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸ್ಥಾಪನೆ ಇಲ್ಲ. ಹೊಸದಾಗಿ ರಚನೆಯಾಗಲಿರುವ ಐದು ಪಾಲಿಕೆಗಳಿಗೆ ಚುನಾವಣೆ ನಡೆಯುವವರೆಗೆ ಬಿಬಿಎಂಪಿ ಆಡಳಿತವೇ ಮುಂದುವರಿಯಲಿದೆ” ಎಂದು ಅಡ್ವೊಕೇಟ್‌ ಜನರಲ್‌ ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಕಟ್ಟಡ ಬೈಲಾ ಉಲ್ಲಂಘನೆ ಪ್ರಶ್ನಿಸಿ ಬಿಬಿಎಂಪಿಯ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ (ಎಇಇ) ನೀಡಿರುವ ನೋಟಿಸ್‌ ಪ್ರಶ್ನಿಸಿ ಸಿ ವಿ ರಾಮನ್‌ ನಗರದ ಮುನಿವೆಂಕಟಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ಏಕಸದಸ್ಯ ಪೀಠಕ್ಕೆ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಈ ಸ್ಪಷ್ಟನೆ ನೀಡಿದರು.

ಅರ್ಜಿದಾರರ ಪರ ವಕೀಲರು “ಸದ್ಯ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಕುರಿತು ಅಧಿಸೂಚನೆ ಹೊರಡಿಸಿರುವ ಕಾರಣ, ಪಾಲಿಕೆಯ ಎಇಇಗೆ ನೋಟಿಸ್‌ ನೀಡಿರುವ ಅಧಿಕಾರವಿಲ್ಲ. ಹೀಗಾಗಿ, ಸದ್ಯ ನೀಡಿರುವ ನೋಟಿಸ್‌ ಕಾನೂನು ಬಾಹಿರವಾಗಿದ್ದು, ಅದನ್ನು ರದ್ದುಗೊಳಿಸಬೇಕು” ಎಂದು ಪೀಠವನ್ನು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಬಿಬಿಎಂಪಿ ಪರ ವಕೀಲರು “ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಆಗುವವರೆಗೆ ಬಿಬಿಎಂಪಿ ಕಾಯಿದೆ 2020 ಜಾರಿಯಲ್ಲಿರುತ್ತದೆ. ಈ ಕುರಿತಂತೆ ಸರ್ಕಾರವೇ 2025ರ ಮೇ 15ರಂದು ಆದೇಶ ಹೊರಡಿಸಿದೆ. ಹೀಗಾಗಿ, ಪಾಲಿಕೆ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗೆ ನೋಟಿಸ್‌ ನೀಡುವ ಎಲ್ಲಾ ಅಧಿಕಾರವಿದೆ” ಎಂದರು.

ಆಗ ನ್ಯಾಯಾಲಯವು ಅರ್ಜಿದಾರರು ಜಿಬಿಎ ರಚನೆ ಆದೇಶ ಹೊರಡಿಸಿರುವ ಕಾರಣ ಬಿಬಿಎಂಪಿ ಕಾಯಿದೆ ಜಾರಿಯಲ್ಲಿಲ್ಲ ಎಂಬ ವಿಚಾರ ಎತ್ತಿದ್ದಾರೆ. ಹೀಗಾಗಿ, ಗ್ರೇಟರ್‌ ಬೆಂಗಳೂರು ಅಥಾರಿಟಿ ಜಾರಿ ಯಾವಾಗ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿತು.

Also Read
ಗ್ರೇಟರ್‌ ಬೆಂಗಳೂರು ಕಾಯಿದೆ ಸಾಂವಿಧಾನಿಕ ಸಿಂಧುತ್ವ: ರಾಜ್ಯ ಸರ್ಕಾರ, ಬಿಬಿಎಂಪಿಗೆ ನೋಟಿಸ್‌ ಜಾರಿಗೊಳಿಸಿದ ಹೈಕೋರ್ಟ್‌

ಈ ವೇಳೆ ಪೀಠದ ಮುಂದೆ ಹಾಜರಾದ ಅಡ್ವೊಕೇಟ್‌ ಜನರಲ್‌ ಶೆಟ್ಟಿ ಅವರು “ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಜಾರಿ ಮುಂದೂಡಲಾಗಿದೆ. ಈ ವರ್ಷ ಬಿಜಿಎ ಸ್ಥಾಪನೆ ಇಲ್ಲ. ಐದು ಪಾಲಿಕೆಗಳಿಗೆ ಜನವರಿ ವೇಳೆಗೆ ಚುನಾವಣೆ ಸಾಧ್ಯತೆ ಇದೆ. ಅಲ್ಲಿಯವರೆಗೆ ಬಿಬಿಎಂಪಿ ಆಡಳಿತವೇ ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದರು.

ನಂತರ ನ್ಯಾಯಾಲಯವು ಅರ್ಜಿದಾರರಿಗೆ ಸಂಬಂಧಿಸಿದಂತೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಪಾಲಿಕೆ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

Kannada Bar & Bench
kannada.barandbench.com