ಇಸಿಐ ಸಂಪೂರ್ಣ ವಿಫಲ ಎಂದ ಕಲ್ಕತ್ತಾ ಹೈಕೋರ್ಟ್: ಟಿಎಂಸಿ ಅವಹೇಳನ ಮಾಡುವ ಜಾಹೀರಾತು ಪ್ರಕಟಿಸದಂತೆ ಬಿಜೆಪಿಗೆ ನಿರ್ಬಂಧ

ತನ್ನನ್ನು ಗುರಿಯಾಗಿಸಿಕೊಂಡಿದ್ದ ಬಿಜೆಪಿಯ ಜಾಹೀರಾತುಗಳನ್ನು ಪ್ರಶ್ನಿಸಿ ಟಿಎಂಸಿ ಸಲ್ಲಿಸಿದ್ದ ದೂರುಗಳನ್ನು ಇತ್ಯರ್ಥಪಡಿಸಲು ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿದೆ ಎಂದು ಪೀಠ ತರಾಟೆಗೆ ತೆಗೆದುಕೊಂಡಿತು.
BJP and TMC Logos and Calcutta HC
BJP and TMC Logos and Calcutta HC

ಮುಂದಿನ ಆದೇಶದವರೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಯಾವುದೇ ರೀತಿಯ ಅವಹೇಳನಕಾರಿ ಜಾಹೀರಾತುಗಳನ್ನು ಪ್ರಕಟಿಸದಂತೆ ಕಲ್ಕತ್ತಾ ಹೈಕೋರ್ಟ್ ಸೋಮವಾರ ಬಿಜೆಪಿಗೆ ನಿರ್ಬಂಧ ವಿಧಿಸಿದೆ [ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಮತ್ತು ಭಾರತ ಚುನಾವಣಾ ಆಯೋಗ ನಡುವಣ ಪ್ರಕರಣ].

ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಪಕ್ಷವನ್ನು ಗುರಿಯಾಗಿಸಿಕೊಂಡು ಬಿಜೆಪಿಯ ಜಾಹೀರಾತುಗಳನ್ನು ಪ್ರಶ್ನಿಸಿ ಟಿಎಂಸಿ ಸಲ್ಲಿಸಿದ್ದ ದೂರುಗಳನ್ನು ನಿವಾರಿಸಲು ಭಾರತೀಯ ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿದೆ ಎಂದು ನ್ಯಾ. ಸಬ್ಯಸಾಚಿ ಭಟ್ಟಾಚಾರ್ಯ ಅವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿತು.

“ಸಕಾಲಕ್ಕೆ ಟಿಎಂಸಿ ದೂರುಗಳನ್ನು ಇತ್ಯರ್ಥಗೊಳಿಸಲು ಇಸಿಐ ಸಂಪೂರ್ಣ ವಿಫಲವಾಗಿದೆ. ಚುನಾವಣೆ ಮುಗಿದ ಬಳಕ ದೂರು ಪರಿಹಾರ ಮಾಡಿದರೆ ಅದು ಈ ನ್ಯಾಯಾಲಯಕ್ಕೆ ಏನೇನೂ ಅಲ್ಲ. ಸೂಕ್ತ ಸಮಯದಲ್ಲಿ ಸೂಕ್ತ ಪರಿಹಾರ ನೀಡಲು ಇಸಿಐ ವಿಫಲವಾಗಿರುವುದು ಈ ನ್ಯಾಯಾಲಯವು ಅನಿವಾರ್ಯವಾಗಿ ನಿರ್ಬಂಧಕಾಜ್ಞೆಯನ್ನು ನೀಡುವಂತೆ ಮಾಡಿದೆ” ಎಂದು ನ್ಯಾಯಾಲಯ ಕಿಡಿಕಾರಿದೆ.

ಮೇಲ್ನೋಟಕ್ಕೆ ಟಿಎಂಸಿ ಮತ್ತದರ ಕಾರ್ಯಕರ್ತರ ರಾಜಕೀಯ ಹಕ್ಕುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುವ ಜಾಹೀರಾತುಗಳನ್ನು ಪ್ರಕಟಿಸದಂತೆ ಕೂಡಲೇ ಮಾಧ್ಯಮಗಳಿಗೆ ಮಾತ್ರವಲ್ಲದೆ ಬಿಜೆಪಿಗೂ ನಿರ್ಬಂಧ ವಿಧಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಜಾಹೀರಾತುಗಳು ಅವಹೇಳನಕಾರಿಯಾದ ವೈಯಕ್ತಿಕ ದಾಳಿಗಳನ್ನು ಒಳಗೊಂಡಿವೆ ಮತ್ತು ಆದ್ದರಿಂದ ಅಂತಹ ಜಾಹೀರಾತುಗಳನ್ನು ಪ್ರಕಟಿಸದಂತೆ ಬಿಜೆಪಿಗೆ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ನ್ಯಾಯಾಲಯ ನುಡಿದಿದೆ.

 "ಟಿಎಂಸಿ ವಿರುದ್ಧ ಮಾಡಿರುವ ಆರೋಪಗಳು ಮತ್ತು ಪ್ರಕಟಣೆಗಳು ಸಂಪೂರ್ಣ ಅವಹೇಳನಕಾರಿಯಾಗಿದ್ದು ಖಂಡಿತವಾಗಿಯೂ ಪ್ರತಿಸ್ಪರ್ಧಿಗಳನ್ನು ಅವಮಾನಿಸುವ ಮತ್ತು ವೈಯಕ್ತಿಕ ದಾಳಿ ಮಾಡುವ ಉದ್ದೇಶ ಹೊಂದಿವೆ. ಆದ್ದರಿಂದ, ಈ ಜಾಹೀರಾತುಗಳು ನೀತಿ ಸಂಹಿತೆಗೆ ನೇರವಿರುದ್ಧವಾಗಿದ್ದು ಅರ್ಜಿದಾರರ ಮತ್ತು ಭಾರತದ ಎಲ್ಲಾ ನಾಗರಿಕರಿಗೆ ಒದಗಿಸಲಾದ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ಮುಕ್ತ, ನ್ಯಾಯಸಮ್ಮತ ಮತ್ತು ನಿಷ್ಕಳಂಕ ಚುನಾವಣಾ ಪ್ರಕ್ರಿಯೆಗಾಗಿ, ಮುಂದಿನ ಆದೇಶದವರೆಗೆ ಅಂತಹ ಜಾಹೀರಾತುಗಳನ್ನು ಪ್ರಕಟಿಸದಂತೆ ಬಿಜೆಪಿಯನ್ನು ನಿರ್ಬಂಧಿಸಬೇಕಿದೆ” ಎಂದು ಅದು ವಿವರಿಸಿದೆ.

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ಹೊರಡಿಸಿದ ಮಾರ್ಗಸೂಚಿಗಳಲ್ಲಿ ತಿಳಿಸಿರುವಂತೆ ಚುನಾವಣಾ ಸಮಯದಲ್ಲಿ ನೇರವಾಗಿ ಅಥವಾ ಸೂಚ್ಯವಾಗಿ ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದ ವಿರುದ್ಧ ಯಾವುದೇ ಪರಿಶೀಲಿಸದ ಮಾಹಿತಿಯನ್ನು ಮಾಧ್ಯಮಗಳು ಪ್ರಕಟಿಸುವುದನ್ನು ತಪ್ಪಿಸಬೇಕು ಎಂದು ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ.

Kannada Bar & Bench
kannada.barandbench.com