ಪತಿ ಕಡೆಯ ಎಲ್ಲಾ ಸಂಬಂಧಿಗಳನ್ನು ಸಿಲುಕಿಸುವ ವಿದ್ಯಮಾನದಿಂದ ವರದಕ್ಷಿಣೆ ಕಿರುಕುಳದ ಬಗ್ಗೆ ಗಂಭೀರ ಅನುಮಾನ: ಹೈಕೋರ್ಟ್‌

“ವರದಕ್ಷಿಣೆ ಕಿರುಕುಳದ ಆರೋಪಗಳಿಗೆ ನಿರ್ದಿಷ್ಟತೆ ಇರಬೇಕು. ದೂರಿನ ಖಚಿತತೆಯನ್ನು ಮನವರಿಕೆ ಮಾಡಿಕೊಂಡೇ ಪ್ರಾಸಿಕ್ಯೂಷನ್‌ ಮುಂದುವರಿಯಬೇಕು. ವೃಥಾ ಆರೋಪಗಳಡಿ ವಿಚಾರಣೆ ನಡೆಸುವುದು ನಿಶ್ಚಿತವಾಗಿಯೂ ಕಾನೂನಿನ ದುರುಪಯೋಗ” ಎಂದಿರುವ ನ್ಯಾಯಾಲಯ.
Divorce
Divorce
Published on

ಮದುವೆಗೂ ಮುಂಚೆ ನಡೆದ ಗಂಡು–ಹೆಣ್ಣಿನ ಮನೆಯವರ ಮಾತುಕತೆಯಲ್ಲಿ ಪ್ರಸ್ತಾಪಿಸಲಾದ ವರದಕ್ಷಿಣೆ ಹಾಗೂ ಮದುವೆಯ ಖರ್ಚುವೆಚ್ಚಗಳಿಗೆ ಸಂಬಂಧಿಸಿದ ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ಮದುವೆಯ ನಂತರ ಅತ್ತೆ–ಮಾವ, ನಾದಿನಿ ಕ್ರೌರ್ಯ ಎಸಗಿದ್ದಾರೆ ಎಂಬ ನಿರಾಧಾರ ಆರೋಪಗಳನ್ನು ಕಾನೂನಿನ ಚೌಕಟ್ಟಿನಲ್ಲಿ ವರದಕ್ಷಿಣೆ ಕಿರುಕುಳ ಎಂದು ವ್ಯಾಖ್ಯಾನಿಸಲು ಆಗದು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಮಹತ್ವದ ತೀರ್ಪು ಪ್ರಕಟಿಸಿದೆ.

ವಿಚಾರಣಾಧೀನ ನ್ಯಾಯಾಲಯದಲ್ಲಿನ ವಿಚಾರಣೆ ರದ್ದತಿ ಕೋರಿ ಅತ್ತೆ–ಮಾವ ಮತ್ತು ನಾದಿನಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ಕ್ರೌರ್ಯ ಎಂಬ ಪದವನ್ನು ನಿರ್ದಿಷ್ಟ ನಿದರ್ಶನಗಳಿಲ್ಲದೆ ಸರಳವಾಗಿ ಸ್ಥಾಪಿಸಲು ಸಾಧ್ಯವಿಲ್ಲ. ಆರೋಪ ಹೊರಿಸುವಾಗ ಕನಿಷ್ಠ ಪಕ್ಷ ಕ್ರೌರ್ಯ ನಡೆದಿದೆ ಎನ್ನುವುದರ ಕರಾರುವಾಕ್ಕು ಗಳಿಗೆ, ದಿನಾಂಕ ಅಥವಾ ಘಟನೆಗಳನ್ನು ಖಚಿತವಾಗಿ ದೂರಿನಲ್ಲಿ ವಿವರಿಸಿರಬೇಕು. ಸುಖಾಸುಮ್ಮನೆ ಆರೋಪ ಹೊರಿಸುವ ಪ್ರವೃತ್ತಿಯು ದೂರುದಾರರ ಮೇಲೆ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ” ಎಂಬ ಪೂರ್ವನಿದರ್ಶನಗಳನ್ನು ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.

“ವೈವಾಹಿಕ ವಿವಾದದಿಂದ ಉದ್ಭವಿಸುವ ಕ್ರಿಮಿನಲ್ ಪ್ರಕರಣಗಳಲ್ಲಿ ಮನೆಮಂದಿಯನ್ನೆಲ್ಲಾ ಸಿಲುಕಿಸಿ ಅವರನ್ನು ವಿಚಾರಣೆಯ ಕಟಕಟೆಗೆ ಎಳೆತರುವ ಪ್ರವೃತ್ತಿಯನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು” ಎಂದೂ ನ್ಯಾಯಾಲಯ ಹೇಳಿದೆ.

“ವರದಕ್ಷಿಣೆ ಕಿರುಕುಳದ ಆರೋಪಗಳಿಗೆ ನಿರ್ದಿಷ್ಟತೆ ಇರಬೇಕು. ದೂರಿನ ಖಚಿತತೆಯನ್ನು ಮನವರಿಕೆ ಮಾಡಿಕೊಂಡೇ ಪ್ರಾಸಿಕ್ಯೂಷನ್‌ ಮುಂದುವರಿಯಬೇಕು. ವೃಥಾ ಆರೋಪಗಳಡಿ ವಿಚಾರಣೆ ನಡೆಸುವುದು ನಿಶ್ಚಿತವಾಗಿಯೂ ಕಾನೂನಿನ ದುರುಪಯೋಗ” ಎಂದು ಪೀಠ ಹೇಳಿದೆ.

“ಹಾಲಿ ‍ಪ್ರಕರಣದ ದೂರಿನಲ್ಲಿರುವ ಅಂಶಗಳು, ಮದುವೆ ಸಮಾರಂಭಗಳಲ್ಲಿ ಮಾಡಿದ ಖರ್ಚಿನ ಬಗ್ಗೆ ಮಾತ್ರವೇ ವಿವರಿಸುತ್ತವೆ. ಇದರ ತಳಹದಿಯಲ್ಲಿ ಮದುವೆ ನಂತರ ಗಂಡನ ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನೂ ವರದಕ್ಷಿಣೆ ಬೇಡಿಕೆ ಆರೋಪದಡಿ ಸಿಲುಕಿಸಲು ಐಪಿಸಿ ಸೆಕ್ಷನ್‌ 498ಎ ಅನ್ನು ಅಸ್ತ್ರವಾಗಿ ಬಳಸಲಾಗಿದೆ. ಹೀಗಾಗಿ, ಕೆಲವು ಸಾಮಾನ್ಯ ಜಗಳವನ್ನೇ ಊರುಗೋಲಾಗಿಸಿ ಪುರಾವೆಗಳಿಲ್ಲದ ಆರೋಪಗಳಡಿ ಅವರನ್ನು ವಿವೇಚನಾರಹಿತವಾಗಿ ವಿಚಾರಣೆಯ ಅಗ್ನಿಪರೀಕ್ಷೆಗೆ ಒಳಪಡಿಸುವುದು ಸಲ್ಲ” ಎಂದು ಸ್ಪಷ್ಟಪಡಿಸಿದೆ.

“ಹೆಣ್ಣಿನ ಮನೆಯವರು ಮದುವೆಗೆ ₹50 ಲಕ್ಷ ಖರ್ಚು ಮಾಡುತ್ತೇವೆ ಹಾಗೂ ಏನೆಲ್ಲಾ ವರೋಪಚಾರ ಮಾಡುತ್ತೇವೆ ಎಂಬುದರ ಮಾತಕತೆಗಳೇ ದೂರಿಗೆ ಆಧಾರ. ದೂರುದಾರ ಮಹಿಳೆ (ಪತ್ನಿ) ಗಂಡನ ಮನೆಯಲ್ಲಿ ಕೇವಲ 19 ದಿನಗಳ ಸಂಸಾರ ನಡೆಸಿದ್ದಾರೆ. ಈ ದಿನಗಳಲ್ಲಿ ಎಲ್ಲೂ ಕೂಡಾ ಅರ್ಜಿದಾರರ ವಿರುದ್ಧ ವರದಕ್ಷಿಣೆಗೆ ಬೇಡಿಕೆ ಇರಿಸಿದ ಬಗ್ಗೆ ಸಾಕ್ಷ್ಯಾಧಾರಗಳಿಲ್ಲ” ಎಂಬ ಸೂಕ್ಷ್ಮ ಅಂಶವನ್ನು ಪೀಠ ಎತ್ತಿಹಿಡಿದಿದೆ.

ಪತಿಯ ವಿರುದ್ಧದ ಖಟ್ಲೆಗಳಲ್ಲಿ ಕುಟುಂಬದ ಮುಗ್ಧ ಸದಸ್ಯರು ಅನಗತ್ಯ ಕಿರುಕುಳಕ್ಕೆ ಒಳಗಾಗುವುದನ್ನು ತಪ್ಪಿಸಬೇಕು. ಈ ದಿಸೆಯಲ್ಲಿ ವಿಚಾರಣಾ ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕು. ವಯಸ್ಸಾದ ಸಂಬಂಧಿಕರ ವಿರುದ್ಧ ಐಪಿಸಿ ಸೆಕ್ಷನ್‌ 498-ಎ ಅನ್ನು ಅನ್ವಯಿಸುವುದು ಮತ್ತು ನಿರ್ದಿಷ್ಟವಲ್ಲದ ಆರೋಪಗಳ ಆಧಾರದಡಿ ಕ್ರಿಮಿನಲ್ ಕಾನೂನನ್ನು ಆಯುಧವಾಗಿ ಝಳಪಿಸುವುದು ತರವಲ್ಲ ಎಂದು ಸುಪ್ರೀ ಕೋರ್ಟ್‌ ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದೆ ಎಂಬ ಅಂಶಗಳನ್ನು ತೀರ್ಪಿನಲ್ಲಿ ಒತ್ತಿ ಹೇಳಲಾಗಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ವಧು ಮತ್ತು ಮೈಸೂರಿನ ವರನಿಗೆ 2018ರ ಏಪ್ರಿಲ್‌ 24ರಂದು ಮೈಸೂರಿನ ಲಲಿತ ಮಹಲ್‌ನಲ್ಲಿ ವಿಜೃಂಭಣೆಯ ಮದುವೆ ನೆರವೇರಿತ್ತು. 2018ರ ಮೇ 9ರಂದು ಪತಿ ಅಮೆರಿಕಕ್ಕೆ ತೆರಳಿದ್ದರು. ಪತ್ನಿ 19 ದಿನಗಳ ಕಾಲ ಅತ್ತೆ–ಮಾವನ ಮನೆಯಲ್ಲಿದ್ದು ನಂತರ ತವರು ಮನೆಗೆ ವಾಪಸಾಗಿದ್ದರು.

“ಗಂಡನ ಮನೆಯಲ್ಲಿದ್ದ ಸಮಯದಲ್ಲಿ ನನಗೆ ಅತ್ತೆ, ಮಾವ ಮತ್ತು ನಾದಿನಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ನೀನು ದಪ್ಪಗಿದ್ದೀಯ ಎಂದು ಜರಿದಿದ್ದಾರೆ” ಎಂದು ಆರೋಪಿಸಿ ಪತ್ನಿ ಆರು ತಿಂಗಳ ನಂತರ ಬಸವೇಶ್ವರ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದರನ್ವಯ ಪೊಲೀಸರು ತನಿಖೆ ನಡೆಸಿ ಐಪಿಸಿ ಸೆಕ್ಷನ್‌ 498ಎ (ವಿವಾಹಿತ ಮಹಿಳೆಯನ್ನು ಪತಿ ಅಥವಾ ಪತಿಯ ಸಂಬಂಧಿಕರು ದೈಹಿಕವಾಗಿ, ಮಾನಸಿಕವಾಗಿ ಕಿರುಕುಳ ನೀಡುವುದು), 506 (ಬೆದರಿಕೆ) ಮತ್ತು 34 (ಸಾಮಾನ್ಯ ಉದ್ದೇಶದಿಂದ ಹಲವರು ಸೇರಿ ಎಸಗುವ ಅಪರಾಧ) ಹಾಗೂ ವರದಕ್ಷಿಣೆ ನಿಷೇಧ ಕಾಯಿದೆ ಸೆಕ್ಷನ್‌ 3 (ವರದಕ್ಷಿಣೆ ನೀಡುವುದು ಅಥವಾ ತೆಗೆದುಕೊಳ್ಳುವುದು) ಮತ್ತು 4ರ (ವರದಕ್ಷಿಣೆಗೆ ಬೇಡಿಕೆ) ಅಡಿಯಲ್ಲಿ ಅರ್ಜಿದಾರರ (ಅತ್ತೆ, ಮಾವ ಮತ್ತು ನಾದಿನಿ) ವಿರುದ್ಧ ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣೆ ಪೊಲೀಸರು 2021ರ ಆಗಸ್ಟ್‌ 12ರಂದು ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

Attachment
PDF
Sumithra & others Vs State of Karnataka (1)
Preview
Kannada Bar & Bench
kannada.barandbench.com