ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ ಸೆಕ್ಷನ್ 5: ತಡೆಯಾಜ್ಞೆ ರದ್ದು ಕೋರಿ ಅರ್ಜಿ; ನೋಟಿಸ್‌ ನೀಡಿದ ಸುಪ್ರೀಂ

ಧಾರ್ಮಿಕ ಮತಾಂತರಕ್ಕೆ ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆಯುವ ಸೆಕ್ಷನ್ 5 ರ ಅನುಷ್ಠಾನಕ್ಕೆ ತಡೆ ನೀಡಿರುವ ಗುಜರಾತ್ ಹೈಕೋರ್ಟ್ ಆದೇಶವನ್ನು ರಾಜ್ಯ ಸರ್ಕಾರ ಪ್ರಶ್ನಿಸಿತ್ತು.
Marriage

Marriage


Published on

ವಿವಾಹವಾಗುವುದಕ್ಕಾಗಿ ಧಾರ್ಮಿಕ ಮತಾಂತರವಾಗಲು ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಕಡ್ಡಾಯಗೊಳಿಸಿದ ಗುಜರಾತ್‌ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ ಸೆಕ್ಷನ್‌ 5ಕ್ಕೆ ತಡೆ ನೀಡಿರುವ ಗುಜರಾತ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಇಂದು ಪ್ರಕರಣದ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿದೆ (ಗುಜರಾತ್ ಸರ್ಕಾರ ಮತ್ತು ಜಮಿಯತ್ ಉಲಮಾ ಇ-ಹಿಂದ್ ಗುಜರಾತ್ ಇನ್ನಿತರರ ನಡುವಣ ಪ್ರಕರಣ).

ಅಂತರ್ಧರ್ಮೀಯ ವಿವಾಹಗಳನ್ನು ಯಾವುದೇ ಬಲವಂತ, ಆಮಿಷ ಅಥವಾ ಮೋಸದ ಮಾರ್ಗಗಳಿಲ್ಲದೆ ನೆರವೇರಿಸಿದ ಪ್ರಕರಣಗಳು ಸಾಕಷ್ಟಿವೆ. ಹಾಗಿದ್ದರೂ ಸೆಕ್ಷನ್ 5ರ ಅನುಷ್ಠಾನಕ್ಕೆ ತಡೆ ನೀಡಲಾಗಿದೆ ಎಂದು ದೂರಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠದಲ್ಲಿ ನಡೆಸಿತು.

Also Read
ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ: ವಿರೋಧಪಕ್ಷಗಳಿಂದ ಭಾರೀ ಪ್ರತಿರೋಧ

ರೆವರೆಂಡ್‌ ಸ್ಟೇನಿಸ್ಲಾಸ್ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣದಲ್ಲಿ ನೀಡಲಾದ ತೀರ್ಪಿನ ಪ್ರಕಾರ, ವ್ಯಕ್ತಿಯನ್ನು ಇನ್ನೊಂದು ಧರ್ಮಕ್ಕೆ ಮತಾಂತರ ಮಾಡಲು ಯಾವುದೇ ಮೂಲಭೂತ ಹಕ್ಕು ಇಲ್ಲ. ಆದ್ದರಿಂದ, ವಿವಾಹವಾಗುವುದಕ್ಕಾಗಿ ಧಾರ್ಮಿಕ ಮತಾಂತರವಾಗಲು ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಕಡ್ಡಾಯಗೊಳಿಸಿದ ಕಾಯಿದೆಯ ಸೆಕ್ಷನ್‌ 5 ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗದು ಎಂದು ರಾಜ್ಯ ಸರ್ಕಾರ ವಾದಿಸಿತು.

ಹಿಂದಿನ ವಿಚಾರಣೆ ವೇಳೆ ಗುಜರಾತ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು ಸೆಕ್ಷನ್ 5 ರ ಮೇಲಿನ ತಡೆಯಾಜ್ಞೆಯು ವಿವಾಹವಾಗುವ ಸಂದರ್ಭದಲ್ಲಿನ ಮತಾಂತರಕ್ಕೆ ನೀಡುವ ಅನುಮತಿಗೆ ಸಂಬಂಧಿಸಿದಂತೆ ಮಾತ್ರ ಇದ್ದು ಇತರೆ ಕಾರಣಗಳಿಗೆ ಮತಾಂತರಕ್ಕೆ ಅನುಮತಿಗೆ ತಡೆ ಬೀಳದು ಎಂದು ಸ್ಪಷ್ಟಪಡಿಸಿದ್ದರು.

Kannada Bar & Bench
kannada.barandbench.com