ಸ್ವಾಮಿ ನಿತ್ಯಾನಂದನ ಅಕ್ರಮ ವಶದಲ್ಲಿರುವ ಬಾಲಕಿಯರ ಕರೆ ತರಲು ವಿಫಲವಾದ ಗೃಹ ಸಚಿವಾಲಯಕ್ಕೆ ಗುಜರಾತ್ ಹೈಕೋರ್ಟ್ ತರಾಟೆ

ಬಾಲಕಿಯರ ತಂದೆ ನವೆಂಬರ್ 2019ರಲ್ಲೇ ಹೈಕೋರ್ಟ್‌ಗೆ ಮೊರೆ ಹೋಗಿದ್ದರೂ ಬಾಲಕಿಯರನ್ನು ಇರಿಸಲಾಗಿರುವ ಜಮೈಕಾದ ಕಿಂಗ್ಸ್‌ಟನ್‌ನಿಂದ ಅವರನ್ನು ಮರಳಿ ಕರೆತರಲು ಅಧಿಕಾರಿಗಳು ಏನೇನೂ ಶ್ರಮವಹಿಸಿಲ್ಲ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
Swami Nithyananda and Gujarat HC
Swami Nithyananda and Gujarat HC Facebook

ವಿವಾದಿತ ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದನ ಅಕ್ರಮ ವಶದಲ್ಲಿದ್ದಾರೆ ಎನ್ನಲಾದ ಇಬ್ಬರು ಬಾಲಕಿಯರ ವೈಯಕ್ತಿಕ ಸ್ವಾತಂತ್ರ್ಯ ರಕ್ಷಿಸಲು ವಿಫಲವಾದ ಕೇಂದ್ರ ಗೃಹ ಸಚಿವಾಲಯ ಹಾಗೂ ಇತರ ಅಧಿಕಾರಿಗಳನ್ನು ಗುಜರಾತ್‌ ಹೈಕೋರ್ಟ್‌ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದೆ.

ಬಾಲಕಿಯರ ತಂದೆ ನವೆಂಬರ್ 2019ರಲ್ಲೇ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳು ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ಇರುವ ಬಾಲಕಿಯರನ್ನು ಮರಳಿ ಕರೆತಲು ಅವರೊಂದಿಗೆ ಸಂಪರ್ಕ ಸಾಧಿಸಲು ಯಾವುದೇ ಯತ್ನ ಮಾಡಿಲ್ಲ ಎಂದು ನ್ಯಾಯಮೂರ್ತಿಗಳಾದ ಎನ್‌ ವಿ ಅಂಜಾರಿಯಾ ಮತ್ತು ನಿರಾಲ್ ಆರ್ ಮೆಹ್ತಾ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

“ಹೇಬಿಯಸ್‌ ಕಾರ್ಪಸ್‌ ಅರ್ಜಿಗೆ ಸಂಬಂಧಿಸಿದಂತೆ ಹಲವು ಆದೇಶಗಳನ್ನು (ಈ ಹಿಂದೆ) ನೀಡಲಾಗಿದೆ. ಅದೇ ಅರ್ಜಿ ದೀರ್ಘಕಾಲದ ಬಳಿಕ ಇಂದು ವಿಚಾರಣೆಗೆ ಬಂದಾಗಲೂ ಯಾವುದೇ ಫಲಿತಾಂಶ ದೊರೆತಿಲ್ಲ. ಇದಕ್ಕೆ ವಿರುದ್ಧವಾಗಿ ನಡೆದಿರುವ ಬೆಳವಣಿಗೆಗಳನ್ನು ಸ್ವಾಗತಾರ್ಹ ಎನ್ನಲಾಗದು” ಎಂದು ಪೀಠ  ನವೆಂಬರ್ 12 ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

Also Read
ದೇವ ಮಾನವ ದೀಕ್ಷಿತ್ ಆಶ್ರಮದಲ್ಲಿ160 ಮಹಿಳೆಯರಿಗೆ ಪಶುಸದೃಶ ಸ್ಥಿತಿ: ಆಘಾತ ವ್ಯಕ್ತಪಡಿಸಿದ ದೆಹಲಿ ಹೈಕೋರ್ಟ್

ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಗೃಹ ಸಚಿವಾಲಯ ಯಾವುದೇ ಅಫಿಡವಿಟ್‌ ಸಲ್ಲಿಸಿಲ್ಲ. ತನಿಖೆಗೆ ಸಂಬಂಧಿಸಿದಂತೆ, ಬಾಲಕಿಯರ ವೈಯಕ್ತಿಕ ಸ್ವಾತಂತ್ರ್ಯ ಕುರಿತಂತೆ ಹಾಗೂ ಚಿಂತೆಗೀಡಾಗಿರುವ ಬಾಲಕಿಯರ ತಂದೆಯ ಕಳವಳ ಪರಿಹರಿಸುವ ಕರ್ತವ್ಯ ನಿರ್ವಹಣೆಯಲ್ಲಿ ಅಧಿಕಾರಿಗಳು ಲೋಪ ಎಸಗಿದ್ದಾರೆ” ಎಂದು ಪೀಠ ಹೇಳಿದೆ. ಈ ಹಿನ್ನೆಲೆಯಲ್ಲಿ ಅಫಿಡವಿಟ್‌ ಸಲ್ಲಿಸುವಂತೆ ಸಚಿವಾಲಯಕ್ಕೆ ಅದು ತಾಕೀತು ಮಾಡಿದೆ.

ನವೆಂಬರ್ 2019ರಲ್ಲಿ ತನ್ನ ಇಬ್ಬರು ಹೆಣ್ಣುಮಕ್ಕಳು ನಿಗೂಢ ರೀತಿಯಲ್ಲಿ ನಾಪತ್ತೆಯಾದರು.  ಹೆಣ್ಣುಮಕ್ಕಳನ್ನು ಬಲವಂತವಾಗಿ ಕರೆದೊಯ್ದು ಅಕ್ರಮ ಎಸಗಿರುವ ಪ್ರಕರಣದಲ್ಲಿ ಸ್ವಾಮಿ ನಿತ್ಯಾನಂದ ಅವರ ಪಾತ್ರವಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.  

ಹೈಕೋರ್ಟ್‌ನ ವಿವಿಧ ಪೀಠಗಳು ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆದೇಶಗಳನ್ನು ನೀಡಿದ್ದರೂ ಯಾವುದೇ ಫಲ ನೀಡಿಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಹೀಗಾಗಿ ಈ ಬಾರಿಯ ಅಫಿಡವಿಟ್‌ನಲ್ಲಿ ಬಾಲಕಿಯರನ್ನು ಪತ್ತೆಹಚ್ಚಲು ತಾವು ವಹಿಸಿದ ಶ್ರಮದ ಬಗ್ಗೆ ತಿಳಿಸುವುದು ಅಧಿಕಾರಿಗಳ ಕರ್ತವ್ಯ ಎಂದು ಪೀಠ ಆದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 6ಕ್ಕೆ ನಿಗದಿಯಾಗಿದೆ.

Kannada Bar & Bench
kannada.barandbench.com