ಪ್ರಧಾನಿ ಮೋದಿ ಪದವಿ ವಿವಾದ: ಮಾನನಷ್ಟ ಮೊಕದ್ದಮೆ ಪ್ರಶ್ನಿಸಿ ಕೇಜ್ರಿವಾಲ್, ಸಂಜಯ್‌ ಸಲ್ಲಿಸಿದ್ದ ಅರ್ಜಿ ತಿರಸ್ಕಾರ

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿಗಳ ಬಗ್ಗೆ ಇಬ್ಬರು ಎಎಪಿ ನಾಯಕರು ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಗುಜರಾತ್ ವಿಶ್ವವಿದ್ಯಾಲಯವು ಮಾನನಷ್ಟ ಮೊಕದ್ದಮೆ ದಾಖಲಿಸಿದೆ.
Arvind Kejriwal, Sanjay Singh
Arvind Kejriwal, Sanjay Singh

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿಯ ಬಗ್ಗೆ ಇಬ್ಬರು ಎಎಪಿ ನಾಯಕರು ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಗುಜರಾತ್ ವಿಶ್ವವಿದ್ಯಾಲಯ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಅವರಿಗೆ ಹೊರಡಿಸಲಾದ ಸಮನ್ಸ್ ಅನ್ನು ರದ್ದುಗೊಳಿಸಲು ಗುಜರಾತ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹೊರಡಿಸಿದ ಸಮನ್ಸ್ ಅನ್ನು ಪ್ರಶ್ನಿಸಿ ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಹಸ್ಮುಖ್ ಡಿ ಸುತಾರ್ ತಿರಸ್ಕರಿಸಿದರು.

Justice Hasmukh D Suthar
Justice Hasmukh D Suthar

ಪ್ರಧಾನಿ ಮೋದಿಯವರ ಶೈಕ್ಷಣಿಕ ಪದವಿಯ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ರಾಜಕಾರಣಿಗಳು ಗುಜರಾತ್ ವಿಶ್ವವಿದ್ಯಾಲಯದ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಕೇಜ್ರಿವಾಲ್ ಮತ್ತು ಸಿಂಗ್ ವಿರುದ್ಧದ ಮಾನನಷ್ಟ ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಇಬ್ಬರೂ ನಾಯಕರಿಗೆ ಸಮನ್ಸ್ ಜಾರಿ ಮಾಡಿದ್ದರು . "ಗುಜರಾತ್ ವಿಶ್ವವಿದ್ಯಾಲಯವು ಸುಳ್ಳು ಮತ್ತು ಬೋಗಸ್ ಪದವಿಗಳನ್ನು ನೀಡುತ್ತದೆ ಮತ್ತು ನಕಲಿ ಚಟುವಟಿಕೆಗಳಲ್ಲಿ ತೊಡಗಿದೆ ಮತ್ತು ಆ ಮೂಲಕ ಗುಜರಾತ್ ವಿಶ್ವವಿದ್ಯಾಲಯದ ಹೆಸರು ಹಾಳುಮಾಡುತ್ತದೆ" ಎಂದು ಹೇಳಲಾಗಿದೆ ಎಂದು ವಿಚಾರಣಾ ನ್ಯಾಯಾಲಯವು ತನ್ನ ಪ್ರಾಥಮಿಕ ಅಭಿಪ್ರಾಯದಲ್ಲಿ ಹೇಳಿದೆ. ನಂತರ ಸತ್ರ ನ್ಯಾಯಾಲಯವು ಸಮನ್ಸ್ ಅನ್ನು ಎತ್ತಿಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿಗಳಿಗೆ ಕಾರಣವಾಯಿತು.

ಎಲ್ಲಾ ಹೇಳಿಕೆಗಳು ವಿಶ್ವವಿದ್ಯಾಲಯದ ವಿರುದ್ಧವಾಗಿಲ್ಲದ ಕಾರಣ ದೂರನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಆಪ್‌ ನಾಯಕರು ವಾದಿಸಿದ್ದರು. ಆದಾಗ್ಯೂ, ಕೇಜ್ರಿವಾಲ್ ಮತ್ತು ಸಿಂಗ್ ತಮ್ಮ ಹೇಳಿಕೆಗಳಿಂದ ತನ್ನ ವರ್ಚಸ್ಸಿಗೆ ಕಳಂಕ ತಂದಿದ್ದಾರೆ. ಹಾಗಾಗಿ ಅವರನ್ನು ವಿಚಾರಣೆ ಎದುರಿಸುವಂತೆ ಮಾಡಬೇಕು ಎಂದು ವಿಶ್ವವಿದ್ಯಾಲಯ ವಾದಿಸಿತ್ತು.

ಪ್ರಕರಣದ ಹಿನ್ನೆಲೆ: ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಯ ಕಾಯಿದೆ) ಅಡಿಯಲ್ಲಿ ಪ್ರಧಾನಿ ಕಚೇರಿ (ಪಿಎಂಒ) ಮೋದಿಯವರ ಪದವಿ ಪ್ರಮಾಣಪತ್ರಗಳನ್ನು ಒದಗಿಸುವ ಅಗತ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ಮಾರ್ಚ್ 2023ರಲ್ಲಿ ನೀಡಿದ ತೀರ್ಪು ಆಧರಿಸಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.

ಪ್ರಧಾನಿ ಕಾರ್ಯಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿ (ಪಿಐಒ) ಮತ್ತು ಗುಜರಾತ್ ವಿಶ್ವವಿದ್ಯಾಲಯ ಮತ್ತು ದೆಹಲಿ ವಿಶ್ವವಿದ್ಯಾಲಯದ ಪಿಐಒಗಳಿಗೆ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ವಿವರಗಳನ್ನು ನೀಡುವಂತೆ ಮುಖ್ಯ ಮಾಹಿತಿ ಆಯೋಗ (ಸಿಐಸಿ) ನೀಡಿದ್ದ ಆದೇಶವನ್ನು ನ್ಯಾಯಮೂರ್ತಿ ಬಿರೇನ್ ವೈಷ್ಣವ್ ವಜಾ ಮಾಡಿದ್ದರು. ಅರವಿಂದ್ ಕೇಜ್ರಿವಾಲ್ ಅವರಿಗೂ ಹೈಕೋರ್ಟ್ 25,000 ರೂಪಾಯಿ ದಂಡ ವಿಧಿಸಿತ್ತು.

ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ಕೇಜ್ರಿವಾಲ್ 2023ರ ಡಿಸೆಂಬರ್‌ನಲ್ಲಿ ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ಇನ್ನೂ ಹೈಕೋರ್ಟ್ ಮುಂದೆ ಬಾಕಿ ಇದೆ.

ಆರ್‌ಟಿಐ ಪ್ರಕರಣದಲ್ಲಿ ಎಎಪಿ ನಾಯಕರ ವಿರುದ್ಧ ಹೈಕೋರ್ಟ್ ತೀರ್ಪು ನೀಡಿದ ಕೂಡಲೇ ಗುಜರಾತ್ ವಿಶ್ವವಿದ್ಯಾಲಯವು ಇಬ್ಬರು ರಾಜಕಾರಣಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು. ಮಾನಹಾನಿ ಪ್ರಕರಣದಲ್ಲಿ ಸಮನ್ಸ್ ಜಾರಿ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯಲ್ಲಿ, ಹೈಕೋರ್ಟ್ ಕಳೆದ ವರ್ಷದ ಆಗಸ್ಟ್‌ನಲ್ಲಿ ವಿಚಾರಣೆಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತು. ಇದನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿತ್ತು.

Related Stories

No stories found.
Kannada Bar & Bench
kannada.barandbench.com