ಸಾಮೂಹಿಕ ಸಮಾಧಿ ಅಗೆದ ಪ್ರಕರಣ: ತೀಸ್ತಾ ವಿರುದ್ಧದ ಎಫ್‌ಐಆರ್‌ ರದ್ದತಿ ಬಗ್ಗೆ ಗುಜರಾತ್ ಹೈಕೋರ್ಟ್ ಅಸಮಾಧಾನ

2002ರ ಗುಜರಾತ್ ಗಲಭೆಯಲ್ಲಿ ಮೃತಪಟ್ಟವರ ಶವಗಳನ್ನು ಸಮಾಧಿಯಿಂದ ಹೊರತೆಗೆದು ಮಾಧ್ಯಮಗಳಿಗೆ ಪ್ರದರ್ಶಿಸುವ ಮೂಲಕ ಸಂಚಲನ ಸೃಷ್ಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತೀಸ್ತಾ ಅವರ ವಿರುದ್ಧ 2006ರಲ್ಲಿ ಪ್ರಕರಣ ದಾಖಲಾಗಿತ್ತು.
ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ ತೀಸ್ತಾ ಸೆಟಲ್‌ವಾಡ್‌
ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ ತೀಸ್ತಾ ಸೆಟಲ್‌ವಾಡ್‌

ಗುಜರಾತ್‌ನ ಪಂಡರವಾಡಾದಲ್ಲಿ ಸಾಮೂಹಿಕ ಸಮಾಧಿ ಅಗೆದ ಪ್ರಕರಣಕ್ಕೆ ಸಂಬಂಧಿಸಿದಂತೆ 2006ರಲ್ಲಿ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್‌ ಅವರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಲು ತನಗೆ ಒಲವು ಇಲ್ಲ ಎಂದು ಗುಜರಾತ್ ಹೈಕೋರ್ಟ್ ಸೋಮವಾರ ಮೌಖಿಕವಾಗಿ ಅಭಿಪ್ರಾಯಪಟ್ಟಿದ್ದು ತೀಸ್ತಾ ಅವರಿಗೆ ಹಿನ್ನಡೆಯಾದಂತಾಗಿದೆ (ತೀಸ್ತಾ ಅತುಲ್ ಸೆಟಲ್‌ವಾಡ್‌ ಮತ್ತು ಗುಜರಾತ್‌ ಸರ್ಕಾರ ನಡುವಣ ಪ್ರಕರಣ).

ಈ ಪ್ರಕರಣದಲ್ಲಿ ತೀಸ್ತಾ ಅವರ ವಿರುದ್ಧದ ಎಫ್‌ಐಆರ್‌ ರದ್ದತಿ ಕುರಿತು ತಾನು ಒಲವು ತೋರುವುದಿಲ್ಲ ಎಂದು ನ್ಯಾಯಮೂರ್ತಿ ಸಂದೀಪ್ ಭಟ್ ಅವರಿದ್ದ ಏಕಸದಸ್ಯ ಪೀಠ ಮೌಖಿಕವಾಗಿ ತಿಳಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ ತೀಸ್ತಾ ಪರ ವಕೀಲರು, "ಯಾವುದೇ ಅಪರಾಧ ನಡೆದಿಲ್ಲ" ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ತಮ್ಮ ಕೈಲಾದಷ್ಟು ಪ್ರಯತ್ನಿಸುವುದಾಗಿ ತಿಳಿಸಿದರು.

"ಎಫ್ಐಆರ್‌ನಲ್ಲಿ ಏನೂ ಇಲ್ಲ. ಯಾವುದೇ ಅಪರಾಧ ನಡೆದಿಲ್ಲ. ಇದು ಕೇವಲ ರಾಜಕೀಯವಾಗಿ ಬಲಿಕೊಡುವ ಕ್ರಿಯೆ" ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾ. ಭಟ್‌ "ಇದು ಇತ್ತೀಚಿನ ದಿನಗಳಲ್ಲಿ ಬಳಸಲಾಗುವ ವಿಶಾಲ ಪದ" ಎಂದರು.

ಪಂಡರವಾಡಾ ಸಾಮೂಹಿಕ ಸಮಾಧಿ ಅಗೆತ ಪ್ರಕರಣಕ್ಕೆ ಸಂಬಂಧಿಸಿದಂತೆ 2006ರಲ್ಲಿ ಮಹಿಸಾಗರ್ ಜಿಲ್ಲೆಯಲ್ಲಿ ತನ್ನ ವಿರುದ್ಧ ದಾಖಲಾದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ತೀಸ್ತಾ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.

ಧಾರ್ಮಿಕ ವಿಧಿಗಳನ್ನು ಸರಿಯಾಗಿ ಅನುಸರಿಸದೆ ತಮ್ಮ ಸಂಬಂಧಿಕರ ಶವಗಳ ಸಂಸ್ಕಾರ ಮಾಡಲಾಗಿದೆ ಎಂದು ಗಲಭೆ ಸಂತ್ರಸ್ತರು ದೂರು ನೀಡಿದ ಹಿನ್ನೆಲೆಯಲ್ಲಿ ಮೃತ ದೇಹಗಳನ್ನು ಹೊರತೆಗೆಯಲಾಗಿದೆ ಎಂದು ತೀಸ್ತಾ ವಾದಿಸಿದರು. 

"ಅಂತಹ ನಿಷ್ಪ್ರಯೋಜಕ ಕೆಲಸವನ್ನು ಏಕೆ ಮಾಡಬೇಕು" ಎಂದು ನ್ಯಾಯಮೂರ್ತಿ ಭಟ್ ಪ್ರಶ್ನಿಸಿದರು. ಕಡೆಗೆ ನ್ಯಾಯಾಲಯ ಪ್ರಕರಣವನ್ನು ಜನವರಿ 9ಕ್ಕೆ ಮುಂದೂಡಿತು.

2002ರ ಗುಜರಾತ್ ಗಲಭೆಯಲ್ಲಿ ಮೃತಪಟ್ಟವರ ಸಮಾಧಿಗಳನ್ನು ಅಗೆದು ಹೊರತೆಗೆದು ಮಾಧ್ಯಮಗಳಿಗೆ ಪ್ರದರ್ಶಿಸುವ ಮೂಲಕ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತೀಸ್ತಾ ಅವರ ವಿರುದ್ಧ 2006ರಲ್ಲಿ ಪ್ರಕರಣ ದಾಖಲಾಗಿತ್ತು.

ತೀಸ್ತಾ ಅವರಿಂದ ದೂರವಾಗಿದ್ದ ಆಕೆಯ ಸಹವರ್ತಿ ರೆಹಮಾನ್ ಖಾನ್ ಅವರು ಸಮಾಧಿ ಅಗೆದು ಶವ ಹೊರತೆಗೆಯಲು ತೀಸ್ತಾ ಆದೇಶಿಸಿದ್ದರು ಎಂದು ದೂರಿದ್ದರು.

ಮತ್ತೊಂದೆಡೆ 2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ (ಈಗ ಪ್ರಧಾನಿ) ನರೇಂದ್ರ ಮೋದಿಯವರನ್ನು ಸಿಲುಕಿಸಲು ಸಾಕ್ಷ್ಯ ಸೃಷ್ಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತೀಸ್ತಾ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ತೀಸ್ತಾ ಅವರ ವಿರುದ್ಧ ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸುವಾಗ, ಪೊಲೀಸರು ಆಕೆಯ "ಕ್ರಿಮಿನಲ್ ಹಿನ್ನೆಲೆ" ಬಿಂಬಿಸಲು ಸಾಮೂಹಿಕ ಸಮಾಧಿ ಅಗೆಯುವ ಪ್ರಕರಣವನ್ನು ಉಲ್ಲೇಖಿಸಿದ್ದರು.

Related Stories

No stories found.
Kannada Bar & Bench
kannada.barandbench.com