ಗುಜರಾತ್‌ ಹೈಕೋರ್ಟ್‌ನಲ್ಲಿ ಕಲಾಪದ ವೇಳೆ ನ್ಯಾಯಮೂರ್ತಿಗಳ ನಡುವೆ ಚಕಮಕಿ: ಕ್ಷಮೆ ಕೋರಿದ ನ್ಯಾ. ಬಿರೇನ್‌ ವೈಷ್ಣವ್‌

ಸೋಮವಾರ ವಿಚಾರಣೆಯ ವೇಳೆ ಪ್ರಕರಣದ ಆದೇಶ ಬರೆಸುವ ಸಂದರ್ಭದಲ್ಲಿ ನ್ಯಾ.ಭಟ್‌ ಅವರು ಹಿರಿಯ ನ್ಯಾ. ವೈಷ್ಣವ್‌ ಕಿವಿಯಲ್ಲಿ ಆದೇಶಕ್ಕೆ ವಿರೋಧ ದಾಖಲಿಸಿದ್ದರು. ಇದಕ್ಕೆ ನ್ಯಾ. ವೈಷ್ಣವ್‌ ಅವರು ಕಟುವಾಗಿ ಪ್ರತಿಕ್ರಿಯಿಸಿ, ವಿಚಾರಣೆ ನಿಲ್ಲಿಸಿದ್ದರು.
Justice Biren Vaishnav and Justice Mauna Bhatt
Justice Biren Vaishnav and Justice Mauna Bhatt

ಮುಕ್ತ ನ್ಯಾಯಾಲಯದಲ್ಲಿ ಸೋಮವಾರ ನ್ಯಾಯಮೂರ್ತಿ ಮೌನಾ ಭಟ್‌ ಅವರ ವಿರುದ್ಧ ಕಿಡಿಕಾರಿದ್ದಕ್ಕೆ ಸಂಬಂಧಿಸಿದಂತೆ ಹಿರಿಯ ನ್ಯಾಯಮೂರ್ತಿ ಬಿರೇನ್‌ ವೈಷ್ಣವ್‌ ಅವರು ಬುಧವಾರ ಕ್ಷಮೆ ಕೋರಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸೋಮವಾರ ಆದೇಶ ಬರೆಸುವ ವೇಳೆ ನ್ಯಾ. ಮೌನಾ ಭಟ್‌ ಅವರು ಹಿರಿಯ ನ್ಯಾ. ಬಿರೇನ್ ವೈಷ್ಣವ್‌ ಅವರ ಕಿವಿಯಲ್ಲಿ ಗುಸುಗುಸು ಧ್ವನಿಯಲ್ಲಿ ಆದೇಶಕ್ಕೆ ವಿರೋಧ ದಾಖಲಿಸಿದ್ದರು. ಇದಕ್ಕೆ ನ್ಯಾ. ವೈಷ್ಣವ್‌ ಅವರು ಕಟುವಾಗಿ ಪ್ರತಿಕ್ರಿಯಿಸಿ, ವಿಚಾರಣೆ ನಿಲ್ಲಿಸಿದ್ದರು.

ವಿಚಾರಣೆ ಆರಂಭವಾಗುತ್ತಿದ್ದಂತೆ ಬುಧವಾರ ನ್ಯಾ. ವೈಷ್ಣವ್‌ ಅವರು ತಮ್ಮ ಕೋರ್ಟ್‌ನಲ್ಲಿ ಹಾಜರಿದ್ದ ವಕೀಲರು ಮತ್ತು ನ್ಯಾ. ಮೌನಾ ಭಟ್‌ ಅವರ ಕ್ಷಮೆ ಕೋರಿದರು. “ವಿಚಾರಣೆ ಆರಂಭಿಸುವುದಕ್ಕೂಮುನ್ನ, ಸೋಮವಾರ ನಡೆದ ಘಟನೆ ನಡೆಯಬಾರದಿತ್ತು. ಆ ಸಂದರ್ಭದಲ್ಲಿ ನನ್ನಿಂದ ಲೋಪವಾಗಿದ್ದು, ಇದಕ್ಕಾಗಿ ನಾನು ಕ್ಷಮೆ ಕೋರುತ್ತಿದ್ದೇನೆ. ಆ ಘಟನೆ ನಡೆಯಬಾರದಿತ್ತು” ಎಂದರು. ಬಳಿಕ ವಿಚಾರಣೆ ಎಂದಿನಂತೆ ಮುಂದುವರಿಯಿತು.

ಸೋಮವಾರ ಪ್ರಕರಣದ ವಿಚಾರಣೆಯ ಬಳಿಕ ನ್ಯಾ. ವೈಷ್ಣವ್‌ ಅವರು ಆದೇಶ ಬರೆಸುತ್ತಿದ್ದರು. ಈ ವೇಳೆ ನ್ಯಾ. ಮೌನಾ ಭಟ್‌ ಅವರು ನ್ಯಾ. ವೈಷ್ಣವ್‌ ಅವರ ಆದೇಶಕ್ಕೆ ಅಸಮ್ಮತಿಸಿ, ಕಿವಿಯಲ್ಲಿ ಏನೋ ಹೇಳಿದರು. ಇದಕ್ಕೆ ಕಠಿಣವಾಗಿ ಪ್ರತಿಕ್ರಿಯಿಸಿದ್ದ ನ್ಯಾ.ವೈಷ್ಣವ್‌ ಅವರು “ಭಿನ್ನ ಆದೇಶ” ಮಾಡುವಂತೆ ಹೇಳಿದ್ದರು. ಈ ಕುರಿತಾದ ಆಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು.

“ನೀವು ಭಿನ್ನ ನಿಲುವು ತಳೆಯಬಹುದು. ಇದಾಗಲೇ ಒಂದು ಪ್ರಕರಣದಲ್ಲಿ ನೀವು ಭಿನ್ನ ನಿಲುವು ತಳೆದಿದ್ದೀರಿ. ಇಲ್ಲಿಯೂ ಅದನ್ನು ಮುಂದುವರಿಸಬಹುದು” ಎಂದು ನ್ಯಾ. ಮೌನಾ ಭಟ್‌ ಕುರಿತು ನ್ಯಾ. ವೈಷ್ಣವ್‌ ಹೇಳಿದ್ದರು.

ಇದಕ್ಕೆ ನ್ಯಾ. ಮೌನಾ ಭಟ್‌ ಅವರು "ಇದು ಭಿನ್ನ ನಿಲುವು ತಳೆಯುವ ವಿಚಾರವಲ್ಲ” ಎಂದಿದ್ದರು. ಆಗ ನ್ಯಾ. ವೈಷ್ಣವ್‌ ಅವರು “ಹಾಗದರೆ ಪ್ರತ್ಯೇಕ ಆದೇಶ ಹೊರಡಿಸಿ. ಗುಸುಗುಸು ಎನ್ನಬೇಡಿ” ಎಂದಿದ್ದರು. ಅಲ್ಲದೇ, ಕಲಾಪವನ್ನು ಅರ್ಧಕ್ಕೇ ನಿಲ್ಲಿಸಿ ನ್ಯಾಯಾಲಯದ ಕೊಠಡಿಯಿಂದ ಹೊರ ನಡೆದಿದ್ದರು. ಈ ಘಟನೆಯ ಬಳಿಕ ಉಭಯ ನ್ಯಾಯಮೂರ್ತಿಗಳು ಭಿನ್ನ ಪೀಠದಲ್ಲಿ ಕುಳಿತಿದ್ದರು. ಇಂದು ಒಟ್ಟಾಗಿ ಒಂದೇ ಪೀಠದಲ್ಲಿ ವಿಚಾರಣೆ ಆರಂಭಿಸಿದರು. ವಿಚಾರಣೆಯ ಆರಂಭಕ್ಕೂ ಮುನ್ನ ನ್ಯಾ. ವೈಷ್ಣವ್‌ ಅವರು ಮುಕ್ತ ನ್ಯಾಯಾಲಯದಲ್ಲಿ ಘಟನೆಯ ಬಗ್ಗೆ ಕ್ಷಮೆ ಕೋರಿದರು.

Related Stories

No stories found.
Kannada Bar & Bench
kannada.barandbench.com