ಮಹಾರಾಜ್ ಚಿತ್ರ: ತಡೆಯಾಜ್ಞೆ ಹಿಂಪಡೆದ ಗುಜರಾತ್ ಹೈಕೋರ್ಟ್

ಮೇಲ್ನೋಟಕ್ಕೆ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಸಿನಿಮಾದಲ್ಲಿ ಕಂಡುಬಂದಿಲ್ಲ ಎಂದ ನ್ಯಾಯಮೂರ್ತಿ ಸಂಗೀತಾ ವಿಶೇನ್ ಅವರು ಚಿತ್ರ ಬಿಡುಗಡೆಗೆ ಅನುಮತಿ ನೀಡಿದರು.
Gujarat High Court with Maharaj Movie poster
Gujarat High Court with Maharaj Movie poster

ನಟ ಆಮಿರ್ ಖಾನ್ ಅವರ ಪುತ್ರ ಜುನೈದ್ ಖಾನ್ ಅಭಿನಯದ ಮಹಾರಾಜ್ ಚಿತ್ರ ಚಿತ್ರವನ್ನು ಓವರ್ ದಿ ಟಾಪ್ (OTT) ವೇದಿಕೆಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲು ಗುಜರಾತ್ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.

ಚಿತ್ರ ಜೂನ್ 18 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರ  ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಹುದು ಎಂಬ ಕಳವಳ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಜೂನ್ 12ರ ಮಧ್ಯಂತರ ಆದೇಶದ ಮೂಲಕ ಬಿಡುಗಡೆಗೆ ತಡೆ ನೀಡಲಾಗಿತ್ತು.

ಮೇಲ್ನೋಟಕ್ಕೆ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಸಿನಿಮಾದಲ್ಲಿ ಕಂಡುಬಂದಿಲ್ಲ ಎಂದ ನ್ಯಾಯಮೂರ್ತಿ ಸಂಗೀತಾ ವಿಶೇನ್ ಅವರು ಶುಕ್ರವಾರ ಮಧ್ಯಂತರ ತಡೆಯಾಜ್ಞೆ ರದ್ದುಗೊಳಿಸಿದರು.

ಈಗಾಗಲೇ ಕೇಂದ್ರೀಯ ಚಲನಚಿತ್ರ ಪ್ರಮಾಣಪತ್ರ ಮಂಡಳಿ (CBFC)  ಚಿತ್ರಕ್ಕೆ ಪ್ರಮಾಣಪತ್ರ ನೀಡಿದೆ ಎಂಬುದನ್ನು ನ್ಯಾಯಾಲಯ ಗಮನಿಸಿತು.

1862 ರ ಮಾನಹಾನಿ ಪ್ರಕರಣವೊಂದನ್ನು ಆಧರಿಸಿದ ಈ ಚಿತ್ರ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುತ್ತದೆ. ತಮ್ಮ ಪಂಗಡ ಮತ್ತು ಹಿಂದೂ ಧರ್ಮದ ವಿರುದ್ಧ ಹಿಂಸೆಯನ್ನು ಪ್ರಚೋದಿಸುತ್ತದೆ ಎಂದು ಪುಷ್ಟಿಮಾರ್ಗ್ ಪಂಗಡಕ್ಕೆ ಸೇರಿದ ಅರ್ಜಿದಾರರು ದೂರಿದ್ದರು.

ವಸಾಹತುಶಾಹಿ ಕಾಲಘಟ್ಟದಲ್ಲಿ ಬಾಂಬೆ ಸುಪ್ರೀಂ ಕೋರ್ಟ್‌ನ  ಬ್ರಿಟಿಷ್‌ ನ್ಯಾಯಮೂರ್ತಿಗಳು ನಿರ್ಧರಿಸಿದ 1862ರ ಪ್ರಕರಣವು ಹಿಂದೂ ಧರ್ಮ, ಭಗವಾನ್ ಕೃಷ್ಣ ಮತ್ತು ಭಕ್ತಿಗೀತೆ ಹಾಗೂ ಸ್ತೋತ್ರಗಳ ಬಗ್ಗೆ ನಿಂದನಾತ್ಮಕ ಹೇಳಿಕೆಗಳನ್ನು ಒಳಗೊಂಡಿದೆ. ಕಥಾವಸ್ತುವನ್ನು ಮುಚ್ಚಿಡುವುದಕ್ಕಾಗಿ ಟ್ರೇಲರ್‌ ಬಿಡುಗಡೆ ಮಾಡದೆ, ಪ್ರಚಾರ ಕಾರ್ಯಗಳಿಲ್ಲದೆ ಚಿತ್ರವನ್ನು ರಹಸ್ಯವಾಗಿ ಬಿಡುಗಡೆ ಮಾಡಲಾಗುತ್ತಿದೆ. ಸಿನಿಮಾ ಬಿಡುಗಡೆ ಮಾಡುವುದರಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಸರಿಪಡಿಸಲಾಗದಷ್ಟು ಹಾನಿಯಾಗುತ್ತದೆ. ಚಿತ್ರ ಬಿಡುಗಡೆಗೆ ತಡೆ ನೀಡುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ತುರ್ತು ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು.

Kannada Bar & Bench
kannada.barandbench.com