ಸುಲಿಗೆ ಪ್ರಕರಣದಲ್ಲಿ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆ ವಜಾ ಮಾಡುವಂತೆ ಮಾಜಿ ಸಹಾಯಕ ಸಾಲಿಸಿಟರ್ ಜನರಲ್ ಮತ್ತು ಹಿರಿಯ ವಕೀಲ ಐ ಎಚ್ ಸಯ್ಯದ್ ಅವರು ಸಲ್ಲಿಸಿದ್ದ ಮನವಿಯನ್ನು ಗುರುವಾರ ಗುಜರಾತ್ ಹೈಕೋರ್ಟ್ ವಜಾ ಮಾಡಿದೆ (ಐ ಎಚ್ ಸಯ್ಯದ್ ವರ್ಸಸ್ ಗುಜರಾತ್ ರಾಜ್ಯ).
ಬಲವಂತದ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ನಿರ್ದೇಶಿಸಬೇಕು ಎಂಬ ಕೋರಿಕೆಯನ್ನೂ ನ್ಯಾಯಮೂರ್ತಿ ಸಮೀರ್ ಜೆ ದವೆ ತಿರಸ್ಕರಿಸಿದ್ದಾರೆ. “ಸಿಆರ್‌ಪಿಸಿ ಸೆಕ್ಷನ್ 482ರ ಅಡಿ ಕ್ರಿಮಿನಲ್ ಪ್ರಕ್ರಿಯೆ/ ಎಫ್‌ಐಆರ್ ರದ್ದುಪಡಿಸುವುದಕ್ಕೆ ಯಾವುದೇ ಸಕಾರಣಗಳಿಲ್ಲ… ಕ್ರಿಮಿನಲ್ ಪ್ರಕ್ರಿಯೆಗೆ ತಡೆ ನೀಡುವುದು ಮತ್ತು ಬಲವಂತದ ಕ್ರಮಕೈಗೊಳ್ಳದಂತೆ ನಿರ್ದೇಶಿಸುವಂತೆ ಕೋರಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.
ತನಿಖೆ ಪೂರ್ಣಗೊಂಡಿಲ್ಲವಾದ್ದರಿಂದ ಈ ಹಂತದಲ್ಲಿ ಅರ್ಜಿದಾರರ ಮುಗ್ಧತೆಯ ತೀರ್ಮಾನಕ್ಕೆ ಬರುವುದು ಸೂಕ್ತವಲ್ಲ. “ಅರ್ಜಿದಾರರು ವಕೀಲರು ಎಂಬ ಕಾರಣಕ್ಕೆ ಪೊಲೀಸರು ತನಿಖೆ ನಡೆಸದಂತೆ ನಿರ್ಬಂಧ ವಿಧಿಸಲಾಗದು ಮತ್ತು ಅವರ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆ ವಜಾ ಮಾಡಲಾಗದು” ಎಂದು ಪೀಠ ಹೇಳಿದೆ.
“ಆರೋಪಗಳನ್ನು ತನಿಖೆ ಮಾಡಲು ಮತ್ತು ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ತನಿಖಾಧಿಕಾರಿಗೆ ಸ್ವಲ್ಪ ಸಮಯಾವಕಾಶ ನೀಡಬೇಕು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮೇ 30ರಂದು ಹೆಚ್ಚುವರಿ ಸತ್ರ ನ್ಯಾಯಾಲಯವು ಸಯ್ಯದ್ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಸಯ್ಯದ್ ಅವರು ಸುಲಿಗೆ, ಕ್ರಿಮಿನಲ್ ಪಿತೂರಿ, ಕಾನೂನುಬಾಹಿರವಾಗಿ ಒಟ್ಟುಗೂಡುವುದು, ಗಲಭೆ, ಉದ್ದೇಶಪೂರಿತವಾಗಿ ಹಾನಿ ಮಾಡುವುದು, ಉದ್ದೇಶಪೂರಿತವಾಗಿ ಅವಮಾನ ಮಾಡುವುದು, ಕ್ರಿಮಿನಲ್ ಬೆದರಿಕೆ ಮತ್ತು ಅಕ್ರಮ ಒತ್ತೆ ಇಟ್ಟುಕೊಳ್ಳುವ ಆರೋಪ ಎದುರಿಸುತ್ತಿದ್ದಾರೆ.