ಕಸ್ಟಡಿ ಸಾವು ಪ್ರಕರಣ: ಸಂಜೀವ್ ಭಟ್ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಗುಜರಾತ್ ಹೈಕೋರ್ಟ್

ಭಟ್ ಅವರಿಗೆ ವಿಧಿಸಲಾದ ಜೀವಾವಧಿ ಶಿಕ್ಷೆಯನ್ನು ನ್ಯಾಯಮೂರ್ತಿ ಅಶುತೋಷ್ ಶಾಸ್ತ್ರಿ ನೇತೃತ್ವದ ಪೀಠ ಎತ್ತಿಹಿಡಿದಿದೆ.
ಸಂಜೀವ್ ಭಟ್
ಸಂಜೀವ್ ಭಟ್

ಕಸ್ಟಡಿ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ತಮ್ಮನ್ನು ತಪ್ಪಿತಸ್ಥ ಎಂದು ಘೋಷಿಸಿ ಜಾಮ್ ನಗರ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ಪ್ರಶ್ನಿಸಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ಗುಜರಾತ್ ಹೈಕೋರ್ಟ್ ಮಂಗಳವಾರ ವಜಾ ಗೊಳಿಸಿದೆ.

ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ನ್ಯಾಯಮೂರ್ತಿಗಳಾದ ಅಶುತೋಷ್ ಶಾಸ್ತ್ರಿ ಮತ್ತು ಸಂದೀಪ್ ಭಟ್ ಅವರಿದ್ದ ವಿಭಾಗೀಯ ಪೀಠ ಎತ್ತಿಹಿಡಿದಿದೆ. 

"ವಿಚಾರಣಾ ನ್ಯಾಯಾಲಯವು ಮೇಲ್ಮನವಿದಾರರಿಗೆ ಸೂಕ್ತ ಶಿಕ್ಷೆ ವಿಧಿಸಿದೆ. ನಾವು ಈ ತೀರ್ಪು ಎತ್ತಿ ಹಿಡಿಯುತ್ತಿದ್ದು ಮೇಲ್ಮನವಿ ವಜಾಗೊಳಿಸುತ್ತಿದ್ದೇವೆ ಎಂದು ಪೀಠ ಹೇಳಿದೆ. 

ಆದೇಶದ ವಿವರವಾದ ಪ್ರತಿ ಇನ್ನಷ್ಟೇ ದೊರೆಯಬೇಕಿದೆ.

ಭಟ್ ಅವರು ಜಾಮ್ ನಗರ್ ಜಿಲ್ಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ನಡೆದ ಘಟನೆ ಇದಾಗಿದೆ.

ಭಟ್ ಅವರು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ನಡೆಸಿದ ತೀವ್ರ ಟೀಕೆಯಿಂದಾಗಿ ದೇಶದ ಗಮನ ಸೆಳೆದಿದ್ದರು. ಪ್ರಸಕ್ತ ಆದೇಶ ಭಟ್‌ ಅವರ ಪಾಲಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ.

ಪ್ರಕರಣದ ಹಿನ್ನೆಲೆ:

ಬಿಜೆಪಿ ನಾಯಕ ಎಲ್‌ ಕೆ ಅಡ್ವಾಣಿಯವರು 1990ರಲ್ಲಿ ರಥಯಾತ್ರೆ ಕೈಗೊಂಡಿದ್ದ ವೇಳೆ ಗುಜರಾತ್‌ನಲ್ಲಿ ವ್ಯಾಪಕ ಕೋಮುಗಲಭೆಗಳು ಸಂಭವಿಸಿದ್ದವು. ಈ ವೇಳೆ ಭಟ್‌ ಜಾಮ್‌ನಗರದ ಹೆಚ್ಚುವರಿ ಎಸ್‌ಪಿಯಾಗಿದ್ದರು. ಕೋಮುಗಲಭೆ ಸಂದರ್ಭವೊಂದರಲ್ಲಿ ಅವರು ಭಯೋತ್ಪಾದಕ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳ (ತಡೆ) ಕಾಯಿದೆ (ಟಾಡಾ) ಅಡಿಯಲ್ಲಿ ಸುಮಾರು 133 ಜನರನ್ನು ಬಂಧಿಸಿದ್ದರು. ಇವರಲ್ಲಿ ಓರ್ವ ವ್ಯಕ್ತಿ ಕಸ್ಟಡಿಯಲ್ಲಿ ಸಾವಿಗೀಡಾಗಿದ್ದ. ಭಟ್‌ ಮತ್ತವರ ಸಹಚರರು ನೀಡಿದ ಹಿಂಸೆಯಿಂದಾಗಿ ಕಸ್ಟಡಿ ಸಾವು ಸಂಭವಿಸಿತ್ತು ಎನ್ನುವುದು ಭಟ್ ವಿರುದ್ಧ ಇರುವ ಆರೋಪವಾಗಿದೆ.

Kannada Bar & Bench
kannada.barandbench.com